ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಬಿಲಿಯರ್ಡ್ಸ್ 2013 ಸೆಮೀಸ್‌ಗೆ ಕಾಲಿಟ್ಟ ಅಲೋಕ್, ರೂಪೇಶ್

Mainashree
Updated On : 6 Apr 2013, 12:17 pm

ಇಂದೋರ್: ಮಾಜಿ ಚಾಂಪಿಯನ್ ಅಲೋಕ್ ಕುಮಾರ್ ಅವರು ಇಲ್ಲಿ ನಡೆಯುತ್ತಿರುವ 12ನೇ ಒಎನ್‌ಜಿಸಿ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಹಂತದಲ್ಲಿ ಅವರು ಭಾರತದವರೇ ಆದ ಬಿ. ಭಾಸ್ಕರ್ ಅವರನ್ನು 4-3 ಅಂತರದಲ್ಲಿ ಸೋಲಿಸಿ, ಸೆಮಿಫೈನಲ್ ಪ್ರವೇಶಿಸಿದರು.
ಲೀಗ್ ಹಂತದ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ 3ನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಅಲೋಕ್,  ಪಂದ್ಯಾವಳಿಯ ಆರನೇ ಶ್ರೇಯಾಂಕದವರಾದ ಭಾರತೀಯ ಆಟಗಾರ ಬಿ. ಭಾಸ್ಕರ್ ಅವರನ್ನು ಎದುರಿಸಿದ್ದರು.
ರೂಪೇಶ್ ಸೆಮೀಸ್‌ಗೆ: ಶುಕ್ರವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ರೂಪೇಶ್ ಶಾ ಜಯಗಳಿಸಿ, ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಮ್ಯಾನ್ಮಾರ್‌ನ ನೇ ತ್ವೇ ಡೊ ಅವರ ವಿರುದ್ಧ ಸೆಣೆಸಿದ ರೂಪೇಶ್ ಶಾ, 4-3 ಅಂತರದಲ್ಲಿ ಜಯ ಗಳಿಸಿ, ಸೆಮಿಫೈನಲ್‌ಗೆ ಕಾಲಿಟ್ಟರು.
ಇತರೆ ಫಲಿತಾಂಶ: ಶುಕ್ರವಾರವೇ ನಡೆದ ಮತ್ತೆರಡು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ, ಥಾಯ್ಲೆಂಡ್‌ನ ಥವಾರ್ ಸುಜಾರಿಥುರ್‌ಕರ್ನ್ ಹಾಗೂ ಪ್ರಪುಟ್ ಚೈತನ್‌ಕುಸನ್ ಜಯಗಳಿಸಿ, ಉಪಾಂತ್ಯಕ್ಕೆ ಕಾಲಿಟ್ಟಿದ್ದಾರೆ.
ಥವಾರ್ ಅವರು, ವಿಯೆಟ್ನಾಂನ ಗುಯೆನ್ ನನ್‌ಬಿನ್ ಅವರ ವಿರುದ್ಧ 4-1ರ ಅಂತರದಲ್ಲಿ ಜಯ ಸಾಧಿಸಿದರೆ, ಪ್ರಪುಟ್ ಅವರು ಭಾರತದ ಕೆ. ವೆಂಕಟೇಶಮ್ ಅವರ ವಿರುದ್ಧ 4-0 ಅಂತರದಲ್ಲಿ ಗೆಲುವು ದಾಖಲಿಸಿದರು.   
ಸೆಮಿಫೈನಲ್ ಹಣಾಹಣಿ: ಸೆಮಿಫೈನಲ್ ಹಂತದಲ್ಲಿ ಅಲೋಕ್ ಹಾಗೂ ಪ್ರಪುಟ್ ಮುಖಾಮುಖಿಯಾದರೆ, ಮತ್ತೊಂದು ಪಂದ್ಯದಲ್ಲಿ ರೂಪೇಶ್ ಶಾ ಹಾಗೂ ಥವಾರ್ ಸೆಣೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement