ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜಯದ ಸಂಭ್ರಮ ಆಚರಿಸಿದ ಭಾರತ

ಲಿಯಾಂಡರ್ ಪೇಸ್ ಅನುಭವ ಮತ್ತು ಯುವ ಆಟಗಾರ ಸನಮ್ ಸಿಂಗ್ ಚುರುಕಿನ ಹೊಡೆತದ ಸಮ್ಮಿಳನದೊಂದಿಗೆ ಇಂಡೋನೇಷ್ಯಾ...

Mainashree
Updated On : 7 Apr 2013, 12:08 pm

ಬೆಂಗಳೂರು: ಲಿಯಾಂಡರ್ ಪೇಸ್ ಅನುಭವ ಮತ್ತು ಯುವ ಆಟಗಾರ ಸನಮ್ ಸಿಂಗ್ ಚುರುಕಿನ ಹೊಡೆತದ ಸಮ್ಮಿಳನದೊಂದಿಗೆ ಇಂಡೋನೇಷ್ಯಾ ವಿರುದ್ಧದ ಏಷ್ಯಾ ಓಶೇನಿಯಾ ಮೊದಲ ಹಂತದ ಡೇವಿಸ್ ಕಪ್ ಡಬಲ್ಸ್ ಪಂದ್ಯದಲ್ಲಿ ಭಾರತ ಅದ್ಭುತ ಜಯ ಸಾಧಿಸಿತು.
ಈ ಜಯದೊಂದಿಗೆ ಭಾರತ ಏಷ್ಯಾ ಓಶೇನಿಯಾ ಮೊದಲ ಹಂತದ ಗುಂಪಿನಲ್ಲೇ ಉಳಿದುಕೊಂಡಿದೆ. ಭಾರತದ ಲಿಯಾಂಡರ್ ಪೇಸ್ ಮತ್ತು ಸನಮ್ ಸಿಂಗ್ ಜೋಡಿ ಶನಿವಾರ ನಡೆದ ಪಂದ್ಯದಲ್ಲಿ ಡೇವಿಡ್ ಅಗುಂಗ್ ಸುಸಾಂತೊ ಮತ್ತು ಎಲ್ಬರ್ಟ್ ಸೀ ಜೋಡಿಯನ್ನು 6-2, 6-1, 6-4 ನೇರ ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿತು. ಇದೇ ಮೊದಲ ಬಾರಿ ಜತೆಯಾಗಿ ಡೇವಿಸ್‌ಕಪ್‌ನಲ್ಲಿ ಆಡಿದ ಪೇಸ್ ಮತ್ತು ಸನಮ್ ಸಿಂಗ್ ಎದುರಾಳಿಯನ್ನು ಸುಲಭವಾಗಿ ಮಣಿಸುವಲ್ಲಿ ಯಶಸ್ವಿಯಾದರು.
ಶುಕ್ರವಾರ ನಡೆದ ಮೊದಲ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಸೋಮ್‌ದೇವ್ ದೇವ್‌ವರ್ಮನ್ ಮತ್ತು ಯೂಕಿ ಭಾಂಬ್ರಿ ಜಯ ಸಾಧಿಸಿದ್ದರು. ಹೀಗಾಗಿ ಭಾರತ ಪಂದ್ಯಾವಳಿಯಲ್ಲಿ 3-0 ಅಂತರದಿಂದ ಜಯ ಕಂಡುಕೊಂಡಿದೆ.
ಲಿಯಾಂಡರ್ ಪೇಸ್ ಅವರಿಗೆ 23ನೇ ವರ್ಷ ವೃತ್ತಿ ಜೀವನದಲ್ಲಿ, ಇದು 50ನೇ ಡೇವಿಸ್ ಕಪ್ ಪಂದ್ಯವಾಗಿತ್ತು.
ಇದುವರೆಗೂ ಡೇವಿಸ್‌ಕಪ್‌ನಲ್ಲಿ ಆರು ಬಾರಿ ಇಂಡೋನೇಷ್ಯಾ ವಿರುದ್ಧ ಆಡಿರುವ ಭಾರತ, ಆರು ಬಾರಿಯೂ ಜಯ ಸಾಧಿಸಿದೆ.
ಭಾರತದ ಜೋಡಿ ಮೊದಲೆರಡು ಸೆಟ್‌ಗಳಲ್ಲಿ ಸುಲಭವಾಗಿ ಜಯ ಕಂಡುಕೊಂಡಿತು. ಆದರೆ, ಮೂರನೇ ಸೆಟ್‌ನಲ್ಲಿ ತೀವ್ರ ಪೈಪೋಟಿಯನ್ನು ನಡೆಸಿತು. ಅಲ್ಲದೆ ಮೂರನೇ ಸೆಟ್‌ನ ಮೊದಲೆರಡು ಗೇಮ್‌ಗಳು ತುಂಬಾ ದೀರ್ಘ ಕಾಲದವರೆಗೆ ನಡೆದಿದ್ದು, ಪ್ರೇಕ್ಷಕರಲ್ಲಿ ಕೊಂಚ ಕುತೂಹಲ ಮೂಡಿಸಿತ್ತು. ಒಂದು ಹಂತದಲ್ಲಿ 4-4 ಅಂತರದಿಂದ ಸಮಬಲ ಸಾಧಿಸಿದ್ದ ಇಂಡೋನೇಷ್ಯಾ ಜೋಡಿ, ನೇರ ಸೆಟ್‌ಗಳಿಂದ ಸೋಲುಪ್ಪಿಕೊಳ್ಳುವುದಿಲ್ಲ ಎಂಬ ಸೂಚನೆ ನೀಡಿತ್ತು. ಆದರೆ, ನಂತರ ಸತತವಾಗಿ ಎರಡು ಗೇಮ್‌ಗಳಲ್ಲಿ ಜಯ ಕಂಡುಕೊಂಡ ಭಾರತದ ಜೋಡಿ ವಿಜಯದ ಕೇಕೆ ಹಾಕಿತು. ಪಂದ್ಯದಲ್ಲಿ ಮೂರನೇ ಸೆಟ್‌ನಲ್ಲಿ ಡೇವಿಡ್ ಅಗುಂಗ್ ಸುಸಾಂತೊ ಮತ್ತು ಎಲ್ಬರ್ಟ್ ಸೀ ತಿರುಗಿಬೀಳಲು ಯತ್ನಿಸಿದರು. ಆದರೆ, ಪಂದ್ಯ ಕೈಮೀರಿ ಹೋಗಿತ್ತು.
ಭಾನುವಾರ ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯಲಿದ್ದು, ಸೋಮ್‌ದೇವ್ ಅವರು ಕ್ರಿಸ್ಟೋಫರ್ ರುಂಗ್‌ಕತ್ ಅವರನ್ನು ಮತ್ತು ಯೂಕಿ ಭಾಂಬ್ರಿ ವಿಸ್ನು ಆದಿ ನುಗ್ರುಹೋ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement