ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಒಗ್ಗಟ್ಟಾದ ಟೆನಿಸ್ ಆಟಗಾರರು

Mainashree
Updated On : 8 Apr 2013, 12:12 pm

ಬೆಂಗಳೂರು: ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ವಿರುದ್ಧ ಈ ಮುಂಚೆ ಬಂಡಾಯವೆದ್ದಿದ್ದ ಮತ್ತು ತಮ್ಮಲ್ಲೇ ಭಿನ್ನಾಭಿಪ್ರಾಯಗಳಿದ್ದ ಟೆನಿಸ್ ಆಟಗಾರರು ಈಗ ಒಗ್ಗಟ್ಟಾಗಿದ್ದಾರೆ.
ಡೇವಿಸ್ ಕಪ್ ಮಾಜಿ ಆಟಗಾರ ಜೈದೀಪ್ ಮುಖರ್ಜಿ ಭಾರತ ಟೆನಿಸ್ ಆಟಗಾರರ ಸಂಸ್ಥೆಯ (ಐಟಿಪಿಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ಸೋಮ್‌ದೇವ್ ದೇವ್‌ವರ್ಮನ್ ಸಂಸ್ಥೆಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಸಂಸ್ಥೆಯ ಮೊದಲ ಸಾಮಾನ್ಯ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಐಟಿಪಿಎ ಈ ವಿಷಯವನ್ನು ಪ್ರಕಟಿಸಿತು.
ಎಐಟಿಎ ಉಪಾಧ್ಯಕ್ಷರಾಗಿರುವ ಕಾರ್ತಿ ಚಿದಂಬರಂ ಸಂಸ್ಥೆಯ ಕಾರ್ಯದರ್ಶಿಗಳಾಗಿದ್ದಾರೆ ಎಂದು ಅಧ್ಯಕ್ಷ ಮುಖರ್ಜಿ ತಿಳಿಸಿದರು.
ರೋಹನ್ ಬೋಪಣ್ಣ, ಎನ್ರಿಕೋ ಪಿಪೆರ್ನೋ, ಮನೀಶ್ ಮಲ್ಹೋತ್ರಾ, ಪ್ರಹ್ಲಾದ್ ಶ್ರೀನಾಥ್, ಆದಿತ್ಯ ಸಚದೇವ್ ಹಾಗೂ ಮುಸ್ತಫಾ ಘೋಸ್ ಐಟಿಪಿಎ ಇತರ ಸದಸ್ಯರಾಗಿದ್ದಾರೆ.
ಆಟವಾಡಲು ಉತ್ತಮ ವ್ಯವಸ್ಥೆಯನ್ನು ಒದಗಿಸಿಕೊಡುವಂತೆ ಬೇಡಿಕೆ ಇಟ್ಟು ಅಗ್ರ 11 ಆಟಗಾರರು ಬಂಡಾಯವೆದ್ದಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಡೇವಿಸ್ ಕಪ್ ಪಂದ್ಯಕ್ಕೆ ಈ 11 ಆಟಗಾರರು ಅಲಭ್ಯರಾಗಿದ್ದ ಹಿನ್ನೆಲೆಯಲ್ಲಿ ಎಐಟಿಎ ಆಟಗಾರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದೆ.
ಬಂಡಾಯದಿಂದ ದೂರ ಉಳಿದಿದ್ದ ಪೇಸ್, ಆಟಗಾರರ ಸಂಸ್ಥೆಯ ಸದಸ್ಯರಾಗಿರುವುದು ಈಗ ಅಚ್ಚರಿಗೆ ಕಾರಣವಾಗಿದೆ.
'ದೇಶದ ಯುವ ಟೆನಿಸ್ ಆಟಗಾರರಿಗೆ ನೆರವಾಗುವುದು ನಮ್ಮ ಮೂಲ ಉದ್ದೇಶ. ಯುವ ಆಟಗಾರರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸುತ್ತೇವೆ. ಭಾರತದ ಆಟಗಾರರು ಆರ್ಥಿಕವಾಗಿ ಹೇಗೆ ಸಭಲರಾಗಲು ಸಾಧ್ಯ ಎಂಬುದನ್ನು ಮಾಜಿ ಮತ್ತು ಹಾಲಿ ಆಟಗಾರರನ್ನೊಳಗೊಂಡ ಐಟಿಪಿಎ ಯೋಚಿಸುತ್ತಿದೆ' ಎಂದು ಮುಖರ್ಜಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement