ಕ್ಲೀನ್ ಸ್ವೀಪ್ ಸಾಧಿಸಿದ ಭಾರತ
ರಿವರ್ಸ್ ಸಿಂಗಲ್ಸ್ ಪಂದ್ಯಗಳಲ್ಲಿ ಇಂಡೋನೇಷ್ಯಾ ಆಟಗಾರರು ನೀರಸ ಪ್ರದರ್ಶನ ನೀಡುವುದರೊಂದಿಗೆ, ಡೇವಿಸ್ ಕಪ್ ಏಷ್ಯಾ...
ಬೆಂಗಳೂರು: ರಿವರ್ಸ್ ಸಿಂಗಲ್ಸ್ ಪಂದ್ಯಗಳಲ್ಲಿ ಇಂಡೋನೇಷ್ಯಾ ಆಟಗಾರರು ನೀರಸ ಪ್ರದರ್ಶನ ನೀಡುವುದರೊಂದಿಗೆ, ಡೇವಿಸ್ ಕಪ್ ಏಷ್ಯಾ ಓಶೇನಿಯಾ ಮೊದಲ ಗುಂಪಿನ ಪಂದ್ಯಾವಳಿಯಲ್ಲಿ ಭಾರತ 5-0 ಅಂತರದಿಂದ ಕ್ಲೀನ್ಸ್ವೀಪ್ ಜಯ ಸಾಧಿಸಿತು.
ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಭಾನುವಾರ ನಡೆದ ರಿವರ್ಸ್ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಸೋಮ್ದೇವ್ ದೇವ್ವರ್ಮನ್ ಅವರು ಡೇವಿಡ್ ಅಗುಂಗ್ ಸುಸಾಂತೊ ಅವರನ್ನು 6-3, 6-1 ನೇರ ಸೆಟ್ಗಳ ಮೂಲಕ ವಿಜಯ ಸಾಧಿಸಿದರು. ಎರಡನೇ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಯೂಕಿ ಭಾಂಬ್ರಿ ಸಹ ವಿಸ್ನು ಆದಿ ನುಗ್ರುಹೋ ಅವರನ್ನು 6-0, 6-1 ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು.
ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಸೋಮ್ದೇವ್ ಬದಲಿಗೆ, ಸನಮ್ ಸಿಂಗ್ ಆಡಿಸಲು ತಂಡದ ಆಟವಾಡದ ನಾಯಕ ಎಸ್.ಪಿ ಮಿಶ್ರಾ ಮನ ಮಾಡಿದ್ದರು. ಆದರೆ, ಚಂಡೀಗಡದ ಯುವ ಆಟಗಾರ ಕೈ ನೋವಿನಿಂದ ಬಳಲುತ್ತಿದ್ದರಿಂದ, ಸೋಮ್ದೇವ್ ಅಂಗಣಕ್ಕಿಳಿಯುವುದು ಅನಿವಾರ್ಯವಾಯಿತು.
ತಮ್ಮ ಅಂತಿಮ ಪಂದ್ಯಾವಳಿಯಲ್ಲಿ ತಂಡ 5-0 ಅಂತರದಿಂದ ಜಯ ಸಾಧಿಸಿರುವುದು ಮಿಶ್ರಾ ಅವರಿಗೆ ನೆಮ್ಮದಿ ತಂದಿದೆಯಂತೆ. ಬರುವ ವರ್ಷದ ಸ್ಪರ್ಧೆಗಳು ಆರಂಭವಾಗುವುದರೊಳಗೆ ಆಟವಾಡದ ನೂತನ ನಾಯಕನನ್ನು ಎಐಟಿಎ ನೇಮಕ ಮಾಡಲಿದೆ.
ಈ ಜಯದೊಂದಿಗೆ ಭಾರತ ತಂಡ ಡೇವಿಸ್ ಕಪ್ ಏಷ್ಯಾ ಓಶೇನಿಯಾ ಮೊದಲ ಗುಂಪಿನಲ್ಲೇ ಉಳಿದುಕೊಳ್ಳಲಿದೆ. 2014ರಲ್ಲಿ ನಡೆಯಲಿರುವ ಪಂದ್ಯಾವಳಿಗಳಲ್ಲಿ ಗೆಲ್ಲುವ ಮೂಲಕ ಅದು ವಿಶ್ವ ಗುಂಪಿಗೆ ಅರ್ಹತೆ ಪಡೆದುಕೊಳ್ಳಬೇಕಾಗಿದೆ.
ಮೊದಲ ಪಂದ್ಯದ ಮೊದಲ ಸೆಟ್ನಲ್ಲಿ ಸೋಮ್ದೇವ್, ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಕೆಲ ಹೊತ್ತು ತಗೆದುಕೊಂಡರು. ಹೀಗಾಗಿ ನಿಧಾನವಾಗಿ ಹಿಡಿತ ಸಾಧಿಸುವ ಮೂಲಕ 6-3 ಅಂತರದಿಂದ ಜಯ ಕಂಡುಕೊಂಡರು. 2ನೇ ಸೆಟ್ನಲ್ಲಿ ಸೋಮ್ದೇವ್ ಸುಲಭವಾಗಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ಪಂದ್ಯದ ಆರಂಭದಲ್ಲಿ ಅಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಸೋಮ್ದೇವ್ ಪರ ಘೋಷಣೆಗಳನ್ನು ಕೂಗುವುದರೊಂದಿಗೆ, 4-2 ಅಂತರದಿಂದ ಮುನ್ನಡೆ ಕಂಡುಕೊಂಡರು.
ನಂತರ ಸಹ 8ನೇ ಗೇಮ್ ಉಳಿಸಿಕೊಳ್ಳುವಲ್ಲಿ ಇಂಡೋನೇಷ್ಯಾ ಆಟಗಾರ ಯಶಸ್ವಿಯಾದ. ಆದರೆ, ಆಗ ಬಿರುಸಿನ ಹೋರಾಟ ಆರಂಭಿಸಿದ ಸೋಮ್ದೇವ್ 9ನೇ ಗೇಮ್ನಲ್ಲಿ ಜಯ ಕಾಣುವಲ್ಲಿ ಯಶಸ್ವಿಯಾದರು. ಆಗ ಎದುರಾಳಿ ಡೇವಿಡ್ ಆಟ ನಡೆಯಲಿಲ್ಲ.
ಇನ್ನು 2ನೇ ಪಂದ್ಯದಲ್ಲಿ ಯೂಕಿ ಭಾಂಬ್ರಿ ಜಯ ಸಾಧಿಸಲು ಹೆಚ್ಚಿನ ಶ್ರಮ ಹಾಕಲಿಲ್ಲ. ಎದುರಾಳಿ ವಿಸ್ನು ನಿರಂತರವಾಗಿ ತಪ್ಪುಗಳನ್ನು ಮುಂದುವರಿಸುತ್ತಾ ಹೋಗಿದ್ದು, ಯೂಕಿಗೆ ಸುಲಭ ಜಯ ತಂದುಕೊಟ್ಟಿತು.