ಕೆಕೆಆರ್ಗೆ ಸ್ಪರ್ಧಾತ್ಮಕ ಗುರಿ ನೀಡಿದ ರಾಯಲ್ಸ್
ಜೈಪುರ: ಆರಂಭಿಕರ ವೈಫಲ್ಯದ ಹೊರತಾಗಿಯೂ ಬ್ರಾಡ್ ಹಾಡ್ಜ್ ಅವರ ಸಮಯೋಜಿತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿದೆ. ಈ ಎರಡು ತಂಡಗಳು ತಮ್ಮ ಮೊದಲೆರಡು ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿದ್ದು, ಗೆಲುವಿನ ಲಯ ಮುಂದುವರಿಸಲು ಎದುರು ನೋಡುತ್ತಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ಗಳಿಸಿತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಕೆಕೆಆರ್ ಇನಿಂಗ್ಸ್ ಆರಂಭವಾಗಿರಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಶೇನ್ ವ್ಯಾಟ್ಸನ್ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ವಿಫಲರಾದರು. 10 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್ ಕೇವಲ 5 ರನ್ಗಳಿಸಿ ಔಟಾದರು.
ನಂತರ ಬಂದ ರಾಹುಲ್ ದ್ರಾವಿಡ್, ರಹಾನೆ ಜತೆಗೂಡಿ ತಂಡಕ್ಕೆ 35 ರನ್ಗಳ ಜತೆಯಾಟ ನೀಡಿದರು. ಈ ವೇಳೆ 17 ರನ್ಗಳಿಸಿದ್ದ ದ್ರಾವಿಡ್, ರಜತ್ ಭಾಟಿಯಾ ಎಸೆತದಲ್ಲಿ ಬೌಲ್ಡ್ ಆದರು.
ಈ ವೇಳೆ ಕಣಕ್ಕಿಳಿದ ಸ್ಟುವರ್ಟ್ ಬಿನ್ನಿ 11 ಎಸೆತಗಳಲ್ಲಿ 14 ರನ್ಗಳಿಸಿದರು. ರತನ್ ಶುಕ್ಲಾ ಎಸೆತದಲ್ಲಿ ಎಲ್ಬಿ ಡಬ್ಲ್ಯೂ ಬಲೆಗೆ ಬಿದ್ದ ಬಿನ್ನಿ, ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ಅನುಭವಿ ಬ್ಯಾಟ್ಸ್ಮನ್ ಬ್ರಾಡ್ ಹಾಡ್ಜ್, ರಹಾನೆ ಜತೆಗೂಡಿ 38 ರನ್ಗಳ ಜತೆಯಾಟವಾಡಿದರು. ಈ ವೇಳೆ 36 ರನ್ಗಳಿಸಿದ್ದ ರಹಾನೆ, ನಾರಾಯಣ್ ಎಸೆತದಲ್ಲಿ ಎಲ್ಬಿ ಡಬ್ಲ್ಯೂ ಆದರು. ನಂತರದ ಬಂದ ಕೂಪರ್, ಸ್ಟಂಪ್ ಔಟ್ ಆಗುವ ಮೂಲಕ 2ನೇ ಎಸೆತದಲ್ಲೇ ನಿರ್ಗಮಿಸಿದರು. ನಂತರ ಹಾಡ್ಜ್ ಜತೆಯಾದ ಯಾಗ್ನಿಕ್ ತಂಡಕ್ಕೆ 35 ರನ್ಗಳ ಜತೆಯಾಟ ನೀಡಿದರು. ಈ ವೇಳೆ 16 ರನ್ಗಳಿಸಿದ ಯಾಗ್ನಿಕ್ ರನೌಟ್ ಆದರು. ಅಂತಿಮವಾಗಿ ರಾಯಲ್ಸ್ 144 ರನ್ಗಳಿಸಿತು.
ಸ್ಕೋರ್ ಬೋರ್ಡ್
ರಾಜಸ್ಥಾನ್ ರಾಯಲ್ಸ್ 144/6 (20 ಓವರ್)
ವ್ಯಾಟ್ಸನ್ ಸಿ ಮಾರ್ಗನ್ ಬಿ ಬ್ರೆಟ್ ಲೀ 5 (10), ರಹಾನೆ ಎಲ್ಬಿ ಡಬ್ಲ್ಯೂ ಬಿ ನಾರಾಯಣ್ 36 (34), ದ್ರಾವಿಡ್ ಬಿ ಭಾಟಿಯಾ 17 (20), ಬಿನ್ನಿ ಎಲ್ಬಿ ಡಬ್ಲ್ಯೂ ಬಿ ರತನ್ ಶುಕ್ಲಾ 14 (11), ಹಾಡ್ಜ್ ಅಜೇಯ 46 (31), ಕೂಪರ್ ಸ್ಟಂಪ್ ಬಿಸ್ಲಾ ಬಿ ನಾರಾಯಣ್ 0 (1), ಯಾಗ್ನಿಕ್ ರನೌಟ್ 16 (11), ಶ್ರೀಶಾಂತ್ ಅಜೇಯ 1 (2), ಇತರೆ 9
ವಿಕೆಟ್ ಪತನ: 1-11, 2-46, 3-63, 4-101, 5-101, 6-137
ಬೌಲಿಂಗ್: ಬ್ರೆಟ್ ಲೀ 4-0-20-1, ಶಮಿ 3-0-26-0, ನಾರಾಯಣ್ 4-0-28-2, ಕಾಲಿಸ್ 4-0-28-0, ಭಾಟಿಯಾ 3-0-21-1, ಶುಕ್ಲಾ 2-0-14-1