ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಜಯದ ಸಿರಿ ತಂದ ಕೌರ್

ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿತು.

Mainashree
Updated On : 9 Apr 2013, 12:14 pm

ಅಹ್ಮದಾಬಾದ್: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಶತಕಾರ್ಧ ಹಾಗೂ ಏಕ್ತಾ ಬಿಶ್ತ್ ಅವರ ಆಕ್ರಮಣಕಾರಿ ಬೌಲಿಂಗ್ (27/3) ನೆರವಿನಿಂದಾಗಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಬಾಂಗ್ಲಾದೇಶ ಮಹಿಳೆಯರ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿತು.
ಈ ಪಂದ್ಯದ ಜಯದೊಂದಿಗೆ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ, 9 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತ್ತು. ನಂತರ, ಬ್ಯಾಟಿಂಗ್‌ಗೆ ಇಳಿದ ಭಾರತ, 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ, ಜಯದ ನಗೆ ಬೀರಿತು.
ಟಾಸ್ ಗೆದ್ದಿದ್ದ ಬಾಂಗ್ಲಾದೇಶ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಇನಿಂಗ್ಸ್‌ಗೆ ಬೇಕಾದ ಭದ್ರ ಬುನಾದಿ ಹಾಕುವಲ್ಲಿ ಆರಂಭಿಕರಾದ ಶುಖ್‌ತಾರಾ ರೆಹಮಾನ್ ಹಾಗೂ ಆಯೇಷಾ ಅಖ್ತರ್ ಜೋಡಿ ಎಡವಿತು. ಮೊದಲ ವಿಕೆಟ್‌ಗೆ ಈ ಇಬ್ಬರೂ ಕೇವಲ 17 ರನ್ ಪೇರಿಸಿದರಷ್ಟೇ. ಇನಿಂಗ್ಸ್‌ನ 4ನೇ ಓವರ್‌ನಲ್ಲಿ ಶುಖ್‌ತಾರಾ ರನೌಟ್ ಆಗುವ ಮೂಲಕ ಈ ಜೋಡಿ ಮುರಿಯಿತು.
ನಂತರ ಬಂದ, ರುಮಾನಾ ಅಹ್ಮದ್, ಕ್ರೀಸ್‌ನಲ್ಲಿದ್ದ ಆಯೇಷಾ ಅಖ್ತರ್ ಜೊತೆ 2ನೇ ವಿಕೆಟ್‌ಗೆ ಕೇವಲ 10 ರನ್ ಸೇರಿಸುವಷ್ಟರಲ್ಲಿ ಆಯೇಷಾ, ಸುಬ್ಬಲಕ್ಷ್ಮೀ ಶರ್ಮಾ ಅವರಿಗೆ ವಿಕೆಟ್ ಒಪ್ಪಿಸಿದರು.
ಆರಂಭದಲ್ಲೇ ಬಿದ್ದ ಈ ಎರಡೂ ಹೊಡೆತಗಳಿಂದ ತತ್ತರಿಸಿದ್ದ ಬಾಂಗ್ಲಾದ ಇನಿಂಗ್ಸ್‌ಗೆ ಕೊಂಚ ಚೇತರಿಕೆ ತಂದಿದ್ದು, ರುಮಾನಾ - ಲತಾ ಮೊಂದಾಲ್. ಈ ಜೋಡಿ, 3ನೇ ವಿಕೆಟ್‌ಗೆ 57 ರನ್ ಸೇರಿಸಿತು. ಆದರೆ, 24ನೇ ಓವರ್‌ನಲ್ಲಿ ರುಮಾನಾ ಔಟಾಗುವ ಮೂಲಕ ಈ ಜೋಡಿ ಮುರಿಯಿತು. ಆಗ ತಂಡದ ಮೊತ್ತ 84. ತಂಡದ ಮೊತ್ತ 121 ರನ್ ಆಗಿದ್ದಾಗ, ಲತಾ ಔಟಾದರು.
ಇಲ್ಲಿಂದ ಮುಂದಕ್ಕೆ ಬಾಂಗ್ಲಾದೇಶ, ಬೇಗಬೇಗನೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ಬಿಶ್ತ್ ಬೊಂಬಾಟ್ ಬೌಲಿಂಗ್: ಬಾಂಗ್ಲಾದೇಶದ ಮಧ್ಯಮ ಕ್ರಮಾಂಕ ಬೇಗನೇ ಕುಸಿಯುವಂತೆ ಮಾಡುವಲ್ಲಿ ಭಾರತದ ಬೌಲರ್ ಏಕ್ತಾ ಬಿಶ್ತ್ ಪ್ರಮುಖ ಪಾತ್ರ ವಹಿಸಿದರು. ಏಳನೇ ಕ್ರಮಾಂಕದ ಆಟಗಾರ್ತಿ ಶಹನಾಜ್ ಪರ್ವೀನ್ ಅವರು ಸ್ಟಂಪ್ಡ್‌ಔಟ್ ಮಾಡುವಂತೆ ಬೌಲ್ ಮಾಡಿದ ಬಿಶ್ತ್, ಆನಂತರ, ಫಾತೀಮಾ ಕೌತುನ್ ಅವರನ್ನು ರನೌಟ್ ಮಾಡಿದರು. ಅದರ ಬೆನ್ನಿಗೇ, ಪನ್ನಾ ಘೋಷ್ ಹಾಗೂ ಜಹಾನರಾ ಆಲಂ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. 10 ಓವರ್‌ಗಳನ್ನು ಮಾಡಿದ ಬಿಶ್ತ್, 27 ರನ್ ನೀಡಿ, ಮೂರು ವಿಕೆಟ್ ಕಬಳಿಸಿದರಲ್ಲದೇ, ಒಂದು ರನೌಟ್ ಮಾಡಿ, ಬಾಂಗ್ಲಾದ ಮಧ್ಯಮ ಕ್ರಮಾಂಕದ ಕುಸಿತಕ್ಕೆ ಕಾರಣರಾದರು.
ಬಿಶ್ತ್ ಅವರು ಈ ಮೂರು ವಿಕೆಟ್‌ಗಳನ್ನು ಕಬಳಿಸುವ ಮುನ್ನವೇ, ಆರನೇ ವಿಕೆಟ್ ರೂಪದಲ್ಲಿ ಫರ್ಜಾನಾ ಹಕ್ ಅವರು ಕೇವಲ 1 ರನ್ ಗಳಿಸಿ, ಸ್ವಾಗತಿಕಾ ರಾತ್ ಅವರಿಗೆ ಕ್ಲೀನ್‌ಬೌಲ್ಡ್ ಆಗಿದ್ದು, ಬಾಂಗ್ಲಾ ಕುಸಿತಕ್ಕೆ ಮತ್ತೊಂದು ಪ್ರಮುಖ ಕಾರಣ.
ಅಂತಿಮವಾಗಿ, ಬಾಂಗ್ಲಾದೇಶ 50 ಓವರ್‌ಗಳಲ್ಲಿ 194 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಐದನೇ ಕ್ರಮಾಂಕದ ಸಲ್ಮಾ ಕೌತುನ್ ಅವರು, ಶತಕಾರ್ಧ (ಅಜೇಯ 75) ಗಳಿಸಿದ್ದು ಬಿಟ್ಟರೆ, ಮತ್ಯಾವ ಬ್ಯಾಟ್ಸ್‌ವುಮನ್‌ಗಳೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. ಅಂತಿಮ ಬ್ಯಾಟ್ಸ್‌ವುಮನ್ ನುಝಾತ್ ತಾಸ್ನಿಯಾ ಅವರು, ಖಾತೆ ತೆರೆಯದೇ ಸಲ್ಮಾ ಅವರೊಂದಿಗೆ ಅಜೇಯರಾಗಿ ಉಳಿದರು.
ಆರಂಭಿಕ ಪೆಟ್ಟು: ಭಾರತದ ಇನಿಂಗ್ಸ್ ಅನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಖುಷಿಯಲ್ಲೇ ತನ್ನ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ, ಬಾಂಗ್ಲಾದ ಬೌಲರ್ ಜಹಾನಾರಾ ಆಲಂ ಆರಂಭದಲ್ಲೇ ಪೆಟ್ಟು ನೀಡಿದರು. ಆರಂಭಿಕ ಬ್ಯಾಟ್ಸ್‌ವುಮನ್ ಪೂನಮ್ ರಾವುತ್ ಅವರನ್ನು ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಸ್ಟಂಪ್ಡ್ ಔಟ್ ಮಾಡಿ ಹೊರಹಾಕಿದರು.
ಆದರೆ, ನಂತರ ಜೊತೆಯಾದ ಮತ್ತೊಬ್ಬ ಆರಂಭಿಕ ಆಟಗಾರ್ತಿ ತಿರುಷ್ಕಾಮಿನಿ ಹಾಗೂ ಮೋನಾ ಮೇಶ್ರಾಮ್ ಇಬ್ಬರೂ 2ನೇ ವಿಕೆಟ್‌ಗೆ 36 ರನ್ ಸೇರಿಸಿದರಷ್ಟೇ. ತಂಡದ ಮೊತ್ತ 64 ರನ್ ಆಗಿದ್ದಾಗ, ಮೇಶ್ರಾಮ್, ಸಲ್ಮಾ ಅವರ ಬೌಲಿಂಗ್‌ನಲ್ಲಿ ಫಾತೀಮಾ ಅವರಿಗೆ ಕ್ಯಾಚ್ ನೀಡಿ ಹೊರನಡೆದರು. ಮೇಶ್ರಾಮ್ ಹೊರನಡೆದ ಕೆಲವೇ ಹೊತ್ತಿನಲ್ಲಿ ಕಾಮಿನಿ ಸಹಾ ಹೊರನಡೆದರು.
ಮೇಶ್ರಾಮ್ ಹೊರನಡೆದಾಗ ಆಗಮಿಸಿದ್ದ ಹರ್ಮೀತ್ ಕೌರ್, ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕ್ರೀಸ್‌ನಲ್ಲಿ ಅವರಿಗೆ ಉತ್ತಮ ಬೆಂಬಲ ನೀಡಿದ ಅನಘಾ ದೇಶಪಾಂಡೆ, 47 ರನ್ ಗಳಿಸಿದರು. 4ನೇ ವಿಕೆಟ್‌ಗೆ ಈ ಜೋಡಿ, 83 ರನ್ ಪೇರಿಸಿತು. ಇನಿಂಗ್ಸ್‌ನ 39ನೇ ಓವರ್‌ನಲ್ಲಿ ದೇಶಪಾಂಡೆ ಔಟಾದ ಮೇಲೆ, ಕೌರ್ ಅವರಿಗೆ ಕ್ರೀಸ್‌ನಲ್ಲಿ ಯಾರಿಂದಲೂ ಗಟ್ಟಿಯಾದ ಬೆಂಬಲ ಸಿಗಲಿಲ್ಲ. ಇಲ್ಲಿಂದ ಭಾರತ, ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಶತಕಾರ್ಧ ಗಳಿಸಿದ ಕೌರ್ ಅಜೇಯರಾಗುಳಿದರು.
ಕ್ರೀಸ್‌ನ ಇನ್ನೊಂದು ತುದಿಯಲ್ಲಿ ಭಾರತದ ವಿಕೆಟ್‌ಗಳು ಉರುಳುತ್ತಿದ್ದರೂ, ಕೌರ್ ಮಾತ್ರ ಬಿಚ್ಚದೇ ಬ್ಯಾಟ್ ಬೀಸಿ, ಶತಕಾಧ ಗಳಿಸಿದರು. ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದ ಕೌರ್, ತಂಡದವನ್ನು ಗೆಲುವಿನ ದಡ ಮುಟ್ಟಿಸಿದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 194/9 (50 ಓವರ್)
ಸಲ್ಮಾ ಅಜೇಯ 75 (82), ಲತಾ 39 (72); ಬೌಲಿಂಗ್: ಬಿಶ್ತ್ 27/3, ಸುಬ್ಬಲಕ್ಷ್ಮೀ 28/2
ಭಾರತ: 196/5 (49.2 ಓವರ್)
ಹರ್ಮೀತ್ ಕೌರ್ ಅಜೇಯ 63(100), ದೇಶಪಾಂಡೆ 47 (50)
ಬೌಲಿಂಗ್: ಜಹನಾರಾ ಆಲಂ 31/2, ಸಲ್ಮಾ ಖತುನ್ 36/1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement