ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೇಡಿಗಾಗಿ ಕಾದಿರುವ ಆರ್‌ಸಿಬಿ

Mainashree
Updated On : 9 Apr 2013, 12:17 pm

ಬೆಂಗಳೂರು: ಕಳೆದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಸನ್‌ರೈಸರ್ರ್ಸ್ ಹೈದರಾಬಾದ್ ವಿರುದ್ಧ ಕೈಚೆಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ನಡೆಯಲಿರುವ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಅದೇ ತಂಡವನ್ನು ಎದುರಿಸಲಿದೆ.
ಕೂದಲೆಳೆ ಅಂತರದಿಂದ ಸೋಲನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ವಿಶ್ವಾಸ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಇನ್ನೊಂದೆಡೆ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿರುವ ಸನ್‌ರೈಸರ್ಸ್ ಹೈದರಾಬಾದ್, ಈ ಪಂದ್ಯದಲ್ಲೂ ಜಯ ಕಾಣಲು ಎದುರು ನೋಡುತ್ತಿದೆ.
ಗಾಯಾಳು ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸುತ್ತಿರುವ ಕರ್ನಾಟಕದ ಆರ್. ವಿನಯ್ ಕುಮಾರ್, ಆರ್‌ಸಿಬಿಗೆ ಬೌಲಿಂಗ್‌ನಲ್ಲಿ ಆಶ್ರಯವಾಗಿದ್ದಾರೆ. ಅಲ್ಲದೆ, ಮುತ್ತಯ್ಯ ಮುರಳೀಧರನ್, ಜಯದೇವ್ ಉನಾದ್ಕತ್, ಮುರಳಿ ಕಾರ್ತಿಕ್, ಮೊಯ್ಸಿಸ್ ಹೆನ್ರೀಕೆಸ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಆರ್‌ಸಿಬಿಗೆ ಜಹೀರ್ ಅನುಪಸ್ಥಿತಿ ಯಾವುದೇ ಪರಿಣಾಮ ಬೀರುತ್ತಿಲ್ಲ.
ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ಗೇಯ್ಲ್, ವಿರಾಟ್ ಕೊಹ್ಲಿ ಸೇರಿದಂತೆ ತಿಲಕರತ್ನೆ ದಿಲ್ಷಾನ್ ಹಾಗೂ ಮಾಯಾಂಕ್ ಅಗರ್ವಾಲ್ ರನ್ ಗಳಿಸಲು ಒದ್ದಾಡುತ್ತಿರುವುದು ಆರ್‌ಸಿಬಿ ಬ್ಯಾಟಿಂಗ್ ವಿಭಾಗದ ಆತಂಕವಾಗಿ ಪರಿಣಮಿಸಿದೆ.
ಭಾನುವಾರದ ಪಂದ್ಯದಲ್ಲಿ ಗೇಯ್ಲ್ ಬೇಗನೆ ನಿರ್ಗಮಿಸಿದ್ದು, ತಂಡ ಕೇವಲ 130 ರನ್‌ಗಳ ಸಾಧಾರಣ ಮೊತ್ತಕ್ಕೆ ತೃಪ್ತಿಪಡಬೇಕಾಯಿತು. ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲಿ  ಗೇಯ್ಲ್ ಅಜೇಯ 92 ರನ್ ಬಾರಿಸುವುದರೊಂದಿಗೆ ಬೆಂಗಳೂರು ತಂಡ 156 ರನ್ ಗಳಿಸಲು ಸಾಧ್ಯವಾಗಿತ್ತು.
ಹೀಗಾಗಿ ಈ ಪಂದ್ಯದಲ್ಲಿ ಕ್ರಿಸ್ ಗೇಯ್ಲ್ ವಿಕೆಟ್ ಕಬಳಿಸಲು ಹೈದರಾಬಾದ್ ತಂತ್ರ ರೂಪಿಸುತ್ತಿದೆ. ಮೊದಲ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 22 ರನ್‌ಗಳ ಅಂತರದಿಂದ ಜಯ ಸಾಧಿಸಿದ ಬೈದರಾಬಾದ್, ನಂತರ ಆರ್‌ಸಿಬಿ ವಿರುದ್ಧ ತವರಿನ ಅಂಗಣದಲ್ಲಿ ರೋಚಕವಾಗಿ ನಡೆದ ಪಂದ್ಯದ ಸೂಪರ್ ಓವರ್‌ನಲ್ಲಿ ವಿಜಯ ಸಾಧಿಸಿತ್ತು.
ಇನ್ನು ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ ಮುಂಬೈ ಇಂಡಿಯನ್ಸ್ ಮತ್ತು ಹೈದರಾಬಾದ್ ತಂಡಗಳ ವಿರುದ್ಧ ಕ್ರಮವಾಗಿ 0 ಮತ್ತು 5 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ.
ಹೈದರಾಬಾದ್ ತಂಡ ಯಾವುದೇ ಸ್ಫೋಟಕ ಬ್ಯಾಟ್ಸ್‌ಮನ್ ತಂಡದಲ್ಲಿ ಇಲ್ಲದೇಒದ್ದಾಡುತ್ತಿದೆ. ಆರಂಭಿಕ ಎರಡೂ ಪಂದ್ಯಗಳಲ್ಲೂ ಅಗ್ರ ಕ್ರಮಾಂಕದ ಓರ್ವ ಬ್ಯಾಟ್ಸ್‌ಮನ್ ಸಹ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿಲ್ಲ.
ನಾಯಕ ಕುಮಾರ ಸಂಗಕ್ಕಾರ ಮೊದಲೆರಡು ಪಂದ್ಯಗಳಲ್ಲಿ 31 ರನ್ ಗಳಿಸಿದ್ದಾರೆ. ಇನ್ನು ಸೂಪರ್ ಓವರ್‌ನಲ್ಲಿ ಅಬ್ಬರಿಸಿದ ಕೆಮರೂನ್ ವೈಟ್, ಪಾರ್ಥೀವ್ ಪಟೇಲ್ ಸಹ ವೈಫಲ್ಯ ಕಾಣುತ್ತಿದ್ದಾರೆ.
ಪುಣೆ ವಾರಿಯರ್ಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ತಿಸರಾ ಪೆರೇರಾ, ಆರ್‌ಸಿಬಿ ವಿರುದ್ಧ ಕೇವಲ 7 ರನ್‌ಗಳಿಗೆ ತೃಪ್ತಿಪಟ್ಟಿದ್ದರು. ಇನ್ನಿಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಜೆ.ಪಿ ಡುಮಿನಿ ಮತ್ತು ಶಿಖರ್ ಧವನ್ ಗಾಯಗೊಂಡಿರುವುದು ತಂಡದ ಬ್ಯಾಟಿಂಗ್ ವೈಫಲ್ಯ ಕಾಣಲು ಪ್ರಮುಖ ಕಾರಣವಾಗಿದೆ.
ಆದರೆ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಅವರೊಂದಿಗೆ ಹೈದರಾಬಾದ್ ಬೌಲಿಂಗ್ ವಿಭಾಗ ತಕ್ಕ ಪ್ರದರ್ಶನ ನೀಡುತ್ತಿದೆ. ಹೀಗಾಗಿಯೇ ತಂಡಕ್ಕೆ ಜಯ ದೊರಕಿದೆ. ಸ್ಟೇಯ್ನ್ ಜತೆಗೆ, ಇಶಾಂತ್ ಶರ್ಮಾ, ತಿಸರಾ ಪೆರೇರಾ ಹಾಗೂ ಸ್ಪಿನ್ನರ್ ಅಮಿತ್ ಮಿಶ್ರಾ ತಂಡಕ್ಕೆ ಆಶ್ರಯವಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಪಂದ್ಯ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿವೆ. ಹೀಗಾಗಿ ಪಂದ್ಯ ಕುತೂಹಲ ಮೂಡಿಸಿದೆ

ತಂಡಗಳು
ಸನ್‌ರೈಸರ್ಸ್
: ಕುಮಾರ ಸಂಗಕ್ಕಾರ (ನಾಯಕ), ಅಕ್ಷತ್ ರೆಡ್ಡಿ, ಅಮಿತ್ ಮಿಶ್ರಾ, ಆನಂದ್ ರಾಜನ್, ಅಂಕಿತ್ ಶರ್ಮಾ, ಆಶೀಶ್ ರೆಡ್ಡಿ, ಬಿಪ್ಲಾಪ್ ಸಮಾಂತ್ರೇ, ಕೆಮೆರೂನ್ ವೈಟ್, ಕ್ರಿಸ್ ಲಿನ್, ಕ್ಲಿಂಟ್ ಮೆಕೇ, ಡೇಲ್ ಸ್ಟೇಯ್ನ್, ಡರೇನ್ ಸಾಮಿ, ದ್ವಾರಕ ರವಿತೇಜ, ಹನುಮ ವಿಹಾರಿ, ಇಶಾಂತ್ ಶರ್ಮಾ, ಜೆಪಿ ಡುಮಿನಿ, ಕರಣ್ ಶರ್ಮಾ, ನಥಾನ್ ಮೆಕಲಂ, ಪಾರ್ಥೀವ್ ಪಟೇಲ್, ಕ್ವಿಂಟನ್ ಡಿ ಕಾಕ್, ಸಚಿನ್ ರಾಣಾ, ಶಿಖರ್ ಧವನ್, ಸುದೀಪ್ ತ್ಯಾಗಿ, ತಲವಿವನ್ ಸರ್ಗುನನ್, ತಿಸಾರಾ ಪರೇರಾ, ವೀರ್ ಪ್ರತಾಪ್ ಸಿಂಗ್.
ಆರ್‌ಸಿಬಿ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಕೆ.ಪಿ ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ಕ್ರಿಸ್ಟೊಫರ್ ಬರ್ನ್‌ವೆಲ್, ಡೇನಿಯಲ್ ಕ್ರಿಸ್ಚಿಯನ್, ಎಬಿ ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಯ್ಲ್, ಮೊಯ್ಸಿಸ್ ಹೆನ್ರಿಕೇಸ್, ಶೆಲ್ಡನ್ ಜಾಕ್ಸನ್, ಮುರಳಿ ಕಾರ್ತಿಕ್, ಜಹೀರ್ ಖಾನ್, ಆ್ಯಂಡ್ರೂ ಮೆಕ್‌ಡೊನಾಲ್ಡ್, ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಮುತ್ತಯ್ಯ ಮುರಳಿಧರನ್, ಕರುಣ್ ನಾಯರ್, ಪಂಕಜ್ ಸಿಂಗ್, ಪಿ.ಪರಮೇಶ್ವರನ್, ಹರ್ಶದ್ ಪಟೇಲ್, ಚೇತೇಶ್ವರ ಪೂಜಾರ, ರವಿ ರಾಮ್‌ಪಾಲ್, ಸಂದೀಪ್ ವಾರಿಯರ್, ಆರ್.ಪಿ. ಸಿಂಗ್, ಸನ್ನಿ ಸೋಹೈಲ್, ಸೈಯದ್ ಮಹಮದ್, ಸೌರಬ್ ತಿವಾರಿ, ಜಯ್‌ದೇವ್ ಉನದ್ಕತ್, ಡೇನಿಯಲ್ ವೆಟ್ಟೊರಿ, ವಿನಯ್ ಕುಮಾರ್, ವಿಜಯ್ ಜೋಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement