ಭಾರತೀಯ ವನಿತೆಯರ ಮುಡಿಗೆ ಏಕದಿನ ಸರಣಿ
ಹರ್ಮನ್ಪ್ರೀತ್ ಕೌರ್ (103) ಶತಕದ...
ಅಹಮದಾಬಾದ್: ಹರ್ಮನ್ಪ್ರೀತ್ ಕೌರ್ (103) ಶತಕದ ನೆರವಿನೊಂದಿಗೆ ಭಾರತ ವನಿತೆಯರ ತಂಡ, ಬಾಂಗ್ಲಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 46 ರನ್ಗಳ ಅಂತರದಿಂದ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ವನಿತೆಯರು 2-0 ಅಂತರದಿಂದ ಸರಣಿ ಮುಡಿಗೇರಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ, 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ವನಿತೆಯರು ನಿಗದಿತ ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 210 ರನ್ ಗಳಿಸುವ ಮೂಲಕ 46 ರನ್ಗಳ ಅಂತರದಿಂದ ಕೈಚೆಲ್ಲಿದರು. ಅಮೋಘ ಶತಕ ಸಿಡಿಸಿದ ಕೌರ್ ಎರಡು ವಿಕೆಟ್ ಕಬಳಿಸುವುದರೊಂದಿಗೆ ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಲು ನೆರವಾದರು. ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ್ದ ಆತಿಥೇಯ ತಂಡ, 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 75 ರನ್ ಕಲೆ ಹಾಕಿತ್ತು. ಆಗ ಕ್ರೀಸ್ಗೆ ಬಂದು 100 ಎಸೆತಗಳನ್ನು ಎದುರಿಸಿದ ಹರ್ಮನ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 11 ಬೌಂಡರಿಗಳು ಸೇರಿದ್ದವು. ಆರಂಭಿಕ ಆಟಗಾರ್ತಿ ಪೂನಮ್ ರಾವುತ್ (80) ಅವರೊಂದಿಗೆ ಜತೆಯಾಟದಾಲ್ಲಿ 126 ಎಸೆತಗಳನ್ನು ಎದುರಿಸಿ 109 ರನ್ ಗಳಿಸಿದರು. ಇದು ತಂಡದ ಭದ್ರ ಬುನಾದಿಯಾಯಿತು.
ಉತ್ತಮವಾಗಿಯೇ ಬ್ಯಾಟ್ ಬೀಸುತ್ತಿದ್ದ ರಾವುತ್ ವಿಕೆಟ್ ಒಪ್ಪಿಸಿದ ನಂತರವೂ, ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಕೌರ್, ಅನಘಾ ದೇಶಪಾಂಡೆ ಅವರೊಂದಿಗೆ 4ನೇ ವಿಕೆಟ್ ಜತೆಯಾಟದಲ್ಲಿ 52 ರನ್ ದಾಖಲಿಸಿದರು.
ಓವರ್ ಒಂದಕ್ಕೆ 5 ರನ್ಗಳ ಗುರಿ ಹೊಂದಿದ್ದ ಬಾಂಗ್ಲಾದೇಶ, ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಅಲ್ಲದೆ ಬಾಂಗ್ಲಾದೇಶದ ಪರ ರುಮಾನಾ ಅಹ್ಮದ್ (75) ಹೊರತುಪಡಿಸಿದರೆ, ಇತರರು ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದರು.
ಭಾರತ: 256/6 (50 ಓವರ್)
ಕೌರ್ 103, ರಾವುತ್ 80; ಬೌಲಿಂಗ್: ಜಹನಾರಾ 38/2, ಸಲ್ಮಾ ಖಾತುನ್ 48/2
ಬಾಂಗ್ಲಾದೇಶ 210/9 (50 ಓವರ್)
ರುಮಾನ್ 75, ಸಲ್ಮಾ 35
ಬೌಲಿಂಗ್: ಬಿಸ್ತ್ 34/3, ಕೌರ್ 30/2