ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯುಗಾದಿ ಬೆಲ್ಲ ಯಾರ ಪಾಲಿಗೆ?

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುರುವಾರ ನಡೆಯಲಿರುವ...

Mainashree
Updated On : 10 Apr 2013, 11:02 am

ಬೆಂಗಳೂರು: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುರುವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಯುಗಾದಿಯಂದು ನಡೆಯಲಿರುವ ಪಂದ್ಯದಲ್ಲಿ ಬೆಲ್ಲ ಯಾರ ಪಾಲಿಗೆ ಕಾದು ನೋಡಬೇಕಿದೆ.
ಯುವ ಆಟಗಾರ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ, ಮಂಗಳವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 19 ರನ್‌ಗಳ ಅಂತರದಿಂದ ಸೋಲಿಸಿತ್ತು. ಹೀಗಾಗಿ ತಂಡ ಇದೇ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸ ಹೊಂದಿದ್ದಾರೆ ಕೊಹ್ಲಿ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್.ಪಿ ಸಿಂಗ್ 27 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಕೊಹ್ಲಿ 47 ಎಸೆತಗಳಲ್ಲಿ 93 ರನ್ ಗಳಿಸುವ ಮೂಲಕ ಅಜೇಯರಾಗುಳಿದಿದ್ದರು. ಕೊಹ್ಲಿ ಮೊತ್ತದಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು 11 ಬೌಂಡರಿಗಳು ಸೇರಿದ್ದವು. ಇನ್ನು ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿರುವ ಕ್ರಿಸ್ ಗೇಯ್ಲ್ ಈ ಪಂದ್ಯದಲ್ಲಿ ಆರ್ಭಟಿಸುವ ಭರವಸೆಯನ್ನು ತಂಡ ಹೊಂದಿದೆ. ಅಲ್ಲದೆ, ಹೈದರಾಬಾದ್ ವಿರುದ್ಧ 15 ರನ್‌ಗಳಿಸಿ ಕೊಹ್ಲಿ ಜತೆ 49 ರನ್‌ಗಳ ಜತೆಯಾಟವಾಡಿದ ಎಬಿ ಡಿವಿಲಿಯರ್ಸ್ ಸಹ ಭರವಸೆ ಮೂಡಿಸಿದ್ದಾರೆ. ಇತರ ಬ್ಯಾಟ್ಸ್‌ಮನ್‌ಗಳಾದ ತಿಲಕರತ್ನೆ ದಿಲ್ಷಾನ್, ಆ್ಯಂಡ್ರ್ಯೂ ಮೆಕ್‌ಡೂನಾಲ್ಡ್, ಮಾಯಾಂಕ್ ಅಗರ್ವಾಲ್ ಹಾಗೂ ಮೊಯ್ಸಿಸ್ ಹೆನ್ರೀಕೆಸ್ ಸಹ ಆರ್‌ಸಿಬಿ ಪರ ಬ್ಯಾಟ್ ಜಳಪಿಸಬಲ್ಲ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇನ್ನು ಜಹೀರ್ ಖಾನ್ ಅನುಪಸ್ಥಿತಿಯ ಬೌಲಿಂಗ್ ವಿಭಾಗದಲ್ಲಿ ವಿನಯ್ ಕುಮಾರ್, ಮುತ್ತಯ್ಯ ಮುರಳೀಧರನ್ ಹಾಗೂ ಮುರಳಿ ಕಾರ್ತಿಕ್ ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದು, ಮುಂಬರುವ ಪಂದ್ಯಗಳಲ್ಲೂ ಇದೇ ರೀತಿಯ ಹೋರಾಟ ನಡೆಸುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನುಭವಿಸಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ, ಆರ್‌ಸಿಬಿ ವಿರುದ್ಧ ಜಯ ಸಾಧಿಸುವ ಮೂಲಕ ಜಯದ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಈ ಪಂದ್ಯದಲ್ಲಿ 145 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಕೋಲ್ಕತಾ 19 ರನ್‌ಗಳ ಅಂತರದಿಂದ ಕೈಚೆಲ್ಲಿತ್ತು.
ಹೀಗಾಗಿ, ಕೊಹ್ಲಿ ಅಮೋಘ ಬ್ಯಾಟಿಂಗ್ ಮತ್ತು ಆರ್.ಪಿ ಸಿಂಗ್ ಆಕರ್ಷಕ ಬೌಲಿಂಗ್‌ನೊಂದಿಗೆ ಹೈದರಾಬಾದ್ ವಿರುದ್ಧ ಬಲಿಷ್ಠ ಪ್ರದರ್ಶನ ತೋರಿರುವ, ಆರ್‌ಸಿಬಿ ವಿರುದ್ಧ ಕೋಲ್ಕತಾ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಮೊದಲು ಆಡಿದ ಪಂದ್ಯಗಳಲ್ಲಿ ಮಿಂಚುವಲ್ಲಿ ವಿಫಲವಾಗಿರುವ ಜಾಕ್ ಕಾಲಿಸ್, ಗೌತಮ್ ಗಂಭೀರ್ ಹಾಗೂ ಮನೋಜ್ ತಿವಾರಿ ಕೋಲ್ಕತಾ ಪರ ಮಿಂಚುವ ಸಾಧ್ಯತೆಗಳಿವೆ. ಕಳೆದ ಬಾರಿಯ ಫೈನಲ್ ಪಂದ್ಯದಲ್ಲಿ ಸ್ಟಾರ್ ಆಟಗಾರನಾಗಿ ಮಿಂಚಿದ್ದ ಮನ್ವಿಂದರ್ ಬಿಸ್ಲಾ ಅವರೊಂದಿಗೆ ಪಂದ್ಯದಲ್ಲಿ ತಂಡಕ್ಕೆ ಭದ್ರ ಬುನಾದಿ ಹಾಕಲು ನಾಯಕ ಗೌತಮ್ ಗಂಭೀರ್ ಎದುರು ನೋಡುತ್ತಿದ್ದಾರೆ. ಆರಂಭಿಕರು ತಂಡಕ್ಕೆ ಭದ್ರತೆಯನ್ನು ಒದಗಿಸಿದಲ್ಲಿ, ನಂತರ ಬರುವ ಕಾಲಿಸ್ ತಿವಾರಿ, ಯೂಸಫ್ ಪಠಾಣ್ ಹಾಗೂ ಲಕ್ಷ್ಮಿ ರತನ್ ಶುಕ್ಲಾ ಅವರಿಗೆ ನೆರವಾಗಲಿದೆ. ರಾಜಸ್ಥಾನ ಯಾರಲ್ಸ್ ವಿರುದ್ಧ ಕ್ರೀಸ್‌ಗೆ ಕಚ್ಚಿಕೊಂಡಿದ್ದ ಇಯಾನ್ ಮಾರ್ಗನ್, ಆರ್‌ಸಿಬಿ ವಿರುದ್ಧವೂ ಹೋರಾಟ ನಡೆಸುವ ಸಾಧ್ಯತೆಗಳಿವೆ. 38 ಎಸೆತಗಳಲ್ಲಿ 51 ರನ್ ಪೇರಿಸಿದ್ದ ಮಾರ್ಗನ್ ಮಾತ್ರ ರಾಜಸ್ಥಾನದ ವಿರುದ್ಧ ಯಶಸ್ವಿಯಾಗಿದ್ದರು. ಇನ್ನು ಬೌಲಿಂಗ್ ವಿಭಾಗದಲ್ಲಿ ಬ್ರೆಟ್ ಲೀ, ಸುನಿಲ್ ನಾರಾಯಣ ಅವರೊಂದಿಗೆ ಶಮಿ ಅಹ್ಮದ್ ಅಥವಾ ಲಕ್ಷ್ಮಿಪತಿ ಬಾಲಾಜಿ ಅವರೊಂದಿಗೆ ಆರ್‌ಸಿಬಿ ವಿರುದ್ಧ ಮ್ಯಾಜಿಕ್ ಮಾಡಲು ಸಿದ್ಧವಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement