ಸೈನಾಗೆ ಅಗ್ರ ಶ್ರೇಯಾಂಕ
ನವದೆಹಲಿ: ಚೀನಾದ ಅಗ್ರ ಬ್ಯಾಡ್ಮಿಂಟನ್ ತಾರೆಗಳ ಅನುಪಸ್ಥಿತಿಯಲ್ಲಿ, ಭಾರತದ ಸೈನಾ ನೆಹ್ವಾಲ್ ಇಂಡಿಯನ್ ಓಪನ್ನಲ್ಲಿ ಅಗ್ರ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಅಲ್ಲದೆ ಏಪ್ರಿಲ್ 23ರಿಂದ 28ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಆರಂಭಿಕ ಪಂದ್ಯಗಳಲ್ಲಿ ಸೈನಾಗೆ ಕಠಿಣ ಸವಾಲುಗಳಿಲ್ಲ ಎನ್ನಲಾಗಿದೆ.
ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸೈನಾ, ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಬೆಲಾಟ್ರಿಕ್ಸ್ ಮಾನುಪತಿ ಅವರನ್ನು ಎದುರಿಸಲಿದ್ದಾರೆ. ಕಳೆದ ತಿಂಗಳು ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೈನಾ ಅವರು ಬೆಲಾಟ್ರಿಕ್ಸ್ ಅವರನ್ನು ಸುಲಭವಾಗಿ ಮಣಿಸಿದ್ದರು.
ಮೊದಲೆರಡು ಪಂದ್ಯಗಳಲ್ಲಿ ಸೈನಾ ಸುಲಭವಾಗಿ ಜಯ ಸಾಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ, 8ನೇ ಶ್ರೇಯಾಂಕ ಪಡೆದಿರುವ ಭಾರತದ ಇನ್ನೊಬ್ಬ ಯುವ ಟೆನಿಸ್ ತಾರೆ ಪಿ.ವಿ ಸಿಂಧು ವಿರುದ್ಧ ಸೈನಾ ಸವಾಲನ್ನು ಎದುರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ ಹೊರಬಂದರೆ, ಸೈನಾಗೆ ಎದುರಾಗುವುದು ವಿಶ್ವದ ನಂ.8 ಆಟಗಾರ್ತಿ ತಾಯ್ಲೆಂಡ್ನ ರಾಚನೋಕ್ ಇಂತಾನಾನ್ ಅವರಿಂದ.
ಇಂತನಾನ್ ಪಂದ್ಯಾವಳಿಯಲ್ಲಿ 3ನೇ ಶ್ರೇಯಾಂಕ ಪಡೆದಿದ್ದು, ಇತ್ತೀಚೆಗಷ್ಟೇ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಸೈನಾ ಅವರನ್ನು ಸೋಲಿಸಿದ್ದಾರೆ. ಹೀಗಾಗಿ ಸೈನಾ ಅವರಿಗೆ ಸೇಡು ತೀರಿಸಿಕೊಳ್ಳಲೂ ಈಗ ಅವಕಾಶವೂ ದೊರಕಿದಂತಾಗಿದೆ.
ಏತನ್ಮಧ್ಯೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅಗ್ರ ಬ್ಯಾಡ್ಮಿಂಟನ್ ತಾರೆ ಪರುಪಲ್ಲಿ ಕಶ್ಯಪ್ ಕಠಿಣ ಸವಾಲನ್ನು ಎದುರಿಸಲಿದ್ದಾರೆ. ವಿಶ್ವದ ನಂ.8ನೇ ಆಟಗಾರ ಕಶ್ಯಪ್ ಮೊದಲ ಪಂದ್ಯದಲ್ಲಿ ಮಾಜಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಇಂಡೋನೇಷ್ಯಾದ ತೌಫಿಕ್ ಹಿದಾಯತ್ ಅವರನ್ನು ಎದುರಿಸಲಿದ್ದಾರೆ.
ಒಂದು ವೇಳೆ ಕಶ್ಯಪ್ ತೌಫಿಕ್ ಎದುರಿಸುವಲ್ಲಿ ಯಶಸ್ವಿಯಾದರೆ, ದ್ವಿತೀಯ ಸುತ್ತಿನಲ್ಲಿ ಸುಲಭವಾಗಿ ಜಯ ಸಾಧಿಸುವ ಸಾಧ್ಯತೆಗಳಿವೆ.