ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡೆಲ್ಲಿ ಢಮಾರ್

Vishwanath S
Updated On : 13 Apr 2013, 12:45 pm

ನವದೆಹಲಿ: ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡ, ಶುಕ್ರವಾರ ನಡೆದ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‌ಗಳ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 114 ರನ್ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 19.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ, ಜಯದ ನಗೆ ಬೀರಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ, ಆರಂಭದಿಂದಲೇ ಸನ್‌ರೈಸರ್ಸ್ ದಾಳಿಗೆ ತತ್ತರಿಸಿತು. ಶೂನ್ಯ ಮೊತ್ತಕ್ಕೇ ಆರಂಭಿಕ ವಾರ್ನರ್ ಅವರನ್ನು ಕಳೆದುಕೊಂಡ ಡೆವಿಲ್ಸ್, ಆನಂತರ, 26 ರನ್ ಮೊತ್ತಕ್ಕೆ ಮತ್ತೊಬ್ಬ ಆರಂಭಿಕ ಜಯವರ್ಧನೆ ಹಾಗೂ ವೀರೇಂದ್ರ ಸೆಹ್ವಾಗ್ ಅವರನ್ನೂ ಕಳೆದುಕೊಂಡಿತು.
ಗಾಯದ ಸಮಸ್ಯೆಯಿಂದಾಗಿ ಕಳೆದ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಸೆಹ್ವಾಗ್, ಕೇವಲ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಜಯವರ್ಧನೆ, ಸೆಹ್ವಾಗ್ ಔಟಾದ ಮೇಲೆ ಜುನೇಜಾ ಹಾಗೂ ಬೋಥಾ ಇಬ್ಬರೂ ಇನ್ನಿಂಗ್ಸ್ ಹೊಣೆ ಹೊತ್ತುಕೊಂಡರು. ಆದರೆ, ಬೋಥಾ ಬೇಗನೇ ಔಟಾದರು. ಆನಂತರ, ಜುನೇಜಾ ಸಹ ವಿಕೆಟ್ ಒಪ್ಪಿಸಿದರು.
ಹೀಗೆ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಡೆಲ್ಲಿ ಪರ, ಮಧ್ಯಮ ಕ್ರಮಾಂಕದ ಜಾಧವ್ ಬೆಚ್ಚದೇ ಬ್ಯಾಟ್ ಬೀಸಿದರು. ಆದರೆ, ತಂಡದ ಬೇರ್ಯಾವ ಬ್ಯಾಟ್ಸ್‌ಮನ್‌ನಿಂದ ಅವರಿಗೆ ಉತ್ತಮ ಬೆಂಬಲ ಸಿಗಲಿಲ್ಲ.
ಇರ್ಫಾನ್ ಪಠಾಣ್ ಕೊಂಚ ಹೋರಾಟ ತೋರಿದರಾದರೂ ಗಟ್ಟಿಯಾಗಿ ನಿಲ್ಲಲಿಲ್ಲ. ಅಂತಿಮವಾಗಿ, 20 ಓವರ್‌ಗಳಲ್ಲಿ ಡೆಲ್ಲಿ ತಂಡ, 8 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು. ಜಾಧವ್ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಪ್ರಯಾಸದ ಜಯ: ದೆಹಲಿ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಸಹ ಪಂದ್ಯದಲ್ಲಿ ಜಯ ಸಾಧಿಸಲು ತಿಣುಕಾಡಬೇಕಾಯ್ತು.
ಆರಂಭದಲ್ಲೇ ಅಕ್ಷತ್ ರೆಡ್ಡಿ ಅವರನ್ನು ಕಳೆದುಕೊಂಡ ಸನ್‌ರೈಸರ್ಸ್, ಆನಂತರ 40 ರನ್ ಗಡಿ ದಾಟಿದ ಮೇಲೆ ಮತ್ತೊಬ್ಬ ಆರಂಭಿಕ ಪಾರ್ಥಿವ್ ಪಟೇಲ್, ಸಂಗಕ್ಕಾರ, ಕೆಮೆರೂನ್ ವೈಟ್ ಹಾಗೂ ಹನುಮ ವಿಹಾರಿ ಅವರನ್ನು ಕಳೆದುಕೊಂಡಿತು.
15 ಓವರ್ ಮುಕ್ತಾಯವಾಗುವಷ್ಟರಲ್ಲಿ 71 ರನ್‌ಗಳಿಗೆ ಸನ್‌ರೈಸರ್ಸ್ 5 ವಿಕೆಟ್ ಕಳೆದುಕೊಂಡಿತ್ತು. ಆನಂತರ, ಆಶೀಶ್ ರೆಡ್ಡಿ ಹಾಗೂ ಪೆರೇರಾ ಇಬ್ಬರೂ 6ನೇ ವಿಕೆಟ್‌ಗೆ 18 ರನ್ ಪೇರಿಸಿದರಷ್ಟೇ, ಅಷ್ಟರಲ್ಲಿ ಆಶೀಶ್ ಹಾಗೂ ಪೆರೇರಾ ಇಬ್ಬರೂ ಔಟಾದರು.
ಈ ಹಂತದಲ್ಲಿ ಪ್ರೇಕ್ಷಕರಿಗೆ ಸನ್‌ರೈಸರ್ಸ್ ಗೆಲ್ಲುವ ಅನುಮಾನವೂ ಕಾಡಿತ್ತು. ಆದರೆ, ಅಂತಿಮವಾಗಿ, ಇನಿಂಗ್ಸ್ ಹೊಣೆ ಹೊತ್ತ ಅಮಿತ್ ಮಿಶ್ರಾ ಹಾಗೂ ಡೇಲ್ ಸ್ಟೇಯ್ನ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement