ಕಿಂಗ್ಸ್‌ಗೆ ರೋಚಕ ಗೆಲವು
ಚೆನ್ನೈ: ಪಂದ್ಯಾವಳಿಯ ಬಲಿಷ್ಠ ತಂಡಗಳೆನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಕೊನೆ ಎಸೆತದವರೆಗೂ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತು. ಪಂದ್ಯದ ಕೊನೆ ಎಸೆತದಲ್ಲಿ ಆರ್‌ಪಿ ಸಿಂಗ್ ಎಸಗಿದ ತಪ್ಪಿನಿಂದ (ನೋ ಬಾಲ್)ಆರ್‌ಸಿಬಿ ತಂಡ ಸೋತಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ, 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿತು.
ಭರವಸೆಯ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್ (4) ಬೇಗನೆ ನಿರ್ಗಮಿಸುವುದರೊಂದಿಗೆ ಆರ್‌ಸಿಬಿ ಆರಂಭಿಕ ಆಘಾತ ಕಂಡಿತ್ತು. ಆದರೆ, ನಂತರ ಬಂದ ವಿರಾಟ್ ಕೊಹ್ಲಿ ಮತ್ತು ಇನ್ನೊಬ್ಬ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ (24) ಜತೆಯಾಟದಲ್ಲಿ 45 ರನ್ ಪೇರಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದರು.
ಆಗ ಮಾಯಾಂಕ್ ಮುಂದೆ ಬಂದು ಹೊಡೆಯುತ್ತಾರೆ ಎಂಬುದನ್ನು ಮನಗಂಡ ಆರ್. ಅಶ್ವಿನ್ ವೈಡ್ ಎಸೆದರು. ಅವಕಾಶ ಸದುಪಯೋಗಪಡಿಸಿಕೊಂಡ ನಾಯಕ ಮತ್ತು ವಿಕೆಟ್ ಕೀಪರ್ ಧೋನಿ ಸ್ಟಂಪೌಟ್ ಮಾಡುವಲ್ಲಿ ಯಶಸ್ವಿಯಾದರು.
ನಂತರ ಕ್ರೀಸ್‌ಗಿಳಿದ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಜತೆಯಾಗಿ ತಂಡದ ಮೊತ್ತವನ್ನು ಏರಿಸುತ್ತಾ ಹೋದರು. ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್‌ಗೆ 82 ರನ್ ಗಳಿಸಿದರು.
ಕೊಹ್ಲಿ, ಕ್ರಿಸ್ ಮೊರಿಸ್ ಎಸೆತದಲ್ಲಿ ಧೋನಿಗೆ ಕ್ಯಾಚ್ ನೀಡಿದರೆ, ಅಂತ್ಯದಲ್ಲಿ ಡಿ ವಿಲಿಯರ್ಸ್ ಅವರು ಡರ್ಕ್ ನ್ಯಾನಿಸ್ ಎಸೆತದಲ್ಲಿ ಡ್ವೈನ್ ಬ್ರಾವೋಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
ಚೆನ್ನೈ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಕ್ರಿಸ್ ಮೊರಿಸ್ 40 ರನ್ ನೀಡಿ 3 ವಿಕೆಟ್ ಪಡೆದರು. ಡರ್ಕ್ ನ್ಯಾನಿಸ್, ಆರ್. ಅಶ್ವಿನ್ ಹಾಗೂ ಡ್ವೈನ್ ಬ್ರಾವೋ ತಲಾ ಒಂದು ವಿಕೆಟ್ ಕಬಳಿಸಿದರು.
ರೋಚಕ ಜಯ: ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್‌ಕೆ 19.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ ಹಾಗೂ ಮೈಕ್ ಹಸ್ಸಿ ಆರಂಭದಲ್ಲೇ ನಿರ್ಗಮಿಸುವ ಮೂಲಕ ತಂಡದ ಆರಂಭಿಕ ಹಿನ್ನಡೆಗೆ ಕಾರಣರಾದರು.
ಹಸ್ಸಿ 16 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿದರೆ, ಮುರಳಿ ವಿಜಯ್ 2 ರನ್ ಗಳಿಸಿದರು. ನಂತರ ಜತೆಯಾದ ರೈನಾ ಹಾಗೂ ಬದ್ರಿನಾಥ್ 56 ರನ್‌ಗಳ ಉತ್ತಮ ಜತೆಯಾಟ ನೀಡಿದರು. ಈ ವೇಳೆ 30 ರನ್‌ಗಳಿಸಿದ್ದ ರೈನಾ ಔಟಾದರು. ನಂತರ ಕೆಲ ಹೊತ್ತಿನಲ್ಲೇ ಬದ್ರಿನಾಥ್ ಕೂಡ 34 ರನ್‌ಗಳಿಸಿ ಔಟಾದರು.
ಈ ವೇಳೆ ಜತೆಯಾದ ಧೋನಿ ಹಾಗೂ ಜಡೇಜಾ 59 ರನ್‌ಗಳ ಜತೆಯಾಟವಾಡಿದರು. ಅಂತಿಮ ಓವರ್‌ಗೆ 16 ರನ್‌ಗಳ ಅಗತ್ಯವಿದ್ದಾಗ ಜಡೇಜಾ ಮೊದಲ ಎಸೆತದಲ್ಲಿ ಬೌಂಡರಿ ಹಾಗೂ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಪಂದ್ಯದಲ್ಲಿ ನಿಯಂತ್ರಣ ಸಾಧಿಸಿದರು.
ಅಂತಿಮವಾಗಿ ಕೊನೆ ಎಸೆತದಲ್ಲಿ 2 ರನ್ ಬೇಕಿದ್ದಾಗ ಎಲ್ಲರಲ್ಲೂ ಮತ್ತೇ ಸೂಪರ್ ಓವರ್ ಆಡುವ ಕುತೂಹಲ ಮೂಡಿಸಿತ್ತು.
ಆದರೆ ಕೊನೆ ಎಸೆತವನ್ನು ಎಸೆದ ಆರ್‌ಪಿ ಸಿಂಗ್ ನೋಬಾಲ್ ಮಾಡುವ ಮೂಲಕ ಪಂದ್ಯವನ್ನು ಎದುರಾಳಿಗೆ ತಂಡಕ್ಕೆ ಬಿಟ್ಟುಕೊಟ್ಟರು.
ಆರ್‌ಸಿಬಿ 165/6 (20 ಓವರ್)
ಗೇಯ್ಲ್ ಸಿ ಧೋನಿ ಬಿ ಮೊರಿಸ್ 4 (10), ಅಗರ್ವಾಲ್ ಸ್ಟಂಪ್ ಧೋನಿ ಬಿ ಅಶ್ವಿನ್ 24 (21), ಕೊಹ್ಲಿ ಸಿ ಧೋನಿ ಬಿ ಮೊರಿಸ್ 58 (47), ಡಿವಿಲಿಯರ್ಸ್ ಸಿ ಬ್ರಾವೊ ಬಿ ನ್ಯಾನಿಸ್ 64 (32), ಕ್ರಿಸ್ಚಿಯನ್ ಸಿ ರೈನಾ ಬಿ ಮೊರಿಸ್ 2 (2), ರಾಮ್‌ಪಾಲ್ ಸಿ ಧೋನಿ ಬಿ ಬ್ರಾವೊ 0 (4), ಅರುಣ್ ಅಜೇಯ 5 (5), ಇತರೆ 8.
ವಿಕೆಟ್ ಪತನ: 1-6, 2-51, 3-133, 4-135, 5-138, 6-165
ಬೌಲಿಂಗ್: ನ್ಯಾನಿಸ್ 4-0-31-1, ಮೊರಿಸ್ 4-0-40-3, ಮೊಹಿತ್ 2-0-13-0, ಅಶ್ವಿನ್ 4-0-28-1, ಜಡೇಜಾ 2-0-20-0, ಬ್ರಾವೊ 4-0-32-1
ಚೆನ್ನೈ ಸೂಪರ್ ಕಿಂಗ್ಸ್: 166 (19.5 ಓವರ್)
ಮೈಕ್ ಹಸ್ಸಿ ಸಿ ಅಗರ್ವಾಲ್ ಬಿ ವಿನಯ್ ಕುಮಾರ್ 6 (16), ಮುರಳಿ ವಿಜಯ್ ಸಿ ಅರುಣ್ ಕುಮಾರ್ ಬಿ ರಾಮ್‌ಪಾಲ್ 2 (5), ಸುರೇಶ್ ರೈನಾ ಸಿ ಕಾರ್ತಿಕ್ ಬಿ ರಾಮ್‌ಪಾಲ್ 30 (22), ಬದ್ರೀನಾಥ್ ಸಿ ಅಗರ್ವಾಲ್ ಬಿ ಸಯ್ಯದ್ ಮಹಮ್ಮದ್ 34 (29), ಧೋನಿ ಸಿ ಅರುಣ್ ಕಾರ್ತಿಕ್ ಬಿ ರಾಮ್‌ಪಾಲ್ 33 (23), ರವೀಂದ್ರ ಜಡೇಜಾ ಅಜೇಯ 38 (20), ಬ್ರಾವೊ ಎಲ್‌ಬಿಡಬ್ಲ್ಯೂ ಬಿ ರಾಮ್‌ಪಾಲ್ 8 (3), ಮೊರಿಸ್ ಅಜೇಯ 7 (4). ಇತರೆ 8.
ವಿಕೆಟ್ ಪತನ: 1-4, 2-10, 3-66, 4-78, 5-137, 6-146.
ಬೌಲಿಂಗ್: ರಾಮ್‌ಪಾಲ್ 4-0-31-3, ಆರ್‌ಪಿ ಸಿಂಗ್ 3.5-0-41-0, ವಿನಯ್ ಕುಮಾರ್ 4-0-36-1, ಕ್ರಿಶ್ಚಿಯನ್ 2-0-13-0, ಮುರಳಿ ಕಾರ್ತಿಕ್ 3-0-29-0, ಸಯ್ಯದ್ ಮಹಮ್ಮದ್ 3-0-15-2.