ಕಿಂಗ್ಸ್ಗೆ ಸ್ಪರ್ಧಾತ್ಮಕ ಸವಾಲು
ಚೆಚೆನ್ನೈ: ಎಬಿ ಡಿವಿಲಿಯರ್ಸ್ (64) ಮತ್ತು ವಿರಾಟ್ ಕೊಹ್ಲಿ (58) ಅರ್ಧ ಶತಕದ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 166 ರನ್ಗಳ ಸ್ಪರ್ಧಾತ್ಮಕ ಸವಾಲೊಡ್ಡಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಚೆನ್ನೈ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ ತಂಡ, 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿತು.
ಭರವಸೆಯ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ (4) ಬೇಗನೆ ನಿರ್ಗಮಿಸುವುದರೊಂದಿಗೆ ಆರ್ಸಿಬಿ ಆರಂಭಿಕ ಆಘಾತ ಕಂಡಿತ್ತು. ಆದರೆ, ನಂತರ ಬಂದ ವಿರಾಟ್ ಕೊಹ್ಲಿ ಮತ್ತು ಇನ್ನೊಬ್ಬ ಆರಂಭಿಕ ಆಟಗಾರ ಮಾಯಾಂಕ್ ಅರ್ವಾಲ್ (24) ಜತೆಯಾಟದಲ್ಲಿ 45 ರನ್ ಪೇರಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆಗ ಮಾಯಾಂಕ್ ಮುಂದೆ ಬಂದು ಹೊಡೆಯುತ್ತಾರೆ ಎಂಬುದನ್ನು ಮನಗಂಡ ಆರ್. ಅಶ್ವಿನ್ ವೈಡ್ ಎಸೆದರು. ಅವಕಾಶ ಸದುಪಯೋಗಪಡಿಸಿಕೊಂಡ ನಾಯಕ ಮತ್ತು ವಿಕೆಟ್ ಕೀಪರ್ ಧೋನಿ ಸ್ಟಂಪೌಟ್ ಮಾಡುವಲ್ಲಿ ಯಶಸ್ವಿಯಾದರು.
ನಂತರ ಕ್ರೀಸ್ಗಿಳಿದ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಜತೆಯಾಗಿ ತಂಡದ ಮೊತ್ತವನ್ನು ಏರಿಸಿತ್ತಾ ಹೋದರು. ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್ಗೆ 82 ರನ್ ಗಳಿಸಿದರು. 32 ಎಸೆತಗಳನ್ನು ಎದುರಿಸಿದ ವಿಲಿಯರ್ಸ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. 47 ಎಸೆತಗಳನ್ನು ಎದುರಿಸಿದ ಕೊಹ್ಲಿ ಮೊತ್ತದಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳು ಸೇರಿದ್ದವು.
ಕೊಹ್ಲಿ ಕ್ರಿಸ್ ಮೊರಿಸ್ ಎಸೆತದಲ್ಲಿ ಧೋನಿಗೆ ಕ್ಯಾಚ್ ನೀಡಿದರೆ, ಅಂತ್ಯದಲ್ಲಿ ಡಿ ವಿಲಿಯರ್ಸ್ ಅವರು ಡರ್ಕ್ ನ್ಯಾನಿಸ್ ಎಸೆತದಲ್ಲಿ ಡ್ವೈನ್ ಬ್ರಾವೋಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. ಚೆನ್ನೈ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಕ್ರಿಸ್ ಮೊರಿಸ್ 40 ರನ್ ನೀಡಿ 3 ವಿಕೆಟ್ ಪಡೆದರು. ಡರ್ಕ್ ನ್ಯಾನಿಸ್, ಆರ್. ಅಶ್ವಿನ್ ಹಾಗೂ ಡ್ವೈನ್ ಬ್ರಾವೋ ತಲಾ ಒಂದು ವಿಕೆಟ್ ಕಬಳಿಸಿದರು.
ತವರಿನಲ್ಲಿ ಪಂದ್ಯ ಗೆಲ್ಲುವ ಫೇವರಿಟ್ ಎನಿಸಿರುವ ಚೆನ್ನೈ ತಂಡ ಯಾವ ರೀತಿ ಬ್ಯಾಟಿಂಗ್ ಪ್ರದರ್ಶಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಆರ್ಸಿಬಿ 165/6 (20 ಓವರ್)
ಗೇಯ್ಲ್ ಸಿ ಧೋನಿ ಬಿ ಮೊರಿಸ್ 4 (10), ಅಗರ್ವಾಲ್ ಸ್ಟಂಪ್ ಧೋನಿ ಬಿ ಅಶ್ವಿನ್ 24 (21), ಕೊಹ್ಲಿ ಸಿ ಧೋನಿ ಬಿ ಮೊರಿಸ್ 58 (47), ಡಿವಿಲಿಯರ್ಸ್ ಸಿ ಬ್ರಾವೊ ಬಿ ನ್ಯಾನಿಸ್ 64 (32), ಕ್ರಿಸ್ಚಿಯನ್ ಸಿ ರೈನಾ ಬಿ ಮೊರಿಸ್ 2 (2), ರಾಮ್ಪಾಲ್ ಸಿ ಧೋನಿ ಬಿ ಬ್ರಾವೊ 0 (4), ಅರುಣ್ ಅಜೇಯ 5 (5), ಇತರೆ 8.
ವಿಕೆಟ್ ಪತನ: 1-6, 2-51, 3-133, 4-135, 5-138, 6-165
ಬೌಲಿಂಗ್: ನ್ಯಾನಿಸ್ 4-0-31-1, ಮೊರಿಸ್ 4-0-40-3, ಮೊಹಿತ್ 2-0-13-0, ಅಶ್ವಿನ್ 4-0-28-1, ಜಡೇಜಾ 2-0-20-0, ಬ್ರಾವೊ 4-0-32-1