ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಹರಾ ಫೋರ್ಸ್ ಇಂಡಿಯಾಗೆ ನಿರಾಸೆ

ಭಾರತದ ಎಫ್ 1 ತಂಡ ಸಹರಾ ಫೋರ್ಸ್ ಇಂಡಿಯಾದ ಚಾಲಕರಾದ ಪೌಲ್ ಡಿ ರೆಸ್ತಾ ಹಾಗೂ ಆ್ಯಂಡ್ರಿಯನ್ ಸುಟಿಲ್ ...

Mainashree
Updated On : 13 Apr 2013, 10:26 am

ಶಾಂಘೈ: ಭಾರತದ ಎಫ್ 1 ತಂಡ ಸಹರಾ ಫೋರ್ಸ್ ಇಂಡಿಯಾದ ಚಾಲಕರಾದ ಪೌಲ್ ಡಿ ರೆಸ್ತಾ ಹಾಗೂ ಆ್ಯಂಡ್ರಿಯನ್ ಸುಟಿಲ್ ಭಾನುವಾರ ನಡೆಯಲಿರುವ ಶಾಂಘೈ ಗ್ರ್ಯಾನ್ ಪ್ರೀ ರೇಸ್‌ನ ಅರ್ಹತಾ ಸುತ್ತಿನ 'ಕ್ಯೂ 3' ಹಂತವನ್ನು ಮುಟ್ಟುವಲ್ಲಿ ವಿಫಲರಾಗಿದ್ದಾರೆ.
ಶನಿವಾರ ನಡೆದ ಕ್ಯೂ 2 ಹಂತದ ಅರ್ಹತಾ ಸುತ್ತಿನಲ್ಲಿ ರೆಸ್ತಾ ಹಾಗೂ ಸುಟಿಲ್ - ಇಬ್ಬರೂ ಟಾಪ್ 10ರಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲರಾದರು. ಈ ಹಿನ್ನೆಲೆಯಲ್ಲಿ, ಮುಖ್ಯ ರೇಸ್‌ನಲ್ಲಿ ಆಟಗಾರರು ಕಣಕ್ಕಿಳಿಯುವ ಸ್ಥಾನಗಳನ್ನು ನಿರ್ಧರಿಸುವ 'ಕ್ಯೂ 3' ಹಂತದ ಅರ್ಹತಾ ಸುತ್ತಿಗೆ ಪದಾರ್ಪಣೆ ಮಾಡಲಾಗಲಿಲ್ಲ.
ಇದರಿಂದಾಗಿ, ಪೌಲ್ ಡಿ ರೆಸ್ತಾ  ಭಾನುವಾರ ನಡೆಯಲಿರುವ ಮುಖ್ಯ ರೇಸ್‌ನಲ್ಲಿ 11ನೇ ಸ್ಥಾನದಿಂದ ಹಾಗೂ ಆ್ಯಡ್ರಿಯನ್ ಸುಟಿಲ್ 13ನೇ ಸ್ಥಾನದಿಂದ ಕಣಕ್ಕಿಳಿಯಲಿದ್ದಾರೆ.
ರೆಸ್ತಾ ಉತ್ತಮ ಪ್ರದರ್ಶನ: ಕಳೆದ ರೇಸ್‌ಗಳ ಅರ್ಹತಾ ಸುತ್ತುಗಳಲ್ಲಿ ರೆಸ್ತಾ ತೋರಿದ್ದ ಪ್ರದರ್ಶನಗಳಿಗೆ ಹೋಲಿಸಿದರೆ, ಶನಿವಾರ ಅವರು ಕ್ಯೂ 2 ಹಂತದಲ್ಲಿ ನೀಡಿದ ಪ್ರದರ್ಶನ ಉತ್ತಮವಾಗಿತ್ತು. ಲ್ಯಾಪ್ ಒಂದನ್ನು 1: 36: 287 ಅವಧಿಯಲ್ಲಿ ವೇಗವಾಗಿ ಪೂರ್ತಿಗೊಳಿಸಿದ್ದು, ಅವರ ಈವರೆಗಿನ ಶ್ರೇಷ್ಠ ಪ್ರದರ್ಶನವಾಗಿತ್ತು. ಆದರೂ, ಅವರು ಟಾಪ್ 10ರಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲರಾದರು.
ಸುಟಿಲ್ ಕೂಡ ಉತ್ತಮ: ಅತ್ತ, ಸುಟಿಲ್ ಕೂಡ ಉತ್ತಮ ರೀತಿಯಲ್ಲಿ ಕ್ಯೂ 1 ಹಂತವನ್ನು ಪೂರ್ತಿಗೊಳಿಸಿದ್ದರು. ನಿರ್ದಿಷ್ಟ ಲ್ಯಾಪ್‌ವೊಂದನ್ನು 1: 36: 405 ಅವಧಿಯಲ್ಲಿ ದಾಟಿದ ಅವರು ಕಳೆದ ಬಾರಿಯ ಅರ್ಹತಾ ಸುತ್ತುಗಳಿಗಿಂತ ಉತ್ತಮ ಪ್ರದರ್ಶನ ತೋರಿದರು. ಆದರೆ, ಇವರೂ ಕೂಡ ಟಾಪ್ 10ರಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕ್ಯೂ 2 ಅರ್ಹತಾ ಸುತ್ತಿನ ನಂತರ, ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ರೆಸ್ತಾ, 'ಕ್ಯೂ 3 ಹಂತದ ಅರ್ಹತಾ ಸುತ್ತಿಗೆ ಕಾಲಿಡಲು ಸಾಧ್ಯವಾಗದ್ದಕ್ಕೆ ಕೊಂಚ ಬೇಸರವಾಗಿದೆಯಾದರೂ, ಮುಖ್ಯ ರೇಸ್‌ನಲ್ಲಿ 11ನೇ ಸ್ಥಾನದಿಂದ ಕಣಕ್ಕಿಳಿಯುವ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಸಮಾಧಾನ ತಂದಿದೆ. ಮುಖ್ಯ ರೇಸ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ' ಎಂದರು.  ಇದೇ ಸಂದರ್ಭದಲ್ಲಿ ಮಾತನಾಡಿದ ಸುಟಿಲ್, 'ಕ್ಯೂ 1 ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾನು ಕ್ಯೂ 2 ಹಂತದಲ್ಲೂ ಉತ್ತಮವಾಗಿಯೇ ಕಾರು ಚಲಾಯಿಸಿದೆ. ನನ್ನ ಶಕ್ತಿ ಮೀರಿ ಪ್ರಯತ್ನಿಸಿದಾಗ್ಯೂ ಕ್ಯೂ 3 ಹಂತಕ್ಕೆ ಕಾಲಿಡಲು ಸಾಧ್ಯವಾಗಲಿಲ್ಲ. ಆದರೂ, ಮುಖ್ಯ ರೇಸ್‌ನಲ್ಲಿ ಉತ್ತಮ ಸಾಧನೆ ತೋರುವ ವಿಶ್ವಾಸವನ್ನು ಹೊಂದಿದ್ದೇನೆ' ಎಂದರು.  ಇತ್ತೀಚೆಗೆ ನಡೆದಿದ್ದ ಮಲೇಷ್ಯಾ ರೇಸ್‌ನಲ್ಲಿ ಸಹರಾ ಫೋರ್ಸ್‌ನ ಈ ಇಬ್ಬರೂ ಆಟಗಾರರು ಅವರ ಕಾರುಗಳಲ್ಲಿನ ತಾಂತ್ರಿಕ ದೋಷಗಳಿಂದಾಗಿ ರೇಸ್ ಪೂರ್ತಿಗೊಳಿಸಲು ಆಗಿರಲಿಲ್ಲ.

ಹ್ಯಾಮಿಲ್ಟನ್‌ಗೆ ಪೋಲ್ ಪೊಸಿಷನ್
ಶಾಂಘೈ:
ಖ್ಯಾತ ಎಫ್ 1 ಕ್ರೀಡಾಳು ಲಿವೀಸ್ ಹ್ಯಾಮಿಲ್ಟನ್, ಶಾಂಘೈ ರೇಸ್‌ನ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಪೋಲ್ ಪೊಸಿಷನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ನಡೆದ ಅರ್ಹತಾ ಸುತ್ತಿನ ಕ್ಯೂ 3 ಹಂತದಲ್ಲಿ ಅವರು ಮೊದಲಿಗರಾಗಿ ಹೊರಹೊಮ್ಮಿದರು.
ಮರ್ಸಿಡಿಸ್ ತಂಡಕ್ಕೆ ಸೇರ್ಪಡೆಗೊಂಡ ನಂತರ, ಇದೇ ಮೊದಲ ಬಾರಿಗೆ ಹ್ಯಾಮಿಲ್ಟನ್ ಅವರು ಪೋಲ್ ಪೊಸಿಷನ್ ಗೆದ್ದಿದ್ದಾರೆ. 2012ರಲ್ಲಿ ಮೆಕ್‌ಲಾರೆನ್ ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು, ಕಳೆದ ವರ್ಷಂತ್ಯಕ್ಕೆ 2013ರ ಎಫ್ 1 ಋತುವಿನಿಂದ ಮರ್ಸಿಡಿಸ್ ತಂಡವನ್ನು ಸೇರಿಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ 2ನೇ ಸ್ಥಾನ ಲೋಟಸ್ ತಂಡದ ಕಿಮಿ ರೈಕೋನನ್ ಅವರ ಪಾಲಾಗಿದ್ದರೆ, 3ನೇ ಸ್ಥಾನವನ್ನು ಫೆರಾರಿ ತಂಡದ ಫರ್ನಾಂಡೊ ಅಲೊನ್ಸೊ ಅವರು ಪಡೆದಿದ್ದಾರೆ.  ಮರ್ಸಿಡಿಸ್ ತಂಡದ ಮತ್ತೊಬ್ಬ ಆಟಗಾರ ನಿಕೋ ರೋಸ್‌ಬರ್ಗ್ ಅವರು ನಾಲ್ಕನೇ ಸ್ಥಾನ ಹಾಗೂ ಫೆರಾರಿಯ ಫೆಲಿಪೆ ಮಾಸ್ಸಾ ಅವರು 5ನೇ ಸ್ಥಾನವನ್ನು ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement