ಮಿನುಗದ ಸನ್ರೈಸರ್ಸ್
ಕೋಲ್ಕತಾ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ನಿಯಂತ್ರಣ ಸಾಧಿಸುವಲ್ಲಿ ವಿಫಲವಾದ ಸನ್ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 48 ರನ್ಗಳ ಅಂತರದಿಂದ ಪರಾಭವ ಹೊಂದಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡ, 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 180 ರನ್ಗಳ ಬೃಹತ್ ಸವಾಲೊಡ್ಡಿತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಸನ್ರೈಸರ್ಸ್, ಬ್ಯಾಟ್ಸ್ಮನ್ಗಳ ವೈಫಲ್ಯದೊಂದಿಗೆ ನಿಗದಿತ ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 132 ರನ್ಗಳಿಗೆ ತೃಪ್ತಿಪಟ್ಟಿತು. ಹೀಗಾಗಿ ಮೇಲುಗೈ ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಗೆಲವಿನ ಕೇಕೆ ಹಾಕಿತು. ಈ ಜಯದೊಂದಿಗೆ ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿದ ಕೋಲ್ಕತಾ 2ರಲ್ಲಿ ಜಯ ಸಾಧಿಸಿದಂತಾಯಿತು.
ಆರಂಭಿಕರಾಗಿ ಅಂಗಣಕ್ಕಿಳಿದ ಮನ್ವಿಂದರ್ ಬಿಸ್ಲಾ (28) ಮತ್ತು ನಾಯಕ ಗೌತಮ್ ಗಂಭೀರ್ (53) ಕೋಲ್ಕತಾ ತಂಡಕ್ಕೆ ಭದ್ರ ಬುನಾದಿ ಹಾಕಿದರು. 45 ಎಸೆತಗಳನ್ನು ಎದುರಿಸಿ ಅರ್ಧ ಶತಕ ಸಿಡಿಸಿದ ಗಂಭೀರ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದವು. ಇಯಾನ್ ಮಾರ್ಗನ್ (47) ಮತ್ತು ಜಾಕ್ ಕಾಲಿಸ್ (41) ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕೋಲ್ಕತಾ 180 ರನ್ಗಳ ಗಡಿ ತಲುಪಲು ನೆರವಾಯಿತು. ಆದರೆ, ಕೋಲ್ಕತಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದ ಸನ್ರೈಸರ್ಸ್ ಬ್ಯಾಟ್ಸ್ಮನ್ಗಳು ಬೃಹತ್ ಗುರಿ ತಲುಪುವಲ್ಲಿ ಎಡವಿದರು.
ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಿದ ಜಾಕ್ ಕಾಲಿಸ್ ಬೌಲಿಂಗ್ನಲ್ಲೂ ತಮ್ಮ ಮಾಂತ್ರಿಕತೆಯನ್ನು ಮೆರೆದರು. ಕೇವಲ 13 ರನ್ಗಳನ್ನು ನೀಡಿದ ಕಾಲಿಸ್ 3 ವಿಕೆಟ್ ಪಡೆದು ಮಿಂಚಿದರು. ಇನ್ನು ಆಡುವ 11 ಆಟಗಾರರಲ್ಲಿ ಸ್ಥಾನ ಪಡೆದ ಶ್ರೀಲಂಕಾದ ಸಚಿತ್ರಾ ಸೇನಾನಾಯಕೆ ತಮ್ಮ ನಾಲ್ಕು ಓವರ್ಗಳಲ್ಲಿ 18 ರನ್ ನೀಡಿ 1 ವಿಕೆಟ್ ಕಬಳಿಸಿದರು. ಸನ್ರೈಸರ್ಸ್ ಪರ ಆರಂಭಿಕ ಆಟಗಾರರಾದ ಪಾರ್ಥೀವ್ ಪಟೇಲ್ (27) ಮತ್ತು ಕೆಮರೂನ್ ವೈಟ್ (34) ಜತೆಯಾಟದಲ್ಲಿ ಮೊದಲ ವಿಕೆಟ್ಗೆ 57 ರನ್ ಪೇರಿಸಿದರು. ಆದರೆ, ನಿಧಾನಗತಿಯ ಪಿಚ್ನಲ್ಲಿ ಕೆಕೆಆರ್ ಬೌಲರ್ಗಳನ್ನು ದಂಡಿಸುವಂತಹ ಪ್ರದರ್ಶನ ನೀಡಲು ಅವರಿಂದ ಸಾಧ್ಯವಾಗಲಿಲ್ಲ.
ಪಾರ್ಥೀವ್ ಪಟೇಲ್ ಅವರು ಕಾಲಿಸ್ ಬೌಲಿಂಗ್ನಲ್ಲಿ ಬೌಲ್ಡ್ ಆದ ನಂತರ, ಕೆಮರೂನ್ ವೈಟ್ ಬೌಂಡರಿ ಬಾರಿಸಲು ಪ್ರಯತ್ನಿಸುತ್ತಿದ್ದಾಗ ಯೂಸುಫ್ ಪಠಾಣ್ ಅದ್ಭುತ ಕ್ಯಾಚ್ ಹಿಡಿದರು. ಇದರೊಂದಿಗೆ ಸನ್ರೈಸರ್ಸ್ ರನ್ಗತಿ ವೇಗ ಕುಂಟಿತಗೊಳ್ಳುತ್ತಾ ಸಾಗಿತು. ಆಕರ್ಷಕ ಕ್ಷೇತ್ರ ರಕ್ಷಣೆ ಪ್ರದರ್ಶಿಸಿದ ಕೋಲ್ಕತಾ ಪರ ಮನೋಜ್ ತಿವಾರಿ ಮೂರು ಕ್ಯಾಚ್ ಪಡೆದರು. ನಂತರ ತಿಸರಾ ಪೆರೇರಾ 25 ಎಸೆತಗಳಲ್ಲಿ 36 ರನ್ ಪೇರಿಸಿದ್ದನ್ನು ಬಿಟ್ಟರೆ, ಉಳಿದ ಬ್ಯಾಟ್ಸ್ಮನ್ಗಳು ಕೋಲ್ಕತಾ ಬೌಲಿಂಗ್ಗೆ ತತ್ತರಿಸಿದರು. ಇದರೊಂದಿಗೆ 5 ಪಂದ್ಯಗಳನ್ನಾಡಿದ ಸನ್ರೈಸರ್ಸ್ ಎರಡನೇ ಸೋಲು ಕಂಡಿತು. ಅಲ್ಲದೆ, ಬೃಹತ್ ಮೊತ್ತವನ್ನು ಚೇಸ್ ಮಾಡಲಾಗದ ಅದರ ಸಾಮರ್ಥ್ಯಕ್ಕೆ ಇದೊಂದು ದೊಡ್ಡ ಪ್ರಶ್ನೆಯಾಗಿದೆ. ಇದುವರೆಗೂ ಸನ್ರೈಸರ್ಸ್ ಮೂರು ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದು, ಆ ಪಂದ್ಯಗಳಲ್ಲಿ ಕಡಿಮೆ ಮೊತ್ತ ದಾಖಲಾಗಿತ್ತು ಎಂಬುದು ಗಮನಾರ್ಹ ವಿಷಯವಾಗಿದೆ. ಹೀಗಾಗಿ ಹೈದರಬಾದ್ ತಂಡ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.
ಹೀಗಾಗಿ ಕುಮಾರ ಸಂಗಕ್ಕಾರ ಪಡೆ ಗಾಯಾಳು ಶಿಖರ್ ಧವನ್ ವೇಗವಾಗಿ ಚೇತರಿಸಿಕೊಂಡು, ಆದಷ್ಟು ಬೇಗ ತಂಡ ಸೇರಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದೆ.
ಕೋಲ್ಕತಾ ನೈಟ್ ರೈಡರ್ಸ್ ಪರ ಅರ್ಧ ಶತಕ ಸಿಡಿಸಿದ ನಾಯಕ ಗೌತಮ್ ಗಂಭೀರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೋಲ್ಕತಾ ನೈಟ್ ರೈಡರ್ಸ್ 180/4 (20 ಓವರ್)
ಬಿಸ್ಲಾ ಸಿ ವಿಹಾರಿ ಬಿ ಕರಣ್ ಶರ್ಮಾ 28 (24), ಗಂಭೀರ್ ಬೌಲ್ಡ್ ಆಶಿಶ್ ರೆಡ್ಡಿ 53 (45), ಕಾಲಿಸ್ ರನೌಟ್ 41 (27), ಮಾರ್ಗನ್ ರನೌಟ್ 47 (21), ಯೂಸುಫ್ ಅಜೇಯ 3 (3), ಇತರೆ 8.
ವಿಕೆಟ್ ಪತನ: 1-59, 2-102, 3-169, 4-180.
ಬೌಲಿಂಗ್: ಡೇಲ್ ಸ್ಟೇಯ್ನ್ 4-0-29-0, ಹನುಮಾ ವಿಹಾರಿ 1-0-14-0, ಇಶಾಂತ್ ಶರ್ಮಾ 4-0-33-0, ತಿಸರಾ ಪೆರೇರಾ 4-0-44-0, ಅಮಿತ್ ಮಿಶ್ರಾ 3-0-28-0, ಕರಣ್ ಶರ್ಮಾ 2-0-13-1, ಆಶಿಶ್ ರೆಡ್ಡಿ 2-0-15-1.
ಸನ್ರೈಸರ್ಸ್ ಹೈದರಾಬಾದ್ 132/7 (20 ಓವರ್)
ಪಟೇಲ್ ಬೌಲ್ಡ್ ಕಾಲಿಸ್ 27 (31), ವೈಟ್ ಸಿ ಪಠಾಣ್ ಬಿ ಕಾಲಿಸ್ 34 (31), ಸಂಗಕ್ಕಾರ ಸಿ ತಿವಾರಿ ಬಿ ಭಾಟಿಯಾ 2 (3), ರವಿ ತೇಜಾ ಸಿ ತಿವಾರಿ ಬಿ ನಾರಾಯಣ 10 (13), ಪೆರೇರಾ ಬೌಲ್ಡ್ ಕಾಲಿಸ್ 36 (25), ಆಶಿಶ್ ರೆಡ್ಡಿ ಬೌಲ್ಡ್ ಸೇನಾನಾಕೆ 4 (5), ಕೆ. ಶರ್ಮಾ ಅಜೇಯ 5 (9), ವಿಹಾರಿ ಸಿ ತಿವಾರಿ ಬಿ ಭಾಟಿಯಾ 1 (2), ಮಿಶ್ರಾ ಅಜೇಯ 1 (1), ಇತರೆ 12.
ವಿಕೆಟ್ ಪತನ: 1-57, 2-68, 3-71, 4-107, 5-115, 6-124,7-127.
ಬೌಲಿಂಗ್: ಬಾಲಾಜಿ 4-0-30-0, ಸೇನಾನಾಯಕೆ 4-0-18-1, ನಾರಾಯಣ 4-0-31-1, ಕಾಲಿಸ್ 4-0-13-3, ಭಾಟಿಯಾ 4-0-33-2.