ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶಾಂಘೈನಲ್ಲಿ ಅಲೊನ್ಸೊ ಅಲೆ

ಫೆರಾರಿ ತಂಡದ ಫರ್ನಾಂಡೊ ಅಲೊನ್ಸೊ ಅವರು ಈ ಬಾರಿಯ ಶಾಂಘೈ ಗ್ರ್ಯಾನ್ ಪ್ರೀಯಲ್ಲಿ ಗೆಲವು ಸಾಧಿಸಿದ್ದಾರೆ...

Mainashree
Updated On : 14 Apr 2013, 9:41 am

ಶಾಂಘೈ: ಫೆರಾರಿ ತಂಡದ ಫರ್ನಾಂಡೊ ಅಲೊನ್ಸೊ ಅವರು ಈ ಬಾರಿಯ ಶಾಂಘೈ ಗ್ರ್ಯಾನ್ ಪ್ರೀಯಲ್ಲಿ ಗೆಲವು ಸಾಧಿಸಿದ್ದಾರೆ. ಮಾ. 24ರಂದು ನಡೆದಿದ್ದ ಮಲೇಷ್ಯನ್ ಜಿಪಿಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ ರೇಸ್ ಪೂರ್ತಿಗೊಳಿಸದೇ ಹಿಂದಿರುಗಿದ್ದ ಸ್ಪೇನ್‌ನ ಈ ಕ್ರೀಡಾಳು, ಈ ಬಾರಿ ರೇಸ್ ಗೆಲ್ಲುವಲ್ಲಿ ಯಶಸ್ವಿಯಾದರು. ಒಟ್ಟು 56 ಲ್ಯಾಪ್‌ಗಳ ರೇಸ್ ಟ್ರಾಕ್ ಅನ್ನು 1:36:26.945 ಅವಧಿಯಲ್ಲಿ ಪೂರ್ತಿಗೊಳಿಸಿದ ಅವರು ಮೊದಲಿಗರಾಗಿ ಹೊರಹೊಮ್ಮಿದರು.
ಲೋಟಸ್ ತಂಡದ ಕಿಮಿ ರೈಕೋನನ್ ಅವರು ದ್ವಿತೀಯ ಸ್ಥಾನ ಗಳಿಸಿದರೆ, ಮರ್ಸಿಡೀಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರು ತೃತೀಯ ಸ್ಥಾನ ಪಡೆದರು.
ಈ ಹಿಂದಿನ ರೇಸ್ (ಮಲೇಷ್ಯಾ ಜಿಪಿ)ನಲ್ಲಿ 'ವಿವಾದಾತ್ಮಕ'ವಾಗಿ ಮೊದಲಿಗನಾಗಿದ್ದ ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟ್ಟಲ್ ಅವರು, ಈ ಬಾರಿ ನಾಲ್ಕನೇ ಸ್ಥಾನ ಪಡೆದರು. ಮೂರನೇ ಸ್ಥಾನ ಗಳಿಸಿದ ಲೂಯಿಸ್ ಹ್ಯಾಮಿಲ್ಟನ್ ಅವರಿಗಿಂತ ಕೇವಲ 0.2 ಸೆಕೆಂಡ್‌ಗಳ ಅಂತರದಲ್ಲಿ ರೇಸ್ ಮುಕ್ತಾಯಗೊಳಿಸಿದ ವೆಟ್ಟಲ್, ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.  
ಇನ್ನುಳಿದಂತೆ, ಮೆಕ್‌ಲಾರೆನ್ ತಂಡದ ಜೆನ್ಸನ್ ಬಟನ್ ಅವರು ಐದನೇ ಸ್ಥಾನ ಪಡೆದರೆ, ಫೆರಾರಿ ತಂಡದ ಮತ್ತೊಬ್ಬ ಕ್ರೀಡಾಳು ಫೆಲಿಪೆ ಮಸ್ಸಾ ಅವರು 6ನೇ ಸ್ಥಾನ ಪಡೆದರು. ಟೊರ್ರೊ ರೋಸೋ ತಂಡದ ಡೇನಿಯಲ್ ರಿಕಿಯಾರ್ಡೊ 7ನೇ ಸ್ಥಾನ, ಫೋರ್ಸ್ ಇಂಡಿಯಾ ತಂಡದ ಪೌಲ್ ಡಿ ರೆಸ್ತಾ 8ನೇ, ಲೋಟಸ್ ತಂಡದ ರೊಮೇನ್ ಗ್ರಾಸಿಯನ್ 9ನೇ ಹಾಗೂ ಸೌಬರ್ ತಂಡ ನಿಕೊ ಹಲ್ಕನ್‌ಬರ್ಗ್ ಅವರು 10ನೇ ಸ್ಥಾನ ಪಡೆದರು. ಶನಿವಾರ ನಡೆದಿದ್ದ ಕ್ಯೂ 3 ಅಭ್ಯಾಸದಲ್ಲಿ ಮೊದಲ ಸ್ಥಾನ ಗಳಿಸಿದ್ದ ಹ್ಯಾಮಿಲ್ಟನ್, ಪೋಲ್ ಪೊಸಿಷನ್‌ನಿಂದಲೇ ರೇಸ್‌ಗೆ ಇಳಿದಿದ್ದರು. ಆರಂಭದ ಐದು ಲ್ಯಾಪ್‌ಗಳವರೆಗೂ ಅವರೇ ಎಲ್ಲರಿಗಿಂತ ಮುಂದಿದ್ದರು. ಆದರೆ, 6ನೇ ಲ್ಯಾಪ್‌ನಲ್ಲಿ 3ನೇ ಸ್ಥಾನದಿಂದ ರೇಸ್‌ಗೆ ಇಳಿದಿದ್ದ ಅಲೊನ್ಸೊ, ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿದರು.
ಶಾಂಘೈ ಜಿಪಿ: ಟಾಪ್ 10
ಸ್ಥಾನ        ಕ್ರೀಡಾಳು        ತಂಡ        ಅಂಕ
1.        ಫರ್ನಾಂಡೊ ಅಲೊನ್ಸೊ        ಫೆರಾರಿ        25
2.        ಕಿಮಿ ರೈಕೋನನ್           ಲೋಟಸ್    18
3.        ಲೂಯಿಸ್ ಹ್ಯಾಮಿಲ್ಟನ್   ಮರ್ಸಿಡೀಸ್    15
4.        ಸೆಬಾಸ್ಟಿಯನ್ ವೆಟ್ಟಲ್         ರೆಡ್‌ಬುಲ್    12
5.        ಜೆನ್ಸನ್ ಬಟನ್           ಮೆಕ್‌ಲಾರೆನ್    10
6.        ಫೆಲಿಪೆ ಮಸ್ಸಾ        ಫೆರಾರಿ         8
7.        ರಿಕಿಯಾರ್ಡೊ           ಟೊರ್ರೊ ರೊಸ್ಸೊ     6
8.        ಪೌಲ್ ಡಿ ರೆಸ್ತಾ           ಫೋರ್ಸ್ ಇಂಡಿಯಾ     4
9.        ರೊಮೇನ್ ಗ್ರಾಸಿಯನ್           ಲೋಟಸ್     2
10.        ನಿಕೋ ಹಲ್ಕನ್‌ಬರ್ಗ್           ಸೌಬರ್         1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement