ಇಂಡಿಯಾ ಓಪನ್‌ಗೆ ಸೈನಾ ಸಿದ್ಧ
ನವದೆಹಲಿ: ಶೀಘ್ರದಲ್ಲೇ ಆರಂಭಗೊಳ್ಳಲಿರುವ ಇಂಡಿಯಾ ಓಪನ್ ಬ್ಯಾಡಿಂಟನ್ ಪಂದ್ಯಾವಳಿಯು ತಮಗೆ ಸವಾಲಿನ ಪಂದ್ಯಾವಳಿಯಾಗಲಿದೆ ಎಂದು ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ.
ಈ ಬಾರಿಯ ಇಂಡಿಯಾ ಓಪನ್ ಪಂದ್ಯಾವಳಿಯಲ್ಲಿ ತಾವು ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಗಿರುವುದರ ಬಗ್ಗೆ ಸೈನಾ ಸೋಮವಾರ ಮನಬಿಚ್ಚಿ ಮಾತಾಡಿದರು. ಇಂಡಿಯಾ ಓಪನ್ ಪಂದ್ಯಾವಳಿಯು ಏ. 23ರಿಂದ 28ರವರೆಗೆ ನವದೆಹಲಿಯ ಡಿಡಿಎ ಸ್ಕ್ವಾಷ್ ಹಾಗೂ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸೈನಾ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ಬೆಲೇಟ್ರಿಕ್ಸ್ ಮ್ಯನುಪುತಿ ಅವರನ್ನು ಎದುರಿಸಲಿದ್ದಾರೆ. ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಬೆಲೇಟ್ರಿಕ್ಸ್ ಅವರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ, ಪಂದ್ಯಾವಳಿಯ ತಮ್ಮ ಮೊದಲ ಪಂದ್ಯದಿಂದಲೇ ಸವಾಲು ಆರಂಭವಾಗುತ್ತದೆ ಎಂಬ ಅನಿಸಿಕೆ ಸೈನಾ ಅವರದ್ದು. 'ಈ ಬಾರಿಯ ಯೊನಿಕ್ಸ್ ಪಂದ್ಯಾವಳಿಯ ಡ್ರಾ ಕ್ಲಿಷ್ಟಕರವಾಗಿವೆ. ಮೊದಲ ಪಂದ್ಯದಲ್ಲೇ ನಾನು ಬೆಲೇಟ್ರಿಕ್ಸ್ ಅವರನ್ನು ಎದುರಿಸಲಿದ್ದೇನೆ. ಇತ್ತೀಚೆಗೆ ಉತ್ತಮ ಪ್ರದರ್ಶನ ತೋರುತ್ತಿರುವ ಅವರು, ಮೊದಲ ಪಂದ್ಯದಲ್ಲೇ ನನಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು. ಶತಾಯ ಗತಾಯ ಈ ಪಂದ್ಯಾವಳಿಯಲ್ಲಿ ಜಯ ಸಾಧಿಸಬೇಕೆಂದು ಕಠಿಣ ಪರಿಶ್ರಮದಲ್ಲಿ ನಿರತಳಾಗಿದ್ದೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಶೇ. 100ರಷ್ಟು ಪ್ರದರ್ಶನ ನೀಡಲು ನಿಶ್ಚಯಿಸಿದ್ದೇನೆ' ಎಂದು ಅವರು ತಿಳಿಸಿದರು. ಪಂದ್ಯಾವಳಿಯಲ್ಲಿ ಮತ್ತಷ್ಟು ಸವಾಲುಗಳನ್ನು ವಿವರಿಸಿದ ಸೈನಾ, 'ಇದು ತುಂಬಾ ಕಠಿಣ ಪಂದ್ಯಾವಳಿ. ಇದು ಸೂಪರ್ ಸೀರಿಸ್ ಪಂದ್ಯಾವಳಿಯಾದ್ದರಿಂದ, ವಿಶ್ವದ ಅತ್ಯುತ್ತಮ ಆಟಗಾರರೇ ಇಲ್ಲಿ ಭಾಗವಹಿಸುತ್ತಾರೆ.
ತವರಿನ ಬೆಂಬಲ: ಸ್ವದೇಶದಲ್ಲೇ ಈ ಪಂದ್ಯಾವಳಿ ನಡೆಯುತ್ತಿರುವುದರಿಂದ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿ ತಮ್ಮನ್ನು ಹುರಿದುಂಬಿಸುತ್ತಾರೆ ಎಂದ ಸೈನಾ, 'ಅಭಿಮಾನಿಗಳ ಜೊತೆಗೆ ನನ್ನ ಅಪ್ಪ-ಅಮ್ಮ ಕೂಡಾ ಪಂದ್ಯ ನೋಡಲು ಆಗಮಿಸುತ್ತಿದ್ದಾರೆ. ಹಾಗಾಗಿ, ನಾನು ಈ ಪಂದ್ಯಾವಳಿಯಲ್ಲಿ ಜಯ ಸಾಧಿಸಲೇಬೇಕೆಂಬ ಅಭಿಲಾಷೆ ಹೊಂದಿದ್ದೇನೆ' ಎಂದರು.