ಸೋಲಿನಿಂದ ಮೇಲೇಳುವುದೇ ಡೆವಿಲ್ಸ್?
ಆಡಿರುವ ನಾಲ್ಕು ಪಂದ್ಯಗಳಲ್ಲಿ ಸತತವಾಗಿ...
ಬೆಂಗಳೂರು: ಆಡಿರುವ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ತಳ ಸೇರಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಠಿಣ ಸವಾಲು ಎದುರಿಸಲಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕವಾಗಿ ನಡೆದ ಪಂದ್ಯದಲ್ಲಿ, ಅದೃಷ್ಟ ಕೈಕೊಡುವ ಮೂಲಕ ಕೈಚೆಲ್ಲಿದ್ದ ಆರ್‌ಸಿಬಿ ಜಯಕ್ಕಾಗಿ ಎದುರು ನೋಡುತ್ತಿದೆ. ಇದಕ್ಕೂ ಮುನ್ನ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಸೋಲನುಭವಿಸಿದ್ದ ಬೆಂಗಳೂರು ತಂಡಕ್ಕೆ, ಚೆನ್ನೈನಲ್ಲಿ ಅದೃಷ್ಟ ಕೈಕೊಟ್ಟಿದ್ದು ಪಂದ್ಯಾವಳಿಯಲ್ಲಿ ಎರಡನೇ ಶಾಕ್ ಆಗಿತ್ತು.
ಅತಿಥೇಯ ಆರ್‌ಸಿಬಿ ಪಂದ್ಯದಲ್ಲಿ ಡೆಲ್ಲಿ ತಂಡದಿಂದ ಉತ್ತಮ ಪ್ರತಿರೋಧವನ್ನು ಎದುರಿಸುವ ನಿರೀಕ್ಷೆಗಳಿವೆ. ಆದರೆ, ಇದುವರೆಗೂ ಒಂದು ಪಂದ್ಯದಲ್ಲೂ ಜಯ ಕಾಣದಿರುವುದು ಡೆಲ್ಲಿ ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ.
ಹೀಗಾಗಿ ಈ ಪಂದ್ಯದಲ್ಲೂ ಸೋತರೆ ಡೆಲ್ಲಿಗೆ ಪಂದ್ಯಾವಳಿಯಲ್ಲಿ ಮೇಲೇಳುವುದು ಮತ್ತಷ್ಟು ಕಠಿಣ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿಗೆ ಗೆಲ್ಲದೆ ವಿಧಿಯಿಲ್ಲ.
ಇನ್ನು ಬೆಂಗಳೂರು ತಂಡದ ಪರ ಇದುವರೆಗೂ ನಾಯಕ ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್ ಹಾಗೂ ಡಿ ವಿಲಿಯರ್ಸ್ ಆಕರ್ಷಕ ಪ್ರದರ್ಶನ ನೀಡಿದ್ದಾರೆ. ಆದರೆ, ಇತರ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇನ್ನಷ್ಟು ದಕ್ಷ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಅಗ್ರ ಕ್ರಮಾಂಕದಲ್ಲಿ ಕೆಲ ಬಾರಿ ಬೆಂಗಳೂರಿಗೆ, ಉತ್ತಮ ಮೊತ್ತ ಕಲೆ ಹಾಕಲು ಸಾಧ್ಯವಾಗದಿರಬಹುದು. ಹೀಗಾಗಿ ಅಗ್ರ ಕ್ರಮಾಂಕದಲ್ಲಿ ಮಾಯಾಂಕ್ ಅಗರ್ವಾಲ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಚಾಕಚಾಕ್ಯತೆಯನ್ನು ಮೆರೆಯಬೇಕಿದೆ.
ಅಲ್ಲದೆ ಆರ್‌ಸಿಬಿ ತಂಡದ ವಿದೇಶಿ ಆಟಗಾರರಾದ ತಿಲಕರತ್ನೆ ದಿಲ್ಷಾನ್ ಹಾಗೂ ಡೇನಿಯಲ್ ಕ್ರಿಸ್ಚಿಯಾನ್ ಬ್ಯಾಟಿಂಗ್‌ನಲ್ಲಿ ಇನ್ನೂ ಲಯ ಕಂಡುಕೊಳ್ಳಬೇಕಿದೆ.
ಬೆಂಗಳೂರಿನ ಬೌಲಿಂಗ್ ವಿಭಾಗ ಇದುವರೆಗೂ ಉತ್ತಮ ಬೌಲಿಂಗ್ ಪ್ರದರ್ಶಿಸಿದೆ. ಆದರೆ, ಅಂತ್ಯದ ಓವರ್‌ಗಳಲ್ಲಿ ಅದು ಕೊಂಚ ಪ್ರಯಾಸಪಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಅಂತಿಮ ಐದು ಓವರ್‌ಗಳಲ್ಲಿ ವಿನಯ್ ಕುಮಾರ್, ರವಿ ರಾಂಪಾಲ್ ಹಾಗೂ ಆರ್.ಪಿ ಸಿಂಗ್ 53 ರನ್ ನೀಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ.ಇದುವರೆಗೂ ಬೆಂಚ್ ಕಾಯುತ್ತಿರುವ ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್, ಕ್ರಿಸ್ಟೋಫರ್ ಬರ್ನ್‌ವೆಲ್, ಡೇನಿಯಲ್ ವೆಟೋರಿ, ಹರ್ಷಲ್ ಪಟೇಲ್, ಕೆ.ಪಿ ಅಪ್ಪಣ್ಣ, ಪಂಕಜ್ ಸಿಂಗ್ ಹಾಗೂ ಪಿ ಪ್ರಶಾಂತ್ ಅವರಲ್ಲಿ ಕೆಲವರಿಗೆ ಅವಕಾಶ ನೀಡುವ ಮೂಲಕ ಆರ್‌ಸಿಬಿ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದರೆ ಅಚ್ಚರಿ ಪಡಬೇಕಿಲ್ಲ. ಲಂಕಾದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧರನ್ ಲಯಕ್ಕೆ ಮರಳಿರುವುದು ಆರ್‌ಸಿಬಿಗೆ ಮಹತ್ವದ ಬೆಳವಣಿಗೆಯಾಗಿದೆ. ಮುರಳಿ ಕಾರ್ತಿಕ್ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವ ಡೇರ್‌ಡೆವಿಲ್ಸ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಾಣುತ್ತಿರುವುದೇ, ತಂಡದ ಸತತ ಸೋಲಿಗೆ ಪ್ರಮುಖ ಕಾರಣವಾಗಿದೆ.
ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಫಾರ್ಮ್‌ಗೆ ಮರಳದಿರುವುದು ದೊಡ್ಡ ಸಮಸ್ಯೆಯಾಗಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ಸೆಹ್ವಾಗ್ ಹೈದರಾಬಾದ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಕೇವಲ 12 ರನ್‌ಗಳಿಗೆ ತೃಪ್ತಿಪಟ್ಟಿದ್ದರು. ಅಲ್ಲದೆ ಡೇವಿಡ್ ವಾರ್ನರ್ ಹೊರತುಪಡಿಸಿ ಡೆಲ್ಲಿ ತಂಡದ ವಿದೇಶಿ ಆಟಗಾರರೂ ಮಹತ್ವದ ಕೊಡೆಗೆಯನ್ನು ನೀಡುತ್ತಿಲ್ಲ. ರಾಜಸ್ಥಾನ ಮತ್ತು ಮುಂಬೈ ವಿರುದ್ಧ ವಾರ್ನರ್ ಕ್ರಮವಾಗಿ 77 ಮತ್ತು 61 ರನ್ ಗಳಿಸಿದ್ದರು.
ನಾಯಕ ಮಹೇಲ ಜಯವರ್ಧನೆ ಸಹ ಫಾರ್ಮ್‌ನಲ್ಲಿ ಇಲ್ಲ. ಇದುವರೆಗೂ ಕೋಲ್ಕತಾ ವಿರುದ್ಧ ಮಾತ್ರ ಜಯವರ್ಧನೆ ಅರ್ಧ ಶತಕ ದಾಖಲಿಸಿದ್ದಾರೆ. ಆ್ಯಂಡ್ರೆ ರಸೆಲ್, ಮಾರ್ನೆ ಮಾರ್ಕೆಲ್, ಜೀವನ್ ಮೆಂಡಿಸ್ ಹಾಗೂ ಜಾನ್ ಬೋಥಾ ಸತತ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ. ಕೆವಿನ್ ಪೀಟರ್ಸನ್ ಮತ್ತು ಜೆಸ್ಸಿ ರೈಡರ್ ಅನುಪಸ್ಥಿತಿಯಲ್ಲಿ ಡೆಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ. ವೇಗಿ ಮಾರ್ನೆ ಮಾರ್ಕೆಲ್, ಉಮೇಶ್ ಯಾದವ್, ಇರ್ಫಾನ್ ಪಠಾಣ್ ಹಾಗೂ ಆಶಿಶ್ ನೆಹ್ರಾ ಅವರೊಂದಿಗೆ ಡೆಲ್ಲಿ ಉತ್ತಮ ಬೌಲಿಂಗ್ ವಿಭಾಗ ಹೊಂದಿದೆ. ಇವರಾರೂ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿಲ್ಲ.
ಆರ್‌ಸಿಬಿ
ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಕೆ.ಪಿ ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ಕ್ರಿಸ್ಟೊಫರ್ ಬರ್ನ್‌ವೆಲ್, ಡೇನಿಯಲ್ ಕ್ರಿಸ್ಚಿಯನ್, ಎಬಿ ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಯ್ಲ್, ಮೊಯ್ಸಿಸ್ ಹೆನ್ರಿಕೇಸ್, ಶೆಲ್ಡನ್ ಜಾಕ್ಸನ್, ಮುರಳಿ ಕಾರ್ತಿಕ್, ಜಹೀರ್ ಖಾನ್, ಆ್ಯಂಡ್ರೂ ಮೆಕ್‌ಡೊನಾಲ್ಡ್, ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಮುತ್ತಯ್ಯ ಮುರಳಿಧರನ್, ಕರುಣ್ ನಾಯರ್, ಪಂಕಜ್ ಸಿಂಗ್, ಪಿ.ಪರಮೇಶ್ವರನ್, ಹರ್ಶದ್ ಪಟೇಲ್, ಚೇತೇಶ್ವರ ಪೂಜಾರ, ರವಿ ರಾಮ್‌ಪಾಲ್, ಸಂದೀಪ್ ವಾರಿಯರ್, ಆರ್.ಪಿ. ಸಿಂಗ್, ಸನ್ನಿ ಸೋಹೈಲ್, ಸೈಯದ್ ಮಹಮದ್, ಸೌರಬ್ ತಿವಾರಿ, ಜಯ್‌ದೇವ್ ಉನದ್ಕತ್, ಡೇನಿಯಲ್ ವೆಟ್ಟೊರಿ, ವಿನಯ್ ಕುಮಾರ್, ವಿಜಯ್ ಜೋಲ್.
ಡೇರ್‌ಡೆವಿಲ್ಸ್
ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್, ಮಹೇಲಾ ಜಯವರ್ಧನೆ, ಮನ್‌ಪ್ರೀತ್ ಜುನೇಜಾ, ವರುಣ್ ಆ್ಯರನ್, ಅಜಿತ್ ಅಗರ್ಕರ್, ಗುಲಬ್ ಬೋಡಿ, ಜೊಹಾನ್ ಬೊತಾ, ಉನ್ಮುಕ್ತ್ ಚಂದ್, ರಾಯ್‌ಸ್ಟನ್ ಡಯಾಸ್, ಸಿ.ಎಂ.ಗೌತಮ್, ಕೇದಾರ್ ಜಾದವ್, ಸಿದ್ದಾರ್ತ್ ಕೌರ್, ಜೀವನ್ ಮೆಂಡಿಸ್, ಮಾರ್ನೆ ಮಾರ್ಕೆಲ್, ಶಹ್‌ನಾಬ್ ನದೀಂ, ಯೋಗೇಶ್ ನಾಯರ್, ಸುಜಿತ್ ನಾಯಕ್, ಪವನ್ ನೇಗಿ, ನಮನ್ ಓಜಾ, ಇರ್ಫಾನ್ ಪಠಾಣ್, ಆ್ಯಂಡ್ರೂ ರಸೆಲ್, ಅರ್ಷಿತ್ ಸಿಂಗ್ವಿ, ವಾನ್ ಡರ್ ಮರ್ವೆ, ವೇಣುಗೋಪಾಲ್ ರಾವ್, ಉಮೇಶ್ ಯಾದವ್.