ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗೋಡೆ ಪಡೆಗೆ ಮುಂಬೈ ಸವಾಲು

Vishwanath S
Updated On : 16 Apr 2013, 11:37 am

ಜೈಪುರ: ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಮೂರರಲ್ಲಿ ಗೆದ್ದು ಸಮಬಲದ ಸಾಧನೆ ಮಾಡಿರುವ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಬುಧವಾರ ನಡೆಯಲಿರುವ ಪಂದ್ಯದಲ್ಲಿ ಹಣಾಹಣಿ ನಡೆಸಲು ಸಿದ್ಧವಾಗಿವೆ.
ಆದರೆ, ಉಭಯ ತಂಡಗಳ ಬಲಾಬಲವನ್ನು ಪರೀಕ್ಷಿಸಿದಾಗ, ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ತಂಡವೆನಿಸಿದೆ. ಹೀಗಾಗಿ ಇದುವರೆಗೂ ಸ್ಥಿರ ಪ್ರದರ್ಶನ ನೀಡಿರುವ ನಾಯಕ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ತವರಿನ ಅಂಗಣದಲ್ಲೇ ಸತ್ವ ಪರೀಕ್ಷೆ ಎದುರಾಗಿದೆ.
ಎಲ್ಲ ವಿಭಾಗಗಳಲ್ಲೂ ಬಲಿಷ್ಠ ಪ್ರದರ್ಶನ ತೋರುತ್ತಿರುವ ಮುಂಬೈ ಸವಾಯಿ ಮಾನಸಿಂಗ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಫೆವರಿಟ್ ಎನಿಸಿದೆ.
ಉಭಯ ತಂಡಗಳೂ ಆಡಿರುವ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಆರು ಅಂಕಗಳನ್ನು ಹೊಂದಿದ್ದರೆ, ರಾಜಸ್ಥಾನಕ್ಕಿಂತ ರನ್‌ರೇಟ್‌ನಲ್ಲಿ ಉತ್ತವಾಗಿರುವ ಮುಂಬೈ ಅಂಕಪಟ್ಟಿಯಲ್ಲಿ ಉನ್ನತಸ್ಥಾನದಲ್ಲಿದೆ.
ಸ್ಟಾರ್ ಆಟಗಾರರನ್ನೇ ಹೊಂದಿದ್ದರೂ ಮುಂಬೈ ತಂಡ ಸೋಲದಷ್ಟು ಶಕ್ತಿಯನ್ನೇನು ಹೊಂದಿಲ್ಲ ಎಂಬುದನ್ನು ರಾಜಸ್ಥಾನ ಅರ್ಥ ಮಾಡಿಕೊಂಡದೆ. ಅಲ್ಲದೆ ಇದುವರೆಗೂ ಮುಂಬೈ ಪಂದ್ಯಾವಳಿಯಲ್ಲಿ ಒಂದು ಬಾರಿ ಸಹ ಪ್ರಶಸ್ತಿ ಮುಡಿಗೇರಿಸಿಕೊಂಡಿಲ್ಲ. 2010ರಲ್ಲಿ ಫೈನಲ್ ಪ್ರವೇಶಿಸಿದ್ದ ಮುಂಬೈ ತಂಡ ಚೆನ್ನೈ ವಿರುದ್ಧ ಸೋಲುವ ಮೂಲಕ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.
ವಿಶ್ವ ಕ್ರಿಕೆಟ್ ಸ್ಟಾರ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್ ಅವರೊಂದಿಗೆ ಟಿ20 ಆಟಗಾರ ದಿನೇಶ್ ಕಾರ್ತಿಕ್, ಕೀರನ್ ಪೊಲಾರ್ಡ್, ಲಸಿತ್ ಮಾಲಿಂಗ ಹಾಗೂ ರೋಹಿತ್ ಶರ್ಮಾ ಇದುವರೆಗೂ ತಂಡದ ಶಕ್ತಿಯೆನಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಅಂಬಾಟಿ ರಾಯುಡು ಹಾಗೂ ಮುನಾಫ್ ಪಟೇಲ್ ತಂಡಕ್ಕೆ ಬಲ ನೀಡಬಲ್ಲ ಆಟಗಾರರಾಗಿದ್ದಾರೆ.
ಇದುವರೆಗೂ ತಂಡದ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿರುವ ದಿನೇಶ್ ಕಾರ್ತಿಕ್ (224 ರನ್), ಎರಡು ಬಾರಿ ಅರ್ಧ ಶತಕ ಸಿಡಿಸಿದ್ದು, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಗಳಿಸಿದ್ದ 86 ರನ್ ಅವರ ಶ್ರೇಷ್ಠ ಮೊತ್ತವಾಗಿದೆ. ಇನ್ನು 155 ರನ್ ಗಳಿಸಿರುವ ರೋಹಿತ್ ಶರ್ಮಾ ಅವರೊಂದಿಗೆ, ಕೀರನ್ ಪೊಲಾರ್ಡ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ತೆಂಡೂಲ್ಕರ್ ಸಹ ಉತ್ತಮ ಫಾರ್ಮ್‌ನಲ್ಲಿದ್ದು, ಆದರೆ, ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಗಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮಾಲಿಂಗ ತಂಡ ಸೇರುವುದರೊಂದಿಗೆ ಹೊಸ ಕಳೆ ಉಂಟಾಗಿದೆ. ಮಿಚೆಲ್ ಜಾನ್ಸನ್, ಪ್ರಗ್ಯಾನ್ ಓಜಾ, ಹರ್ಭಜನ್ ಸಿಂಗ್ ಹಾಗೂ ಪೊಲಾರ್ಡ್ ವಿಭಿನ್ನ ಬೌಲಿಂಗ್ ಪ್ರದರ್ಶಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಅಲ್ಲದೆ ಕಳೆದ ಆವೃತ್ತಿಯಲ್ಲಿ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು 10 ವಿಕೆಟ್ ಅಂತರದಿಂದ ಸೋಲಿಸಿದ್ದ ಮುಂಬೈ ಈ ಬಾರಿ ಸಹ ಗೆಲ್ಲುವ ವಿಶ್ವಾಸದಲ್ಲಿದೆ.
ಇನ್ನೊಂದೆಡೆ ರಾಜಸ್ಥಾನ ತಂಡ ನಾಯಕ ರಾಹುಲ್ ದ್ರಾವಿಡ್ ಎರಡು ಅರ್ಧ ಶತಕ ಸಿಡಿಸುವುದರೊಂದಿಗೆ ಫಾರ್ಮ್‌ನಲ್ಲಿರುವುದು ವಿಶ್ವಾಸ ಮೂಡಿಸಿದೆ. ದ್ರಾವಿಡ್ ಅವರೊಂದಿಗೆ ಅಜಿಂಕ್ಯ ರಹಾನೆ ಸಹ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಇನ್ನು ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಶೇನ್ ವ್ಯಾಟ್ಸನ್ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಗುಡುಗಿ ಲಯಕ್ಕೆ ಮರಳಿರುವುದನ್ನು ಖಚಿತಪಡಿಸಿದ್ದಾರೆ.
ಬ್ರಾಡ್ ಹಾಡ್ಜ್ ಮತ್ತು ಕೆವಿನ್ ಕೂಪರ್ ಸಹ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ರಾಜಸ್ಥಾನದ ಅಭಿಮಾನಿಗಳ ಬೆಂಬಲದೊಂದಿಗೆ ಮನೆಯಂಗಣದಲ್ಲಿ ಆಡುತ್ತಿದ್ದರೂ, ಮುಂಬೈ ವಿರುದ್ಧ ಜಯ ಸಾಧಿಸಬೇಕಾದರೆ ಹರಸಾಹಸಪಡಬೇಕಾದ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement