ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಾರಿಯರ್ಸ್- ರೈಸರ್ಸ್ ಜಿದ್ದಾಜಿದ್ದಿ

Vishwanath S
Updated On : 16 Apr 2013, 11:36 am

ಪುಣೆ: ಎರಡು ಬಾರಿ ಚಾಂಪಿಯನ್ ಪಟ್ಟ ಧರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿದ ನಂತರ ವಿಶ್ವಾಸ ವೃದ್ಧಿಸಿಕೊಂಡಿರುವ ಪುಣೆ ವಾರಿಯರ್ಸ್ ತಂಡ, ಬುಧವಾರ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮಣಿಸಲು ಎದುರು ನೋಡುತ್ತಿದೆ.
ಬಲಿಷ್ಠ ಚೆನ್ನೈ ವಿರುದ್ಧ 24 ರನ್‌ಗಳ ಅಂತರದಿಂದ ಜಯ ಸಾಧಿಸಿರುವುದು ತಂಡದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಅಲನ್ ಡೋನಾಲ್ಡ್ ಗರಡಿಯಲ್ಲಿ ತರಬೇತಿ ಪಡೆದಿರುವ ಪುಣೆ ವಾರಿಯರ್ಸ್ ತಂಡ ಇದುವರೆಗೂ ಆಡಿರುವ ಐದು ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿದ್ದು 3 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಆರಂಭಿಕ ಆಟಗಾರ ಆ್ಯರೋನ್ ಫಿಂಚ್ ಮತ್ತು ಸ್ಟೀವನ್ ಸ್ಮಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ, ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪುಣೆ ಸ್ಪರ್ಧಾತ್ಮಕ ಸವಾಲೊಡ್ಡಿತ್ತು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸುಬ್ರತಾ ರಾಯ್ ಸಹರಾ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್‌ನೊಂದಿಗೆ ಗುಡುಗುವ ಸಾಧ್ಯತೆಗಳಿವೆ.
ನಾಯಕ ಏಂಜೆಲೋ ಮ್ಯಾಥ್ಯೂವ್ಸ್ ಅನುಪಸ್ಥಿತಿಯಲ್ಲಿ, ಐಪಿಎಲ್‌ನಲ್ಲಿ ಶ್ರೇಷ್ಠ ದಾಖಲೆ ಮಾಡಿದ ಚೆನ್ನೈ ವಿರುದ್ಧ ರಾಸ್ ಟೇಲರ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರು.
ಆದರೆ, ನ್ಯೂಜಿಲೆಂಡ್ ಆಟಗಾರ ಟೇಲರ್ ತಮ್ಮ ವೈಯಕ್ತಿಕ ಪ್ರದರ್ಶನದ ಬಗ್ಗೆ ತೃಪ್ತಿ ಹೊಂದಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಟೇಲರ್ ಇದುವರೆಗೂ ದೊಡ್ಡ ಮೊತ್ತವನ್ನು ದಾಖಲಿಸಿ ತಂಡಕ್ಕೆ ನೆರವಾಗಿಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲಿ ಚೆನ್ನೈ ವಿರುದ್ಧ ಭುವನೇಶ್ವರ ಕುಮಾರ್ ಆಕರ್ಷಕ ಪ್ರದರ್ಶನ ನೀಡಿದ್ದರು. ಅಶೋಕ್ ದಿಂಡಾ ಮತ್ತು ಮಿಚೆಲ್ ಮಾರ್ಷ್ ಸಹ ಭುವನೇಶ್ವರ ಜತೆ ತಕ್ಕ ಸಾಥ್ ನೀಡಿದ್ದರು. ಚೆನ್ನೈ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನೇ ಕಟ್ಟಿ ಹಾಕಿರುವ ಪುಣೆ ಬೌಲರ್‌ಗಳಿಗೆ, ಮಿಂಚಲು ಹೈದರಾಬಾದ್ ವಿರುದ್ಧ ಮತ್ತೊಂದು ಸುವರ್ಣ ಅವಕಾಶ ದೊರಕಿದಂತಾಗಿದೆ.
ಇನ್ನೊಂದೆಡೆ ಹೈದರಾಬಾದ್ ತಂಡ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲನುಭವಿಸಿದ ನಂತರ ಜಯದ ಹಳಿಗೆ ಮರಳಲು ಎದುರು ನೋಡುತ್ತಿದೆ. ಅಲ್ಲದೆ, ಇನ್ನೊಂದು ಪಂದ್ಯ ಸಹ ತವರಿನಿಂದ ಹೊರಗೆ ನಡೆಯಲಿದ್ದು, ಅದರಲ್ಲಿ ಜಯ ಕಾಣಬೇಕಾದರೆ ಸಾಕಷ್ಟು ಸಾಮರ್ಥ್ಯವನ್ನು ಪ್ರಯೋಗಿಸಬೇಕು ಎಂಬುದನ್ನು ಅದು ಮನಗಂಡಿದೆ.
ಪುಣೆ ತಂಡ ಕೋಲ್ಕತಾದಷ್ಟು ಬಲಿಷ್ಠವಲ್ಲದಿರಬಹುದು. ಆದರೆ, ಯಾವುದೇ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸಬಾರದು ಎಂಬ ಅಂಶದ ಬಗ್ಗೆ ಹೈದರಾಬಾದ್‌ಗೆ ಮನವರಿಕೆ ಇದೆ.
ಗೌತಮ್ ಗಂಭೀರ್, ಜಾಕ್ ಕಾಲಿಸ್ ಹಾಗೂ ಇಯಾನ್ ಮಾರ್ಗನ್ ಬಿಲಿಷ್ಠ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಹೈದರಾಬಾದ್ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೈಚೆಲ್ಲಿತ್ತು. ಆದರೆ, ಪುಣೆ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಹೈದರಾಬಾದ್ ಬೌಲರ್‌ಗಳು ಹೊಂದಿದ್ದಾರೆ.
ಡೇಲ್ ಸ್ಟೇನ್ ನಾಯಕತ್ವದ ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮಾ, ಅಮಿತ್ ಮಿಶ್ರಾ ಹಾಗೂ ತಿಸರಾ ಪೆರೇರಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement