ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಮಿತ್ ಆರ್ಭಟ: ಮಿನುಗಿದ ರೈಸರ್ಸ್

ಅಮಿತ್ ಮಿಶ್ರಾ ಅದ್ಭುತ ಆಲ್ರೌಂಡ್ ಪ್ರದರ್ಶನ ನೆರವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಪುಣೆ ವಾರಿಯ್ಸ್ ವಿರುದ್ಧ ...

Vishwanath S
Updated On : 18 Apr 2013, 1:54 am

ಪುಣೆ: ಅಮಿತ್ ಮಿಶ್ರಾ ಅದ್ಭುತ ಆಲ್ರೌಂಡ್ ಪ್ರದರ್ಶನ ನೆರವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಪುಣೆ ವಾರಿಯ್ಸ್ ವಿರುದ್ಧ 11 ರನ್‌ಗಳ ಅಂತರದಿಂದ ಜಯ ಸಾಧಿಸಿತು.
ಪಂದ್ಯದ 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ 4 ವಿಕೆಟ್ ಪಡೆದ ಮಿಶ್ರಾ ಗೆಲುವಿನಂಚಿನಲ್ಲಿದ್ದ ಪುಣೆ ವಾರಿಯರ್ಸ್‌ಗೆ ಸೋಲಿನ ರುಚಿ ಉಣಿಸಿದರು. ರೈಸರ್ಸ್ ತಂಡದ ಪರ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಮಿಶ್ರಾ 24 ಎಸೆತಗಳನ್ನು ಎದುರಿಸಿ 30 ರನ್ ಪೇರಿಸಿ ತಂಡಕ್ಕೆ ನೆರವಾಗಿದ್ದರು. ಅಲ್ಲದೆ ಮಿಶ್ರಾ ಇದುವರೆಗೂ ಆರು ಐಪಿಎಲ್ ಆವೃತ್ತಿಗಳಲ್ಲಿ ಮೂರನೇ ಹ್ಯಾಟ್ರಿಕ್ ಸಾಧಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಸನ್‌ರೈಸರ್ಸ್ ತಂಡ 8 ವಿಕೆಟ್ ಕಳೆದುಕೊಂಡು ಸಾಧಾರಣ 119 ರನ್ ಕಲೆ ಹಾಕಿತ್ತು. ನಂತರ ಈ ಹಗುರ ಮೊತ್ತವನ್ನು ಬೆನ್ನಟ್ಟಿದ ಪುಣೆ ವಾರಿಯರ್ಸ್ ಬ್ಯಾಟ್ಸ್‌ಮನ್‌ಗಳು ಸನ್‌ರೈಸರ್ಸ್ ಬೌಲಿಂಗ್ ದಾಳಿಗೆ ತತ್ತರಿಸುವ ಮೂಲಕ 19 ಓವರ್‌ಗಳಲ್ಲಿ 108 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೈಚೆಲ್ಲಿತು.  ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಮಿಶ್ರಾ 19 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ನಾಲ್ಕೂ ವಿಕೆಟ್‌ಗಳನ್ನೂ ಮಿಶ್ರಾ ತಮ್ಮ ಅಂತಿಮ ಓವರ್‌ನ 2ನೇ, 4ನೇ, 5ನೇ ಹಾಗೂ 6ನೇ ಎಸೆತದಲ್ಲಿ ಪಡೆದರು.
19ನೇ ಓವರ್ ವೇಳೆಗೆ ಪುಣೆ ವಾರಿಯರ್ಸ್ ತಂಡಕ್ಕೆ ಗೆಲ್ಲಲು 14 ರನ್‌ಗಳು ಬೇಕಾಗಿತ್ತು. ಆದರೆ, 19ನೇ ಓವರ್‌ನಲ್ಲಿ ವಾರಿಯರ್ಸ್‌ನ ಅಂತಿಮ ನಾಲ್ಕು ವಿಕೆಟ್ ಉರುಳಿದ್ದು, ತವರಿನ ಅಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಶಾಕ್ ನೀಡಿತು.
ತವರಿನ ತಂಡ 13 ಎಸೆತಗಳಲ್ಲಿ ಕೇವಲ 7 ರನ್‌ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.
ನಾಯಕ ಆ್ಯಂಜೆಲೋ ಮ್ಯಾಥ್ಯೂವ್ಸ್ (20) ಮಿಶ್ರಾ ಬೌಲಿಂಗ್‌ನಲ್ಲಿ ಡೇಲ್ ಸ್ಟೇಯ್ನ್‌ಗೆ ಕ್ಯಾಚ್ ನೀಡುವುದರೊಂದಿಗೆ ಪುಣೆ ಗೆಲುವಿನಿಂದ ವಿಮುಖವಾಯಿತು. ಅನಂತರ ನಿರಂತರವಾಗಿ ಗೂಗ್ಲೀ ಪ್ರಯೋಗ ಮಾಡಿದ ಮಿಶ್ರಾ ಭುವನೇಶ್ವರ ಕುಮಾರ್, ರಾಹುಲ್ ಶರ್ಮಾ ಹಾಗೂ ಅಶೋಕ್ ದಿಂಡಾ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಸಾಧಾರಣ ಗುರಿಯನ್ನು ಬೆನ್ನಟ್ಟಿದ್ದ ಪುಣೆ ತಂಡದ ಆರಂಭಿಕರಾದ ರಾಬಿನ್ ಉತ್ತಪ್ಪ (22) ಮತ್ತು ಆ್ಯರೋನ್ ಫಿಂಚ್ (16) ಬೇಗನೆ ಪೆವಿಲಿಯನ್‌ಗೆ ಮರಳಿದರೂ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟಿದ್ದರು. ಆದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳು ತಂಡವನ್ನು ಗೆಲವಿನಡೆಗೆ ಸಾಗಿಸುವಲ್ಲಿ ಎಡವಿದರು.
ಇದರೊಂದಿಗೆ ಸನ್‌ರೈಸರ್ಸ್ ಆಡಿದ ಆರು ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ. ಆದರೆ, ಸೋಲನುಭವಿಸಿದ ಪುಣೆ ವಾರಿಯರ್ಸ್ ಆಡಿದ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.       ಸನ್‌ರೈಸರ್ಸ್‌ನ ಮಿಶ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ಬೋರ್ಡ್
ಸನ್‌ರೈಸರ್ಸ್ ಹೈದರಾಬಾದ್ 119/8 (20 ಓವರ್)
ಪಾರ್ಥೀವ್ ಬಿ ಭುವನೇಶ್ವರ್ 12 (9), ಕಾಕ್ ಸಿ ಮಾರ್ಷ್ ಬಿ ದಿಂಡಾ 2 (8), ವಿಹಾರಿ ಸಿ ಫಿಂಚ್ ಬಿ ಭುವನೇಶ್ವರ್ 1 (8), ವೈಟ್ ಬಿ ಕುಮಾರ್ 0 (1), ಸಮಂತ್ರೆ ಸಿ ಪಾಂಡೆ ಬಿ ರಾಹುಲ್ 37 (37), ಕರಣ್ ಎಲ್‌ಬಿಡಬ್ಲ್ಯೂ ಬಿ ರಾಹುಲ್ 7 (13), ಪೆರೇರಾ ಸಿ ಉತ್ತಪ್ಪ ಬಿ ಮಾರ್ಷ್ 2 (4), ಮಿಶ್ರಾ ರನೌಟ್ (ಪಾಂಡೆ/ಉತ್ತಪ್ಪ) 30 (24), ಆಶಿಶ್ ರೆಡ್ಡಿ ಅಜೇಯ 19 (15), ಸ್ಟೇಯ್ನ್ ಅಜೇಯ 4 (1), ಇತರೆ 5.
ವಿಕೆಟ್ ಪತನ: 1-5, 2-15, 3-15, 4-17, 5-41, 6-44, 7-75, 8-115
ಬೌಲಿಂಗ್: ಭುವನೇಶ್ವರ್ 4-0-18-3, ದಿಂಡಾ 4-0-25-1, ಮ್ಯಾಥ್ಯೂಸ್ 4-0-29-0, ರಾಹುಲ್ 4-0-21-2, ಮಾರ್ಷ್ 4-0-26-1
ಪುಣೆ ವಾರಿಯರ್ಸ್ 108 (19 ಓವರ್)
ಉತ್ತಪ್ಪ ಸಿ ಸಮಂತ್ರೆ ಬಿ ಪೆರೇರಾ 22 (14), ಫಿಂಚ್ ಸಿ ಕಾಕ್ ಬಿ ಪೆರೇರಾ 16 (13), ಸುಮನ್ ಎಲ್‌ಬಿಡಬ್ಲ್ಯೂ ಬಿ ಕರಣ್ 12 (14), ಸ್ಮಿತ್ ಸಿ ಆಶಿಶ್ ಬಿ ಇಶಾಂತ್ 17 (25), ಮ್ಯಾಥ್ಯೂಸ್ ಸಿ ಸ್ಟೇಯ್ನ್ ಬಿ ಮಿಶ್ರಾ 20 (24), ಮಾರ್ಷ್ ಸಿ ಆಶಿಶ್ ಬಿ ಸ್ಟೇಯ್ನ್ 14 (13), ನಾಯರ್ ಸಿ ಸಮಂತ್ರೆ ಬಿ ಪೆರೇರಾ 0 (2), ಪಾಂಡೆ ಅಜೇಯ 7 (6), ಭುವನೇಶ್ವರ್ ಎಲ್‌ಬಿಡಬ್ಲ್ಯೂ ಬಿ ಮಿಶ್ರಾ 0 (1), ರಾಹುಲ್ ಬಿ ಮಿಶ್ರಾ 0 (1), ದಿಂಡಾ ಬಿ ಮಿಶ್ರಾ 0 (1), ಇತರೆ 0.
ವಿಕೆಟ್ ಪತನ: 1-38, 2-38, 3-57, 4-76, 5-101, 6-101, 7-107, 8-108, 9-108, 10-108
ಬೌಲಿಂಗ್: ಇಶಾಂತ್ 4-0-22-1, ಸ್ಟೇಯ್ನ್ 4-0-34-1, ಪೆರೇರಾ 4-0-20-3, ಮಿಶ್ರಾ 4-0-19-4, ಕರಣ್ 3-0-13-1
ಪಂದ್ಯ ಶ್ರೇಷ್ಠ: ಅಮಿತ್ ಮಿಶ್ರಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement