ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಶ್ಯಪ್, ಸಿಂಧು ಶುಭಾರಂಭ

Vishwanath S
Updated On : 17 Apr 2013, 10:28 am

ತೈಪೇ: ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್ ಹಾಗೂ ಉದಯೋನ್ಮುಖ ಆಟಗಾರ್ತಿ ಪಿ.ವಿ ಸಿಂಧು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದು, ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಪಂದ್ಯಾವಳಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಕಶ್ಯಪ್, ತಮ್ಮ ಮೊದಲ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿ ಹೂನ್ ಹಾಂಗ್ ಅವರನ್ನು ಮಣಿಸಿ, ಮುಂದಿನ ಸುತ್ತಿಗೆ ಅಡಿ ಇಟ್ಟಿದ್ದಾರೆ.
ಒಂದು ಗಂಟೆ ಒಂಬತ್ತು ನಿಮಿಷ ನಡೆದ ಈ ಪಂದ್ಯದಲ್ಲಿ ಕಶ್ಯಪ್ ಎದುರಾಳಿ ಜಿ ಹೂನ್ ಹಾಂಗ್ ಅವರನ್ನು 18-21, 21-15, 22-10 ಸೆಟ್‌ಗಳ ಅಂತರದಲ್ಲಿ ಮಣಿಸಿದರು.
ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಕಶ್ಯಪ್, ಎರಡನೇ ಸೆಟ್‌ನಲ್ಲಿ ಆಕ್ರಮಣಕಾರಿ ದಾಳಿ ನಡೆಸಿ ಮೇಲುಗೈ ಸಾಧಿಸಿದರು. ನಂತರ ಮೂರನೇ ಸೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಕಶ್ಯಪ್ ಈ ಸೆಟ್ ಅನ್ನು ತಮ್ಮದಾಗಿಸಿಕೊಂಡು ಪಂದ್ಯದಲ್ಲಿ ಗೆಲುವಿನ ನಗೆ ಬೀರಿದರು.
ಕಶ್ಯಪ್ ತಮ್ಮ ಮುಂದಿನ ಸುತ್ತಿನಲ್ಲಿ ಸ್ಥಳಿಯ ಆಟಗಾರ ಹಾನ್ ಚೌ ಚು ಅವರನ್ನು ಎದುರಿಸಲಿದ್ದಾರೆ.
ಮತ್ತೊಬ್ಬ ಆಟಗಾರ ಸಾಯಿ ಪ್ರಣೀತ್ ಕೂಡ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದು, ಮೊದಲ ಸುತ್ತಿನ ಪಂದ್ಯದಲ್ಲಿ ಎದುರಾಳಿ ಮಹಮದ್ ಅಜ್ಫಾನ್ ರಶೀದ್ ಅವರನ್ನು ಕೇವಲ 22 ನಿಮಿಷಗಳಲ್ಲಿ 21-10, 21-12 ನೇರ ಸೆಟ್‌ಗಳ ಗೆಲುವು ಸಾಧಿಸಿದರು.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ ಸಿಂಧು ತಮ್ಮ ಎದುರಾಳಿ ಹಾಂಕಾಂಗ್‌ನ ತಸ್ಜ್ ಕಾ ಚಾನ್ ಅವರನ್ನು ಕೇವಲ ಅರ್ಧ ಗಂಟೆ ನಡೆದ ಪಂದ್ಯದಲ್ಲಿ 21-18, 21-19 ನೇರ ಸೆಟ್‌ಗಳ ಸುಲಭ ಜಯ ಸಾಧಿಸಿದ್ದಾರೆ.
ಸಿಂಧು ತಮ್ಮ ಮುಂದಿನ ಸುತ್ತಿನಲ್ಲಿ ಪ್ರಬಲ ಎದುರಾಳಿಯಾದ ವಿಶ್ವದ 6ನೇ ರ್ಯಾಂಕಿಂಗ್‌ನ ವಾಂಗ್ ಶಿಕ್ಸಿಂಯಾನ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತ ಉತ್ತಮ ಫಲಿತಾಂಶವನ್ನು ಕಾಣಲಿಲ್ಲ. ಡಬಲ್ಸ್ ವಿಭಾಗದಲ್ಲಿ ಭಾರತದ ಮೂರು ಜೋಡಿಗಳು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿತು.
ಪ್ರಣವ್ ಜೆರ್ರಿ ಚೋಪ್ರಾ ಮತ್ತು ಅಕ್ಷಯ್ ದೇವಾಲ್ಕರ್ ಜೋಡಿಯು ತೈಪೇನ ಹುಂಗ್ ಲಿಂಗ್ ಚೆನ್ ಮತ್ತು ಚಿಯಾ ಪಿನ್ ಲೂ ಜೋಡಿ ವಿರುದ್ಧ 21-17, 21-17 ನೇರ ಸೆಟ್‌ಗಳ ಪರಾಭವಗೊಂಡಿತು.
ತರುಣ್ ಕೊನಾ ಮತ್ತು ಅರುಣ್ ವಿಷ್ಣು ಜೋಡಿಯು ತಮ್ಮ ಎದುರಾಳಿ ಬೌ ಡುಕ್ ಡೌಂಗ್ ಮತ್ತು ಹಾಂಗ್ ನಮ್ ಗುಯೆನ್ ಜೋಡಿ ವಿರುದ್ಧ ಉತ್ತಮ ಹೋರಾಟ ನಡೆಸಿತಾದರು, ಅಂತಿಮವಾಗಿ 24-22, 19-21, 16-21 ಅಂತರದ ಸೋಲನುಭವಿಸಿತು. ಮತ್ತೊಂದು ಪಂದ್ಯದಲ್ಲಿ ಮನು ಅತ್ತರಿ ಮತ್ತು ಸುಮಿತ್ ರೆಡ್ಡಿ ಜೋಡಿಯನ್ನು ಚೀನಾದ ಕ್ಸಿಲಾಂಗ್ ಲಿ ಮತ್ತು ಜಿಹಾನ್ ಕ್ಯು ಜೋಡಿ 21-18, 21-9 ಸೆಟ್‌ಗಳ ಅಂತರದಲ್ಲಿ ಮಣಿಸಿತು.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಮಿಶ್ರ ಫಲಿತಾಂಶ ಹೊರಬಂದಿದೆ. ಪ್ರಧ್ನ್ಯಾ ಗಾಡ್ರೆ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಕೇವಲ 29 ನಿಮಿಷದಲ್ಲಿ ತಮ್ಮ ಎದುರಾಳಿ ಪೈ ರೊಂಗ್ ವಾಂಗ್ ಮತ್ತು ಕೌ ಯೋ ವೆನ್ ಜೋಡಿಯನ್ನು 21-12, 30-29 ಸೆಟ್‌ಗಳ ಅಂತರದಲ್ಲಿ ಮಣಿಸಿತು.
ಆದರೆ ಅಪರ್ಣ ಬಾಲನ್ ಹಾಗೂ ಸಿಕಿ ರೆಡ್ಡಿ ಜೋಡಿಯು ಸಿಯೊ ಹುನ್ ಚೆನ್ ಮತ್ತು ಚೈ ವಾನ್ ಲೈ ಜೋಡಿ ವಿರುದ್ಧ 16-21, 17-21 ಸೆಟ್‌ಗಳ ಅಂತರದಲ್ಲಿ ತಲೆಬಾಗಿತು.
ಇನ್ನು ವಿಶ್ರ ಡಬಲ್ಸ್‌ನಲ್ಲಿ ತರುಣ್ ಕೋನಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿಯು ತಮ್ಮ ಮೊದಲ ಸುತ್ತಿನಲ್ಲಿ ಲಿಯು ಯಿ ಮತ್ತು ಲೈ ಯೊ ಜೋಡಿ ವಿರುದ್ಧ 14-21, 21-16, 18-21 ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement