ಕಿಂಗ್ಸ್ ಭೀತಿಯಲ್ಲಿ ಕಂಗೆಟ್ಟ ಡೆವಿಲ್ಸ್
ನವದೆಹಲಿ: ಸತತ ಐದು ಪಂದ್ಯಗಳಲ್ಲಿ ಸೋಲಿನಿಂದ ಕಂಗೆಟ್ಟು, ಜಯದ ದಾರಿಗಾಗಿ ತಡಕಾಡುತ್ತಿರುವ ಡೆಲ್ಲಿ ಡೇರ್ಡೆವಿಲ್ಸ್ ತಂಡ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೂಪರ್ ಓವರ್ನಲ್ಲಿ ಸೋಲುವ ಮೂಲಕ ಆತ್ಮ ವಿಶ್ವಾಸ ಕುಗ್ಗಿರುವ ಡೆಲ್ಲಿ ತಂಡ, ಪಂದ್ಯಾವಳಿಯಲ್ಲಿ ಲಯ ಕಂಡುಕೊಳ್ಳಬೇಕಾದರೆ, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅಗತ್ಯವಿದೆ.
ಪ್ರಮುಖ ವಿದೇಶಿ ಆಟಗಾರರಾದ ಇಂಗ್ಲೆಂಡ್ನ ಕೆವಿನ್ ಪೀಟರ್ಸನ್ ಗಾಯದ ಹಿನ್ನೆಲೆಯಲ್ಲಿ ಪಂದ್ಯಾವಳಿಯಿಂದ ದೂರ ಉಳಿದಿದ್ದು ಮತ್ತು ಬಾರೊಂದರಲ್ಲಿ ಹಲ್ಲೆಗೊಳಗಾಗಿರುವ ನ್ಯೂಜಿಲೆಂಡ್ನ ಜೆಸ್ಸಿ ರೈಡರ್ ಅಲಭ್ಯತೆ ತಂಡವನ್ನು ಕಾಡುತ್ತಿದೆ.
ಕಳೆದ ಬಾರಿ ಪ್ಲೇಆಫ್ ಹಂತ ತಲುಪಿದ ಮೊದಲ ತಂಡ ಎನಿಸಿದ್ದ ಮತ್ತು ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದ ಡೆಲ್ಲಿ, ಈ ಬಾರಿ ನೀರಸ ಪ್ರದರ್ಶನ ನೀಡುತ್ತಿರುವುದ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.
ಈಗಾಗಲೇ ಅಂಕಪಟ್ಟಿಯಲ್ಲಿ ತಳ ಸೇರಿರುವ ಡೆಲ್ಲಿ ಪಂದ್ಯಾವಳಿಯ ಮುಂದಿನ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ, ಅಚ್ಚರಿಯ ಫಲಿತಾಂಶವನ್ನೇ ಕಾಣಬೇಕಿದೆ.
ಬ್ಯಾಟಿಂಗ್ ವಿಭಾಗ ಸತತವಾಗಿ ವೈಫಲ್ಯ ಕಾಣುತ್ತಿರುವುದು ಡೆಲ್ಲಿ ತಂಡಕ್ಕೆ ದೊಡ್ಡ ಆತಂಕವಾಗಿ ಪರಿಣಮಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ನಂತರ ತವರಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಪ್ರಮುಖ ಕಾರಣವಾಗಿತ್ತು.
ಸ್ಫೋಟಕ ಬ್ಯಾಟ್ಸ್ಮನ್ ವೀರೇದ್ರ ಸೆಹ್ವಾಗ್ ಇದುವರೆಗೂ ಫಾರ್ಮ್ಗೆ ಮರಳದಿರುವುದು ತಂಡಕ್ಕೆ ಮತ್ತಷ್ಟು ಆತಂಕ ಉಂಟುಮಾಡಿದೆ.
ಗಾಯದ ಹಿನ್ನೆಲೆಯಲ್ಲಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದ ಸೆಹ್ವಾಗ್, ನಂತರ ಆಡಿದ ಪಂದ್ಯಗಳಲ್ಲೂ ಯಾವುದೇ ರೀತಿಯ ಪರಿಣಾಮಕಾರಿಯಾ ಪ್ರದರ್ಶನ ತೋರಿಲ್ಲ. ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ 23 ಎಸೆತಗಳಲ್ಲಿ 25 ರನ್ ಗಳಿಸುವ ಮೂಲಕ ತಂಡಕ್ಕೆ ಕೊಂಚ ಆಶ್ರಯವಾಗಿದ್ದರು.
ವಿದೇಶಿ ಆಟಗಾರರೂ ಡೆಲ್ಲಿ ಪರ ಆಕರ್ಷಕ ಪ್ರದರ್ಶನ ತೋರುತ್ತಿಲ್ಲ. ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನಂತರದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ಕಾಪಾಡಿಕೊಂಡು ಬರುವಲ್ಲಿ ವೈಫಲ್ಯ ಕಂಡಿದ್ದಾರೆ. ಹೈದರಾಬಾದ್ ಮತ್ತು ಆರ್ಸಿಬಿ ವಿರುದ್ಧ ನಡೆದ ಎರಡು ಪಂದ್ಯಗಳಲ್ಲಿ ವಾರ್ನರ್ ವೈಫಲ್ಯ ಕಂಡಿದ್ದಾರೆ.
ಹೀಗಾಗಿ ಪಂದ್ಯಾವಳಿಯ ತನ್ನ ಉಳಿದ ಪಂದ್ಯಗಳಲ್ಲಿ ಡೆಲ್ಲಿ ಜಯ ಸಾಧಿಸಬೇಕಾದರೆ, ಬ್ಯಾಟಿಂಗ್ ವಿಭಾಗ ಬಲಿಷ್ಠ ಪ್ರದರ್ಶನ ನೀಡಬೇಕಾಗಿದೆ.
ಆರಂಭಿಕ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ನಾಯಕ ಮಹೇಲ ಜಯವರ್ಧನೆ ಬ್ಯಾಟ್, ನಂತರದ ಪಂದ್ಯಗಳಲ್ಲಿ ಶಾಂತವಾಗಿದೆ. ಆ್ಯಡ್ರೆ ರಸೆಲ್ ಮತ್ತು ಜಾನ್ ಬೋಥಾ ಸಹ ತಂಡಕ್ಕೆ ಆಶ್ರಯವಾಗಬೇಕಿದೆ. ಈ ಪಂದ್ಯದಲ್ಲೂ ಸೋತರೆ, ಡೆಲ್ಲಿ ತಂಡ ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿಕೊಳ್ಳಲಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮಾರ್ನೆ ಮಾರ್ಕೆಲ್, ಉಮೇಶ್ ಯಾದವ್, ಇರ್ಫಾನ್ ಪಠಾಣ್ ಹಾಗೂ ಶಹಭಾಜ್ ನದೀಂ ಡೇರ್ಡೆವಿಲ್ಸ್ ಪರವಾಗಿ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಉಳಿದ ಪಂದ್ಯಗಳಲ್ಲಿ ಈ ಬೌಲರ್ಗಳ ಮೇಲೆ ತಂಡ ಭರವಸೆ ಹೊಂದಿದೆ.
ಇನ್ನೊಂದೆಡೆ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 24 ರನ್ಗಳ ಅಂತರದಿಂದ ಸೋಲನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಡೆಲ್ಲಿ ವಿರುದ್ಧ ಜಯ ಸಾಧಿಸಲು ಎದುರು ನೋಡುತ್ತಿದೆ.
ಎಸ್. ಬದ್ರಿನಾಥ್ ಹಾಗೂ ರವಿಂದ್ರ ಜಡೇಜಾ ಹೊರತುಪಡಿಸಿ ಚೆನ್ನೈನ ಉಳಿದ ಬ್ಯಾಟ್ಸ್ಮನ್ಗಳು ಮಿಂಚುವಲ್ಲಿ ವೈಫಲ್ಯ ಕಂಡಿದ್ದಾರೆ.
ಎರಡು ಬಾರಿ ಚಾಂಪಿಯನ್ ಚೆನ್ನೈ ಪಂದ್ಯಾವಳಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿ 4 ಅಂಕ ಹೊಂದಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಆದರೆ, ಚೆನ್ನೈ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಉತ್ತಮವಾಗಿದ್ದು, ಆತಿಥೇಯ ಡೆಲ್ಲಿಗೆ ಗೆಲವು ಕಷ್ಟವಾಗುವ ಸಾಧ್ಯತೆಗಳಿವೆ.
ಮೈಕ್ ಹಸ್ಸಿ ಮತ್ತು ಮುರಳಿ ವಿಜಯ್ ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಬದ್ರಿನಾಥ್ ಹಾಗೂ ನಾಯಕ ಧೋನಿ ಅವರೊಂದಿಗೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ.
ಆಲ್ರೌಂಡರ್ಗಳಾದ ಡ್ವೇನ್ ಬ್ರಾವೋ, ಜಡೇಜಾ, ಮಾರ್ಕೆಲ್ ಅವರೊಂದಿಗೆ ಆರ್. ಅಶ್ವಿನ್ ಸಹ ತಂಡಕ್ಕೆ ನೆರವಾಗುತ್ತಿದ್ದಾರೆ. ಚೆನ್ನೈ ಬೌಲಿಂಗ್ ವಿಭಾಗದಲ್ಲಿ ವೇಗಿಗಳು ಮತ್ತು ಸ್ಪಿನ್ನರ್ಗಳು ರನ್ ನಿಯಂತ್ರಿಸುವ ಕಲೆಯನ್ನೂ ಹೊಂದಿದ್ದಾರೆ.