ಮಕಾಡೆ ಮಲಗಿದ ಮುಂಬೈ ಇಂಡಿಯನ್ಸ್
ಜೈಪುರ: ಅದ್ಭುತ ಸಾಂಘಿಕ ಪ್ರದರ್ಶನ ನೀಡಿದ ರಾಹುಲ್ ದ್ರಾವಿಡ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ, ಮುಂಬೈ ಇಂಡಿಯನ್ಸ್ ತಂಡವನ್ನು 87 ರನ್ಗಳ ಬೃಹತ್ ಅಂತರದಿಂದ ಪರಾಭವಗೊಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ನಿಗದಿತ ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 179 ರನ್ ಕಲೆ ಹಾಕಿತು. ನಂತರ ಈ ಬೃಹತ್ ಸವಾಲು ಬೆನ್ನಟ್ಟಿದ ಮುಂಬೈ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸುವ ಮೂಲಕ 18.2 ಓವರ್ಗಳಲ್ಲಿ ಕೇವಲ 92 ರನ್ ಗಳಿಸುವ ಮೂಲಕ ಕೈಚೆಲ್ಲಿತು.
ರಾಜಸ್ಥಾನ ಪರ ಆರಂಭಿಕರಾದ ಅಜಿಂಕ್ಯ ರಹಾನೆ ಅಕರ್ಷಕ (ಅಜೇಯ 68) ಅರ್ಧ ಶತಕ ಮತ್ತು ಶೇನ್ ವ್ಯಾಟ್ಸನ್ (31) ಜಿಗುಟಿನ ಜತೆಯಾಟ ಪ್ರದರ್ಶಿಸುವುದರೊಂದಿಗೆ, ಮೊದಲ ವಿಕೆಟ್ ನಷ್ಟಕ್ಕೆ 62 ರನ್ ಪೇರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ನಂತರ ಬಂದ ದಿಶಾಂತ್ ಯಾಗ್ನಿಕ್ (34) ಸಹ ರಹಾನೆಗೆ ಸಾಥ್ ನೀಡುವಲ್ಲಿ ಹಿಂದೆ ಬೀಳಲಿಲ್ಲ. 24 ಎಸೆತಗಳನ್ನು ಎದುರಿಸಿದ ದಿಶಾಂತ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ಆದರೆ, ದಿಶಾಂತ್ 14ನೇ ಓವರ್ನಲ್ಲಿ ಹರ್ಭಜನ್ ಬೌಲಿಂಗ್ನಲ್ಲಿ ಸಚಿನ್ ತೆಂಡೂಲ್ಕರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ದಿಶಾಂತ್ ನಂತರ ಬಂದ ಸ್ಟುವರ್ಟ್ ಬಿನ್ನಿ (4) ರನೌಟ್ಗೆ ಬಲಿಯಾದರು. ಆದರೆ, ಆಗ ಅಂಗಣಕ್ಕಿಳಿದ ಬ್ರಾಡ್ ಹಾಡ್ಜ್ 15 ಎಸೆತಗಳನ್ನು ಎದುರಿಸಿ 27 ರನ್ ಗಳಿಸುವ ಮೂಲಕ ತಂಡದ ಮೊತ್ತ 180 ಅಂಚಿಗೆ ತಲುಪುವಂತೆ ಮಾಡಿದರು.
ದಿನೇಶ್ ಕಾರ್ತಿಕ್ (30), ಅಂಬಾಟಿ ರಾಯುಡು (27) ಹಾಗೂ ಮಿಚೆಲ್ ಜಾನ್ಸನ್ (11) ಮಾತ್ರ ಎರಡಂಕಿ ದಾಟಿದ ಮುಂಬೈ ಬ್ಯಾಟ್ಸ್ಮನ್ಗಳಾಗಿದ್ದಾರೆ. ಮುಂಬೈನ ಇತರ ಬ್ಯಾಟ್ಸ್ಮನ್ಗಳು ಹೀಗೆ ಬಂದು ಹಾಗೆ ಪೆವಿಲಿಯನ್ ಸೇರಿಕೊಂಡರು.
ರಾಜಸ್ಥಾನ ರಾಯಲ್ಸ್ ತಂಡದ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಜೇಮ್ಸ್ ಫಾಕ್ನರ್ 3 ವಿಕೆಟ್ ಪಡೆದರೆ, ಅಜಿತ್ ಚಾಂಡಿಲಾ ಮತ್ತು ಸ್ಟುವರ್ಟ್ ಬಿನ್ನಿ ತಲಾ 2 ವಿಕೆಟ್ ಹಾಗೂ ಸಿದ್ದಾರ್ಥ್ ತ್ರಿವೇದಿ ಮತ್ತು ಕೆವಿನ್ ಕೂಪರ್ ತಲಾ 1 ವಿಕೆಟ್ ಕಬಳಿಸಿದರು.
ಸ್ಕೋರ್ ಬೋರ್ಡ್
ರಾಜಸ್ಥಾನ್ ರಾಯಲ್ಸ್ 179/3 (20 ಓವರ್)
ವ್ಯಾಟ್ಸನ್ ಸಿ ಕಾರ್ತಿಕ್ ಬಿ ಪೊಲಾರ್ಡ್ 31 (25), ರಹಾನೆ ಅಜೇಯ 68 (54), ಯಾಗ್ನಿಕ್ ಸಿ ತೆಂಡೂಲ್ಕರ್ ಬಿ ಹರ್ಭಜನ್ 34 (24), ಬಿನ್ನಿ ರನೌಟ್ (ಜಾನ್ಸನ್/ಓಜಾ) 4 (4), ಹಾಡ್ಜ್ ಅಜೇಯ 27 (15), ಇತರೆ 15.
ವಿಕೆಟ್ ಪತನ: 1-62, 2-115, 3-126
ಬೌಲಿಂಗ್: ಜಾನ್ಸನ್ 4-0-41-0, ಮಾಲಿಂಗ 4-0-30-0, ರಿಶಿ 2-0-20-0, ಓಜಾ 4-0-31-0, ಪೊಲಾರ್ಡ್ 2-0-24-1, ಹರ್ಭಜನ್ 4-0-26-1
ಮುಂಬೈ ಇಂಡಿಯನ್ಸ್ 92 (18.2 ಓವರ್)
ತೆಂಡೂಲ್ಕರ್ ಸಿ ತ್ರಿವೇದಿ ಬಿ ಚಂಡಿಲಾ 1 (3), ಪಾಂಟಿಂಗ್ ಸಿ ಮತ್ತು ಬಿ ಚಂಡಿಲಾ 4 (9), ಕಾರ್ತಿಕ್ ಸಿ ಹಾಡ್ಜ್ ಬಿ ಫಾಕ್ನರ್ 30 (32), ಶರ್ಮಾ ಸಿ ವ್ಯಾಟ್ಸನ್ ಬಿ ತ್ರಿವೇದಿ 2 (7), ಪೊಲಾರ್ಡ್ ಬಿ ಬಿನ್ನಿ 1 (7), ರಾಯುಡು ಎಲ್ಬಿಡಬ್ಲ್ಯೂ ಬಿ ಕೂಪರ್ 27 (29), ರಿಶಿ ಧವನ್ ಸಿ ಫಾಕ್ನರ್ ಬಿ ಬಿನ್ನಿ 0 (1), ಹರ್ಭಜನ್ ರನೌಟ್ (ದ್ರಾವಿಡ್/ಯಾಗ್ನಿಕ್) 1 (1), ಜಾನ್ಸನ್ ಬಿ ಫಾಕ್ನರ್ 11 (9), ಮಾಲಿಂಗ ಬಿ ಫಾಕ್ನರ್ 7 (11), ಓಜಾ ಅಜೇಯ 1 (1), ಇತರೆ 7.
ವಿಕೆಟ್ ಪತನ: 1-4, 2-10, 3-26, 4-31, 5-61, 6-63, 7-64, 8-83, 9-83, 10-92
ಬೌಲಿಂಗ್: ಚಂಡಿಲಾ 2-0-6-2, ಚೌವಾಣ್ 3-0-10-0, ಫಾಕ್ನರ್ 3.2-1-16-3, ತ್ರಿವೇದಿ 4-1-17-1, ಬಿನ್ನಿ 3-0-14-2, ಕೂಪರ್ 3-0-25-1
ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ