ರಹಾನೆ ಅರ್ಧ ಶತಕ: ಮುಂಬೈಗೆ ಇಂಡಿಯನ್ಸ್‌ಗೆ ಬೃಹತ್ ಸವಾಲು
ಜೈಪುರ: ಅಜಿಂಕ್ಯ ರಹಾನೆ ಅಕರ್ಷಕ (ಅಜೇಯ 68) ಅರ್ಧ ಶತಕದ ನೆರವಿನೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 180 ರನ್‌ಗಳ ಬೃಹತ್ ಮೊತ್ತದ ಸವಾಲೊಡ್ಡಿದೆ.
ಆರಂಭಿಕರಾದ ಅಜಿಂಕ್ಯ ರಹಾನೆ ಮತ್ತು ಶೇನ್ ವ್ಯಾಟ್ಸನ್ (31) ಜಿಗುಟಿನ ಜತೆಯಾಟ ಪ್ರದರ್ಶಿಸುವುದರೊಂದಿಗೆ, ಮೊದಲ ವಿಕೆಟ್ ನಷ್ಟಕ್ಕೆ 62 ರನ್ ಪೇರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನದ ಪರ, 54 ಎಸೆತಗಳನ್ನು ಎದುರಿಸಿದ ರಹಾನೆ ಮೊತ್ತದಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ರಹಾನೆ ಜತೆ ತಕ್ಕ ಸಾಥ್ ನೀಡುತ್ತಿದ್ದ ವ್ಯಾಟ್ಸನ್ 8ನೇ ಓವರ್‌ನಲ್ಲಿ ಕೀರನ್ ಪೊಲಾರ್ಡ್ ಬೌಲಿಂಗ್‌ನಲ್ಲಿ ದಿನೇಶ್ ಕಾರ್ತಿಕ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ನಡೆದರು. ನಂತರ ಬಂದ ದಿಶಾಂತ್ ಯಾಗ್ನಿಕ್ (34) ಸಹ ರಹಾನೆಗೆ ಸಾಥ್ ನೀಡುವಲ್ಲಿ ಹಿಂದೆ ಬೀಳಲಿಲ್ಲ. 24 ಎಸೆತಗಳನ್ನು ಎದುರಿಸಿದ ದಿಶಾಂತ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ಆದರೆ, ದಿಶಾಂತ್ 14ನೇ ಓವರ್‌ನಲ್ಲಿ ಹರ್ಭಜನ್ ಬೌಲಿಂಗ್‌ನಲ್ಲಿ ಸಚಿನ್ ತೆಂಡೂಲ್ಕರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ದಿಶಾಂತ್ ನಂತರ ಬಂದ ಸ್ಟುವರ್ಟ್ ಬಿನ್ನಿ (4) ರನೌಟ್‌ಗೆ ಬಲಿಯಾದರು. ಆದರೆ, ಆಗ ಅಂಗಣಕ್ಕಿಳಿದ ಬ್ರಾಡ್ ಹಾಡ್ಜ್ 15 ಎಸೆತಗಳನ್ನು ಎದುರಿಸಿ ಅಜೇಯ 27 ರನ್ ಗಳಿಸುವ ಮೂಲಕ ತಂಡದ ಮೊತ್ತ 180 ಅಂಚಿಗೆ ತಲುಪುವಂತೆ ಮಾಡಿದರು.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಮುಂಬೈ ಇಂಡಿಯನ್ಸ್ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ್ ರಾಯಲ್ಸ್ 179/3(20 ಓವರ್)
ರಹಾನೆ ಅಜೇಯ 68 (54)
ಯಾಗ್ನಿಕ್ 34 (24)
ವ್ಯಾಟ್ಸನ್ 31 (25)
ಹಾಡ್ಜ್ ಅಜೇಯ 27 (15)
ಬೌಲಿಂಗ್: ಹರ್ಭಜನ್ 25/1,ಪೊಲಾರ್ಡ್ 24/1