ಪೇಸ್- ಮೆಲ್ಜರ್ ಕ್ವಾರ್ಟರ್‌ಫೈನಲ್‌ಗೆ
ಮಾಂಟೆ ಕಾರ್ಲೋ: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಆಸ್ಟ್ರಿಯಾದ ಜರ್ಗನ್ ಮೆಲ್ಜರ್ ಜೋಡಿ, ಮಾಂಟೆಕಾರ್ಲೋ ಮಾಸ್ಟರ್ಸ್ ಎಟಿಪಿ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೇಸ್ ಮತ್ತು ಜರ್ಗನ್ ಜೋಡಿ, ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿಯನ್ನು 6-2, 6-3 ನೇರ ಸೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.
ಭಾರತ ಮತ್ತು ಆಸ್ಟ್ರಿಯಾ ಜೋಡಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಿಯಾನ್ ಜೋಡಿಯನ್ನು ಎದುರಿಸಲಿದೆ.ಫೈನಲ್‌ಗೆ ಪ್ರಯಾಗ್ ನವದೆಹಲಿ: ಕಜಕಿಸ್ತಾನದ ಏಷ್ಯನ್ ಕಾನ್ಫಿಡರೇಷನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಭಾರತೀಯ ಪ್ರಯಾಗ್ ಚೌಹಾನ್, ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನಾದರೂ ಗೆದ್ದುಬರುವ ಭರವಸೆ ಮೂಡಿಸಿದ್ದಾರೆ. ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಪ್ರಯಾಗ್, ಗುರುವಾರ ನಡೆದ ತಮ್ಮ ಸೆಮಿಫೈನಲ್ ಪಂದ್ಯದಲ್ಲಿ ಕಿರ್ಗಿಸ್ತಾನ್‌ನ ಇರ್ನಿಸ್ ಉಲು ರುಸ್ಲಾನ್ ಅವರನ್ನು ಸೋಲಿಸಿ, ಫೈನಲ್‌ಗೆ ಕಾಲಿಟ್ಟರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಜಿಕಿಸ್ತಾನದ ನೊಜಿಮೊವ್ ಮುಮಿನ್ ಅವರನ್ನು ಸೋಲಿಸಿ, ಸೆಮೀಸ್‌ಗೆ ಕಾಲಿಟ್ಟಿದ್ದ ಪ್ರಯಾಗ್, ರುಸ್ಲಾನ್ ವಿರುದ್ಧ ಆರಂಭದಿಂದಲೂ ಮೈಲುಗೈ ಸಾಧಿಸಿದರು.
ಕುಸ್ತಿ: ಸೆಮೀಸ್‌ಗೆ ರಾಣಾ, ಶರ್ಮಾ
ನವದೆಹಲಿ: ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಕ್ರೀಡಾಳುಗಳಾದ ಸುನಿಲ್ ಕುಮಾರ್ ರಾಣಾ ಹಾಗೂ ಗೌರವ್ ಶರ್ಮಾ - ಇಬ್ಬರೂ ತಾವು ಸ್ಪರ್ಧಿಸಿದ್ದ ವಿಭಾಗಗಳ ಸೆಮಿಫೈನಲ್ ತಲುಪಿದ್ದಾರೆ. 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರಾಣಾ, ತಮ್ಮ ಮೊದಲ ಸುತ್ತಿನ ಪಂದ್ಯದಿಂದ ಬೈ ಪಡೆದು ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದರು. ಗುರುವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು ಚೀನಾದ ಗಾವ್‌ಕನ್ ಝಾಂಗ್ ಅವರನ್ನು 2-1, 1-1 ಅಂತರದಲ್ಲಿ ಸೋಲಿಸಿ, ಗ್ರೆಕೋ ರೋಮನ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ.