ಬೌಲರ್‌ಗಳ ದರ್ಬಾರು
ಬೆಂಗಳೂರು: ಸಾಮಾನ್ಯವಾಗಿ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಸಿಡಿಸುವ ಸಿಕ್ಸರ್ ಮತ್ತು ಬೌಂಡರಿಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಆದರೆ, ಈ ಬಾರಿ ಐಪಿಎಲ್‌ನಲ್ಲಿ ಇದುವರೆಗೂ ಬೆರಳೆಣಿಕೆ ಬ್ಯಾಟ್ಸ್‌ಮನ್‌ಗಳು ಮಾತ್ರ ಯಶಸ್ವಿಯಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ಬೌಲರ್‌ಗಳ ಮಾಂತ್ರಿಕ ಶಕ್ತಿಗೆ ಮಾರು ಹೋಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ 24 ಪಂದ್ಯಗಳು ಮುಕ್ತಾಯವಾಗಿವೆ. ಆದರೆ, ಈ ಪಂದ್ಯಗಳ ಫಲಿತಾಂಶಗಳನ್ನು ವಿಶ್ಲೇಷಿದಾಗ ಬ್ಯಾಟ್ಸ್‌ಮನ್‌ಗಳಿಗಿಂತ ಬೌಲರ್‌ಗಳು ಪಾರಮ್ಯ ಮೆರೆದಿರುವುದು ಕಂಡುಬರುತ್ತದೆ.
6ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಪುಣೆ ವಾರಿಯರ್ಸ್ ತಂಡ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಬೌಲಿಂಗ್ ಚಮತ್ಕಾರ ಮೆರೆದ ಸನ್‌ರೈಸರ್ಸ್ ಹೈದರಾಬಾದ್, ಪುಣೆ ಬ್ಯಾಟಿಂಗ್ ಪಡೆಯನ್ನು 19 ಓವರ್‌ಗಳಲ್ಲಿ 108 ರನ್‌ಗಳಿಗೆ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿತ್ತು.ಹೈದರಾಬಾದ್ ಇದುವರೆಗೂ ಗೆದ್ದಿರುವ ನಾಲ್ಕೂ ಪಂದ್ಯಗಳನ್ನು ನೋಡಿದಾಗ, ಅಲ್ಲಿ ಬೌಲರ್‌ಗಳ ಯಶಸ್ಸು ಪ್ರಮುಖ ಪಾತ್ರ ವಹಿಸಿರುವುದು ಸ್ಪಷ್ಟ. 6 ಪಂದ್ಯಗಳಿಂದ ತಲಾ 9 ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ, ತಿಸರಾ ಪೆರೇರಾ, ಡೇಲ್ ಸ್ಟೇಯ್ನ್, ಅಮಿತ್ ಮಿಶ್ರಾ, ಹಾಗೂ ತಲಾ 6 ಪಂದ್ಯಗಳಿಂದ 7 ವಿಕೆಟ್ ಪಡೆದಿರುವ ಡೇಲ್ ಸ್ಟೇಯ್ನ್ ಮತ್ತು ಇಶಾಂತ್ ಶರ್ಮಾ ಜಯದ ರೂವಾರಿಗಳಾಗಿದ್ದಾರೆ.
ಇನ್ನು ಆಡಿರುವ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್‌ನಲ್ಲೂ ಬೌಲರ್‌ಗಳೇ ಹೆಚ್ಚು ಮಿಂಚುತ್ತಿದ್ದಾರೆ. 5 ಪಂದ್ಯಗಳಿಂದ 9 ವಿಕೆಟ್ ಪಡೆದಿರುವ ಕೆವಿನ್ ಕೂಪರ್, ಕೇವಲ 3 ಪಂದ್ಯಗಳಿಂದ 7 ವಿಕೆಟ್ ಪಡೆದಿರುವ ಜೇಮ್ಸ್ ಫಾಕ್ನರ್ ಹಾಗೂ 5 ಪಂದ್ಯಗಳಿಂದ 6 ವಿಕೆಟ್ ಪಡೆದು 6.35 ಎಕಾನಮಿಯಲ್ಲಿ ರನ್ ನೀಡಿರುವ ಸಿದ್ದಾರ್ಥ್ ತ್ರಿವೇದಿ ರಾಜಸ್ಥಾನದ ಗೆಲುವಿನ ರೂವಾರಿಗಳಾಗಿದ್ದಾರೆ.
ಇನ್ನು ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳೆದ 5 ಆವೃತ್ತಿಗಳ ಪ್ರದರ್ಶನ ವಿಶ್ಲೇಷಿಸಿದರೆ, ಈ ಬಾರಿ ಬೌಲರ್‌ಗಳು ಉತ್ತಮ ಕಾಣಿಕೆಯನ್ನು ನೀಡುತ್ತಿದ್ದಾರೆ. ಡೆಲ್ಲಿ ವಿರುದ್ಧ ಸೂಪರ್ ಓವರ್‌ನಲ್ಲಿ 2 ವಿಕೆಟ್ ಪಡೆದಿದ್ದ ರವಿ ರಾಮ್‌ಪಾಲ್ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇನ್ನು 9 ವಿಕೆಟ್ ಪಡೆದಿರುವ ಆರ್. ವಿನಯ್ ಕುಮಾರ್ ಜತೆಗೆ ಮೊಯ್ಸಿಸ್ ಹೆನ್ರೀಕೆಸ್ ಮತ್ತು ಜಯದೇವ್ ಉನಾದ್ಕತ್ ಸಹ ಉತ್ತಮ ಎಕಾನಮಿಯೊಂದಿಗೆ ತಂಡಕ್ಕೆ ನೆರವಾಗುತ್ತಿದ್ದಾರೆ.
ಇನ್ನು ಕಿಂಗ್ಸ್ ಇಲೆವೆನ್ ವಿರುದ್ಧ ನಡೆದ ಐಪಿಎಲ್‌ನ 20ನೇ ಪಂದ್ಯದಲ್ಲಿ ಆವೃತ್ತಿಯ ಮೊದಲ ಹ್ಯಾಟ್ರಿಕ್ ಸಾಧಿಸಿ ಒಟ್ಟು 10 ವಿಕೆಟ್ ಕಬಳಿಸಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಸ್ಪಿನ್ನರ್ ಸುನಿಲ್ ನಾರಾಯಣ ಕೋಲ್ಕತಾದ ಗೆಲುವಿನ ರೂವಾರಿ ಎನಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಕಿಂಗ್ಸ್ ಇಲೆವೆನ್ ವಿರುದ್ಧ ಕೋಲ್ಕತಾ 4 ರನ್‌ಗಳಿಂದ ಸೋಲನುಭವಿಸಿತ್ತು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ 8 ವಿಕೆಟ್ ಪಡೆದಿರುವ ಡ್ವೆನ್ ಬ್ರಾವೋ ಮತ್ತು 7 ವಿಕೆಟ್ ಪಡೆದಿರುವ ಕ್ರಿಸ್ ಮೊರಿಸ್ ತಂಡಕ್ಕೆ ನೆರವಾಗುತ್ತಿದ್ದಾರೆ. ಪುಣೆ ವಾರಿಯರ್ಸ್ ಪರ ತಲಾ 7 ವಿಕೆಟ್ ಪಡೆದಿರುವ ಭುವನೇಶ್ವರ ಕುಮಾರ್ ಮತ್ತು ರಾಹುಲ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪುಣೆ ಸೋಲು ಗೆಲುವಿನ ಏಳು ಬೀಳುಗಳನ್ನು ಕಾಣುತ್ತಿದೆ.
- ಮಲ್ಲಿಕಾರ್ಜುನ ಕರಿಯಪ್ಪನರ