ಕುತೂಹಲ ಕೆರಳಿಸಿದ 'ರಾಯಲ್ಸ್' ಸೆಣೆಸು
ಬೆಂಗಳೂರು: ಈ ಬಾರಿಯ ಐಪಿಎಲ್ನಲ್ಲಿ ಬಲಿಷ್ಠ ತಂಡಗಳೆನಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಶನಿವಾರ ನಡೆಯಲಿರುವ ಮಹಾಯುದ್ಧಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಐಪಿಎಲ್ ಅಂಕಪಟ್ಟಿಯ ಟಾಪ್ ಎರಡು ತಂಡಗಳ ನಡುವಿನ ಈ ಕದನ, ಸ್ಥಳೀಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.
ಐಪಿಎಲ್ನ ಈ ಆವೃತ್ತಿಯಲ್ಲಿ ತವರಿನಲ್ಲಿ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಜಯಗಳಿಸಿದೆ. ಹಾಗಾಗಿ, ತನ್ನ ಹೋಂ ಪಿಚ್ನಲ್ಲೇ ರಾಜಸ್ಥಾನವನ್ನೂ ಮಣಿಸಲು ಅದು ಸನ್ನದ್ಧವಾಗಿದೆ.
ಅತ್ತ, ರಾಜಸ್ಥಾನ ತಂಡವೂ ಇದುವರೆಗೆ ತಾನು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಜಯಗಳಿಸಿದೆ. ಪುಣೆ ವಾರಿಯರ್ಸ್ ವಿರುದ್ಧ ಸೋತಿದ್ದು ಬಿಟ್ಟರೆ, ಇತರ ನಾಲ್ಕು ಪಂದ್ಯಗಳಲ್ಲೂ ಜಯಗಳಿಸಿರುವ ಅದು ಅಂಕಪಟ್ಟಿಯ ಮೊದಲ ಸ್ಥಾನದಲ್ಲಿದೆ. ಅದರಲ್ಲೂ ಬುಧವಾರವಷ್ಟೇ ಮುಂಬೈ ಇಂಡಿಯನ್ಸ್ ತಂಡವನ್ನು 86 ರನ್ಗಳ ಬೃಹತ್ ಅಂತರದಲ್ಲಿ ಸೋಲಿಸಿರುವ ಅದು ವಿಜಯೋತ್ಸಾಹಲ್ಲಿ ಮುನ್ನುಗ್ಗುತ್ತಿದೆ.
ಆಟಗಾರರ ಫಾರ್ಮ್: ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಕ್ರಿಸ್ ಗೇಯ್ಲ್, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಫಾರ್ಮ್ನಲ್ಲಿದ್ದಾರೆ. ಅತ್ತ, ಸ್ವತಃ ನಾಯಕ ರಾಹುಲ್ ದ್ರಾವಿಡ್, ಅಜಿಂಕ್ಯ ರಹಾನೆ, ಕೂಪರ್, ಫಾಕ್ನರ್ ಹಾಗೂ ಸಿದ್ಧಾರ್ಥ ತ್ರಿವೇದಿ ಪಂದ್ಯಾವಳಿಯ ಈವರೆಗಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಪರಿಸ್ಥಿತಿ ತಂದುಕೊಂಡಿದ್ದ ಶ್ರೀಶಾಂತ್ ಅವರೇನಾದರೂ ಶನಿವಾರದ ಪಂದ್ಯದಲ್ಲಿ ಕಣಕ್ಕಿಳಿದರೆ, ಕ್ರೀಸ್ ಗೇಯ್ಲ್ ಹಾಗೂ ಅವರ ನಡುವೆ ನೇರ ಕದನವನ್ನು ನಿರೀಕ್ಷಿಸಬಹುದು.
ಇನ್ನು, ಫಾರ್ಮ್ನಲ್ಲಿರುವ ರಾಹುಲ್ ದ್ರಾವಿಡ್, ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್ಗೆ ವಿರಾಟ್ ಕೊಹ್ಲಿ, ಡಿ ವಿಲಿಯರ್ಸ್ ಯಾವ ರೀತಿಯಲ್ಲಿ ಉತ್ತರ ನೀಡಲಿದ್ದಾರೆಂಬುದೂ ಕುತೂಹಲ ಮೂಡಿಸಿವೆ.
ಆರಂಭಿಕರ ಸಮಸ್ಯೆ: ಆದರೆ, ಆರ್ಸಿಬಿಯಲ್ಲಿ ಇರುವ ಏಕೈಕೆ ಸಮಸ್ಯೆಯೆಂದರೆ, ಆರಂಭಿ ಕ್ರಿಸ್ಗೇಯ್ಲ್ ಅವರೊಂದಿಗೆ ಯಾರು ಇನಿಂಗ್ಸ್ ಆರಂಭಿಸಬೇಕೆನ್ನುವುದು. ಅವರಿಗೆ ಸರಿಸಾಟಿಯಾಗಬಲ್ಲ ಮತ್ತೊಬ್ಬ ಆರಂಭಿಕನನ್ನು ಆರ್ಸಿಬಿಗೆ ಇದುವರೆಗೂ ಸಾಧ್ಯವಾಗಿಲ್ಲ. ಮಾಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್ ಇಬ್ಬರೂ ನಿರೀಕ್ಷಿತ ಮಟ್ಟದಲ್ಲಿ ಗೇಯ್ಲ್ ಸಾಥ್ ನೀಡಿಲ್ಲ. ಹಾಗಾಗಿ, ಶನಿವಾರದ ಪಂದ್ಯಕ್ಕೆ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ಗೆ ಗೇಯ್ಲ್ ಜೊತೆ ಇನಿಂಗ್ಸ್ ಆರಂಭಿಸುವ ಅವಕಾಶ ಸಿಗಬಹುದು. ಹಾಗೊಂದು ವೇಳೆ ದಿಲ್ಷಾನ್ ಆಡುವ ಅಂತಿಮ 11 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದರೆ, ನಿಯಮಗಳನುಸಾರ ಕೇವಲ 4 ಮಂದಿ ವಿದೇಶಿ ಆಟಗಾರರನ್ನು ಆಡಿಸಬೇಕಿರುವುದರಿಂದ, ಯಾರಾದರೊಬ್ಬ ವಿದೇಶಿ ಆಟಗಾರನಿಗೆ ವಿಶ್ರಾಂತಿ ನೀಡಬೇಕಾಗುತ್ತದೆ.
ಅದೇನೇ ಇದ್ದರೂ, ಶನಿವಾರದ ಪರಿಸ್ಥಿತಿಗಳ ಮೇಲೆ ಗೇಯ್ಲ್ ಜೊತೆ ಯಾರು ಇನಿಂಗ್ಸ್ ಆರಂಭಿಸುವರೆಂಬುದು ನಿರ್ಧಾರವಾಗಲಿದೆ.
ಆದರೆ, ರಾಜಸ್ಥಾನ ರಾಯಲ್ಸ್ ತಂಡ ಮಾತ್ರ ಇಂಥಾ ಯಾವುದೇ ಸಮಸ್ಯೆಗಳನ್ನೂ ಹೊಂದಿಲ್ಲ. ಅದು ಆರ್ಸಿಬಿಯಂತೆ ಯಾರೊಬ್ಬರ ಮೇಲೂ ಅವಲಂಬಿಸಿಲ್ಲ. ಸಾಂಘಿಕ ಪ್ರದರ್ಶನವೇ ಅದರ ಯಶಸ್ಸಿನ ಬೆನ್ನೆಲುಬು. ಇದು ಆರ್ಸಿಬಿಗೆ ಕಠಿಣ ಸವಾಲಾಗಬಹುದು. ಅಂತೂ ಇಂತೂ ರೋಚಕ ಪಂದ್ಯ ಸವಿಯುವ ನಿರೀಕ್ಷೆ ಅಭಿಮಾನಿಗಳದ್ದು.
ಸಂಭಾವ್ಯ ಆಟಗಾರರು
ಆರ್ಸಿಬಿ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಕೆ.ಪಿ ಅಪ್ಪಣ , , ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ಕ್ರಿಸ್ಟೊಫರ್ ಬರ್ನ್ವೆಲ್, ಡೇನಿಯಲ್ ಕ್ರಿಸ್ಚಿಯನ್, ಎಬಿ ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಯ್ಲ್, ಮೊಯ್ಸಿಸ್ ಹೆನ್ರಿಕೇಸ್, ಶೆಲ್ಡನ್ ಜಾಕ್ಸನ್, ಮುರಳಿ ಕಾರ್ತಿಕ್, ಜಹೀರ್ ಖಾನ್, ಆ್ಯಂಡ್ರೂ ಮೆಕ್ಡೊನಾಲ್ಡ್, ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಮುತ್ತಯ್ಯ ಮುರಳಿಧರನ್, ಕರುಣ್ ನಾಯರ್, ಪಂಕಜ್ ಸಿಂಗ್, ಪಿ.ಪರಮೇಶ್ವರನ್, ಹರ್ಶದ್ ಪಟೇಲ್, ಚೇತೇಶ್ವರ ಪೂಜಾರ, ರವಿ ರಾಮ್ಪಾಲ್, ಸಂದೀಪ್ ವಾರಿಯರ್, ಆರ್.ಪಿ. ಸಿಂಗ್, ಸನ್ನಿ ಸೋಹೈಲ್, ಸೈಯದ್ ಮಹಮದ್, ಸೌರಬ್ ತಿವಾರಿ, ಜಯ್ದೇವ್ ಉನದ್ಕತ್, ಡೇನಿಯಲ್ ವೆಟ್ಟೊರಿ, ವಿನಯ್ ಕುಮಾರ್, ವಿಜಯ್ ಜೋಲ್.
ರಾಜಸ್ಥಾನ ರಾಯಲ್ಸ್: ರಾಹುಲ್ ದ್ರಾವಿಡ್ (ನಾಯಕ), ಅಜಿಂಕ್ಯ ರಹಾನೆ, ಅಜಿತ್ ಚಾಂಡಿಲಾ, ಅಂಕಿತ್ ಚವಾಣ್, ಅಮಿತ್ ಸಿಂಗ್, ಅಶೋಕ್ ಮನೇರಿಯಾ, ಬ್ರಾಡ್ ಹಾಡ್ಜ್, ಬ್ರಾಡ್ ಹಾಗ್, ದಿಶಾಂತ್ ಯಗ್ನಿಕ್, ಫಿಡೆಲ್ ಎಡ್ವರ್ಡ್ಸ್, ಹರ್ಮೀತ್ ಸಿಂಗ್, ಜೇಮ್ಸ್ ಫಾಕ್ನರ್, ಕೆವಿನ್ ಕೂಪರ್, ಕುಶಾಲ್ ಜನಿತ್ ಪೆರೇರಾ, ಒವೈಸ್ ಶಾ, ಪ್ರವೀಣ್ ತಂಬೆ, ರಾಹುಲ್ ಶುಕ್ಲಾ, ಶ್ರೀಶಾಂತ್, ಸಚಿನ್ ಬೇಬಿ, ಸ್ಯಾಮ್ಯುಯೆಲ್ ಬದ್ರೀ, ಸಂಜು ಸ್ಯಾಮ್ಸನ್, ಶೇನ್ ವ್ಯಾಟ್ಸನ್, ಶಾನ್ ಟೈಟ್, ಶ್ರೀವತ್ಸ ಗೋಸ್ವಾಮಿ, ಸಿದ್ಧಾರ್ಥ್ ತ್ರಿವೇದಿ,ಸ್ಟುವರ್ಟ್ ಬಿನ್ನಿ.
-ಚೇತನ್ ಓ.ಆರ್.