ಕನ್ಫೆಷನ್ ರೂಂನಲ್ಲಿ ಡೇರ್ ಡೆವಿಲ್ಸ್
ನವದೆಹಲಿ: ಮಾಡಿದ ತಪ್ಪುಗಳನ್ನು ವಿನಮ್ರತೆಯಿಂದ ಒಪ್ಪಿಕೊಂಡು, ಮುಂದೆಂದೂ ಅಂಥಾ ತಪ್ಪುಗಳನ್ನು ಮತ್ತೆ ಮಾಡದಂತೆ ನಿರ್ಧಾರ ಕೈಗೊಳ್ಳುವ (ಕನ್ಫೆಷನ್ ರೂಮ್)ನ ಸ್ಥಿತಿಗೆ ತಲುಪಿರುವ ಡೆಲ್ಲಿ ಡೇರ್ ಡೆವಿಲ್ಸ್, ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಇದುವರೆಗೂ ಆಡಿರುವ ಆರೂ ಪಂದ್ಯಗಳಲ್ಲಿ ಸೋಲು ಕಂಡಿರುವ ಡೆಲ್ಲಿ, ಐಪಿಎಲ್-6ರ ಪ್ಲೇ ಆಫ್ ಹಂತಕ್ಕೆ ಕಾಲಿಡಬೇಕಾದರೆ, ಇನ್ನುಳಿದ ಪಂದ್ಯಗಳಲ್ಲಿ ಜಯಗಳಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗೆ, ಸೋಲನ್ನೇ ನೆರಳಾಗಿಸಿಕೊಂಡು ಸಾಗುತ್ತಿರುವ ಡೆವಿಲ್ಸ್ ತಂಡ ಇನ್ನಾದರೂ ತನ್ನ ಗೆಲುವಿನ ಖಾತೆ ತೆರೆದು ತನ್ನ ಮಾನ ಉಳಿಸಿಕೊಳ್ಳಬೇಕಿದೆ. ಡೆವಿಲ್ಸ್ ತಂಡದ ಪ್ರಮುಖ ಸಮಸ್ಯೆಯೆಂದರೆ, ಅದರ ಬ್ಯಾಟಿಂಗ್ ಲೈನ್-ಅಪ್ ವೈಫಲ್ಯಕ್ಕೊಳಗಾಗಿರುವುದು. ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್ ಹಾಗೂ ನಾಯಕ ಮಹೇಲ ಜಯವರ್ಧನೆಯಂತಹಾ ಅನುಭವಿಗಳ ವೈಫಲ್ಯತೆ ತಂಡವನ್ನು ಕಂಗೆಡಿಸಿದೆ. ಅದರಲ್ಲೂ ಸೆಹ್ವಾಗ್ ಅವರು ತಮ್ಮ ವೃತ್ತಿಜೀವನದಲ್ಲಿ ನೀಡುತ್ತಿರುವ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಇವರೊಂದಿಗೆ, ಜೀವನ್ ಮೆಂಡೀಸ್, ಜೊಹನ್ ಬೊಥಾ ಹಾಗೂ ಆ್ಯಂಡ್ರೆ ರಸೆಲ್ ಅವರಂಥಾ ಆಲ್ರೌಂಡರ್‌ಗಳೂ ವೈಫಲ್ಯ ಅನುಭವಿಸಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಇದರ ನಡುವೆ, ವಿಕೆಟ್ ಕೀಪರ್ ಕೇದಾರ್ ಜಾಧವ್ ಹಾಗೂ ಮನಪ್ರೀತ್ ಜುನೇಜಾ ಉತ್ತಮ ಪ್ರದರ್ಶನ ನೀಡಿ ತಂಡದ ಗೌರವ ಕಾಪಾಡಲು ಪ್ರಯತ್ನಿಸುತ್ತಿದ್ದಾರೆ.
ಗಾಯದಿಂದಾಗಿ ಈ ಬಾರಿಯ ಐಪಿಎಲ್‌ನಿಂದ ದೂರ ಉಳಿದಿರುವ ಡೆಲ್ಲಿ ತಂಡದ ಆಟಗಾರರಾದ ಕೆವಿನ್ ಪೀಟರ್ಸನ್ ಹಾಗೂ ಜೆಸ್ಸಿ ರೈಡರ್ ಇದ್ದಿದ್ದರೆ, ಡೆವಿಲ್ಸ್‌ಗೆ ಇಂಥಾ ದುಃಸ್ಥಿತಿ ಬರುತ್ತಿರಲಿಲ್ಲವೇನೋ....
ಇನ್ನು, ಬೌಲಿಂಗ್ ವಿಭಾಗದಲ್ಲಿ ಮಾರ್ನೆ ಮಾರ್ಕೆಲ್, ಉಮೇಶ್ ಯಾದವ್, ಇರ್ಫಾನ್ ಪಠಾಣ್ ಹಾಗೂ ಶಾಬಾಜ್ ನದೀಂ ಅವರು ಜಾಳಾಗಿರುವ ತಂಡಕ್ಕೆ ಕೊಂಚ ಚೇತರಿಕೆಯ ಪ್ರದರ್ಶನ ನೀಡಿದ್ದಾರೆ.
ಮುಂಬೈ ತಂಡಕ್ಕೂ ಸಮಸ್ಯೆಯಿದೆ: ಅತ್ತ, ಮುಂಬೈ ತಂಡವೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಸಚಿನ್ ತೆಂಡೂಲ್ಕರ್ ಹಾಗೂ ರಿಕಿ ಪಾಂಟಿಂಗ್ ಅವರಂಥ 'ಗ್ರೇಟ್' ಆಟಗಾರರಿದ್ದರೂ, ಆ ತಂಡ ಅಲ್ಲಲ್ಲಿ ಎಡವುತ್ತಲೇ ಸಾಗಿದೆ. ಐಪಿಎಲ್ ಶಕೆ ಆರಂಭವಾದಾಗಿನಿಂದ, 2010ರಲ್ಲಿ ಫೈನಲ್ ಕಾಲಿಟ್ಟು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟಿದ್ದು ಬಿಟ್ಟರೆ, ಮುಂಬೈ ಒಂದು ಬಾರಿಯೂ ಕಪ್ ಗೆದ್ದಿಲ್ಲ.
ಈ ಬಾರಿಯ ಐಪಿಎಲ್‌ನಲ್ಲೂ ಅದರ ಸಾಧನೆ ಅಷ್ಟಕ್ಕಷ್ಟೇ. ಕಳೆದ ಪಂದ್ಯದಲ್ಲಷ್ಟೇ ರಾಜಸ್ಥಾನ ರಾಯಲ್ಸ್ ವಿರುದ್ಧ 87 ರನ್‌ಗಳ ದೊಡ್ಡ ಮಟ್ಟದ ಸೋಲು ಕಂಡಿರುವ ಅದು, ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಕೊಂಚ ಅರೆ ಆತ್ಮವಿಶ್ವಾಸದಲ್ಲೇ ಕಣಕ್ಕಿಳಿಯಲಿದೆ.
ಕೀರನ್ ಪೊಲಾರ್ಡ್, ಲಸಿತ್ ಮಾಲಿಂಗ, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಅವರು ತಂಡಕ್ಕೆ ಕೊಂಚ ಆಸರೆಯಾಗಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಅವಕಾಶ ನೀಡಿದರೆ, ತಂಡಕ್ಕೆ ನೆರವಾಗಬಹುದು. ಅವರೊಂದಿಗೆ, ಮಿಚೆಲ್ ಜಾನ್ಸನ್, ಪ್ರಗ್ಯಾನ್ ಓಜಾ, ಹರ್ಭಜನ್ ಸಿಂಗ್ ಹಾಗೂ ಪೊಲಾರ್ಡ್ ಮಿಂಚಿದರೆ ತಂಡಕ್ಕೆ ಉಪಯೋಗವಾಗಬಹುದು.