ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿಂಗ್ಸ್‌ಗೆ ಜಯ ತಂದ ಜಡೇಜಾ

Vishwanath S
Updated On : 20 Apr 2013, 11:13 am

ಕೋಲ್ಕತಾ: ನಾಯಕ ಧೋನಿ ಬಣ್ಣಿಸಿದಂತೆ ಪ್ರದರ್ಶನ ತೋರುತ್ತಿರುವ ಆಲ್ರೌಂಡರ್ ರವೀಂದ್ರ ಜಡೇಜಾ (ಅಜೇಯ 36) ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿತು.
120 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 17 ಓವರ್‌ಗಳಲ್ಲಿ 89 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ, ಕೇವಲ 14 ಎಸೆತಗಳನ್ನು ಎದುರಿಸಿದ ಜಡೇಜಾ 36 ರನ್‌ಗಳನ್ನು 3 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ 36 ರನ್ ಪೇರಿಸುವ ಮೂಲಕ, ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು. ಅಂತ್ಯದಲ್ಲಿ ಜಡೇಜಾ ಅವರು, ಡ್ವೇನ್ ಬ್ರಾವೋ (7) ಅವರೊಂದಿಗೆ ಜತೆಯಾಟದಲ್ಲಿ 35 ರನ್ ಕಲೆ ಹಾಕಿದರು.
ಇದಕ್ಕೂ ಮುನ್ನ ತಾಳ್ಮೆಯ ಆಟ ಪ್ರದರ್ಶಿಸಿದ ಮೈಕ್ ಹಸ್ಸಿ (40) ಚೆನ್ನೈಗೆ ಆಶ್ರಯವಾದರು. ಹಸ್ಸಿ ತಾಳ್ಮೆಯಾಟ ನಿರಂತರವಾಗಿ ವಿಕೆಟ್ ಉರುಳಿದರೂ, ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ನೆರವಾಯಿತು.
ಚೆನ್ನೈ ಪಂದ್ಯದಲ್ಲಿ ಜಯ ಸಾಧಿಸಲು ಅಂತಿಮ ಮೂರು ಓವರ್‌ಗಳಲ್ಲಿ 27 ರನ್‌ಗಳು ಬೇಕಾಗಿತ್ತು. ಆಗ 18ನೇ ಓವರ್‌ನಲ್ಲಿ ಕೋಲ್ಕತಾ ತನ್ನ ಭರವಸೆ ಬೌಲರ್ ಸುನಿಲ್ ನಾರಾಯಣ ಕೈಗೆ ಚೆಂಡು ನೀಡಿತು. ಆದರೆ, ನಾರಾಯಣ ಬೌಲಿಂಗ್‌ನಲ್ಲೇ ಸಿಕ್ಸರ್ ಬಾರಿಸಿದ ಜಡೇಜಾ ಆತಂಕ ಉಂಟಾಗಿದ್ದ ತಂಡದಲ್ಲಿ ಗೆಲುವಿನ ಉತ್ಸಾಹ ಮೂಡಿಸಿದರು.  ಜಾಕ್ ಕಾಲಿಸ್ ಬೌಲಿಂಗ್‌ನಲ್ಲಿ ಯೂಸುಫ್ ಪಠಾಣ್ ಕ್ಯಾಚ್ ಕೈಬಿಟ್ಟು ಜೀವದಾನ ಮಾಡಿದ್ದು, ಜಡೇಜಾ ಅವರಿಗೆ ವರದಾನವಾಗಿ ಪರಿಣಮಿಸಿತು. ಆ ಓವರ್‌ನಲ್ಲಿ 3 ಬೌಂಡರಿಗಳನ್ನು ಬಾರಿಸಿದ ಜಡೇಜಾ, ತಂಡ ಗೆಲುವಿನ ಹಾದಿಯನ್ನು ಸಮೀಪಿಸುವಂತೆ ಮಾಡಿದರು.   ಪಂದ್ಯದಲ್ಲಿ ಗೆಲ್ಲುತ್ತೇವೆ ಎಂದು ಖಚಿತವಾದ ನಂತರವೂ ಬ್ಯಾಟ್‌ನೊಂದಿಗೆ ಅಬ್ಬರಿಸಿದ ಜಡೇಜಾ, ಯೂಸುಫ್ ಪಠಾಣ್ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಚೆನ್ನೈ ಜಯದ ಕೇಕೆ ಹಾಕಿತು.
ಪಂದ್ಯದಲ್ಲಿ ಮೈಕ್ ಹಸ್ಸಿ ಅವರೊಂದಿಗೆ ಸ್ಪಿನ್ನರ್ ರವೀಚಂದ್ರನ್ ಅವರನ್ನು ಆರಂಭಿಕರನ್ನಾಗಿ ಚೆನ್ನೈ ಅಂಗಣಕ್ಕಿಳಿಸಿದ್ದು ಅಚ್ಚರಿ ಮೂಡಿಸಿತ್ತು. ಅಶ್ವಿನ್ (11) 5ನೇ ಓವರ್‌ನಲ್ಲಿ ಬಾಲಾಜಿ ಎಸೆತದಲ್ಲಿ ಪಠಾಣ್‌ಗೆ ಕ್ಯಾಚ್ ನೀಡಿದರು.  ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡ, ಚೆನ್ನೈ ಬೌಲರ್‌ಗಳ ಮಾರ ಬೌಲಿಂಗ್ ದಾಳಿಗೆ ತತ್ತರಿಸುವ ಮೂಲಕ 9 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು.
ಆರಂಭಿಕರಾದ ಗೌತಮ್ ಗಂಭೀರ್ (25) ಮತ್ತು ಯೂಸುಫ್ ಪಠಾಣ್ (25) ಜತೆಯಾಟದಲ್ಲಿ 35 ಎಸೆತಗಳಲ್ಲಿ 46 ರನ್ ಪೇರಿಸಿ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟಿದ್ದರು. ಆದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡಿದ್ದು, ತಂಡ ಸಾಧಾರಣ ಮೊತ್ತಕ್ಕೆ ತೃಪ್ತಿಪಡಬೇಕಾಯಿತು.

ಸ್ಕೋರ್ ಬೋರ್ಡ್

ಕೋಲ್ಕತಾ ನೈಟ್‌ರೈಡರ್ಸ್ 119/9 (20 ಓವರ್)
ಗಂಭೀರ್ ಸಿ ಹಸ್ಸಿ ಬಿ ಮೊರಿಸ್ 25(19), ಪಠಾಣ್ ರನೌಟ್ (ಬ್ರಾವೊ/ಧೋನಿ) 25(22), ಕಾಲಿಸ್ ರನೌಟ್ (ಬದ್ರಿನಾಥ್) 0(0), ಮಾರ್ಗನ್ ಸಿ ಜಡೇಜಾ ಬಿ ಬ್ರಾವೊ 2(7), ತಿವಾರಿ ಸಿ ಶರ್ಮಾ ಬಿ ಅಶ್ವಿನ್ 13(18), ದಾಸ್ ಎಲ್‌ಬಿಡಬ್ಲ್ಯೂ ಅಶ್ವಿನ್ 19(15), ಭಾಟಿಯಾ ಸಿ ಮತ್ತು ಬಿ ಜಡೇಜಾ 1(10), ಶುಕ್ಲಾ ಎಲ್‌ಬಿ ಬಿ ಜಡೇಜಾ 1(3), ಸೇನನಾಯಕೆ ಅಜೇಯ 7(13), ನಾರಾಯಣ್ ಸಿ ಶರ್ಮಾ ಬಿ ಜಡೇಜಾ 13(6), ಬಾಲಾಜಿ ಅಜೇಯ 9(7), ಇತರೆ 4.ವಿಕೆಟ್ ಪತನ: 1-46, 2-47, 3-50, 4-55, 5-82, 6-89, 7-90, 8-91, 9-107
ಬೌಲಿಂಗ್: ಮಾರ್ಕೆಲ್ 4-0-36-0, ಮೋಹಿತ್ 3-0-13-0, ಮೊರಿಸ್ 3-0-12-1, ಬ್ರಾವೊ 2-0-14-1, ಅಶ್ವಿನ್ 4-1-21-2, ಜಡೇಜಾ 4-0-20-3

ಚೆನ್ನೈಸೂಪರ್ ಕಿಂಗ್ಸ್ 124/6 (19.1 ಓವರ್)
ಹಸ್ಸಿ ಸಿ ಪಠಾಣ್ ಬಿ ಬಾಲಾಜಿ 40(51), ಅಶ್ವಿನ್ ಸಿ ಸೇನನಾಯಕೆ ಬಿ ನಾರಾಯಣ್ 11(13), ವಿಜಯ್ ಎಲ್‌ಬಿಡಬ್ಲ್ಯೂ ಬಿ ಸೇನನಾಯಕೆ 2(5), ರೈನಾ ಸಿ ನಾರಾಯಣ್ ಬಿ ಪಠಾಣ್ 7(8), ಧೋನಿ ರನೌಟ್ (ಮಾರ್ಗನ್) 9(7), ಬದ್ರಿನಾಥ್ ಬಿ ಕಾಲಿಸ್ 6(13), ಜಡೇಜಾ ಅಜೇಯ 36(14), ಬ್ರಾವೊ ಅಜೇಯ 7(4), ಇತರೆ 6.
ವಿಕೆಟ್ ಪತನ: 1-24, 2-31, 3-40, 4-54, 5-71, 6-89
ಬೌಲಿಂಗ್: ಬಾಲಾಜಿ 4-0-28-1, ಸೇನನಾಯಕೆ 4-0-18-1, ನಾರಾಯಣ್ 4-0-20-1, ಪಠಾಣ್ 1.1-0-9-1, ಭಾಟಿಯಾ 2-0-12-0, ಕಾಲಿಸ್ 4-0-32-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement