ಮೊಹಾಲಿಯಲ್ಲಿ ದುರ್ಬಲರ ಕಾಳಗ
ಮೊಹಾಲಿ: ಆಡಿರುವ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋಲುವ ಮೂಲಕ ಮಂಕಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ತನಗಿಂತ ಕಳಪೆ ಪ್ರದರ್ಶನ ನೀಡಿರುವ ಪುಣೆ ವಾರಿಯರ್ಸ್ ತಂಡವನ್ನು ಎದುರಿಸಲಿದೆ.
ಬ್ಯಾಟಿಂಗ್ ವೈಫಲ್ಯದೊಂದಿಗೆ ಕೇವಲ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಆ್ಯಡಂ ಗಿಲ್‌ಕ್ರಿಸ್ಟ್ ನಾಯಕತ್ವದ ಪಂಜಾಬ್, ಜಯದ ಹಾದಿಗಾಗಿ ತಡಕಾಡುತ್ತಿದೆ. ಸ್ವತಃ ನಾಯಕ ಗಿಲ್‌ಕ್ರಿಸ್ಟ್ ಫಾರ್ಮ್ ಕಳೆದುಕೊಂಡಿರುವುದು ತಂಡಕ್ಕೆ ತೀವ್ರ ಆತಂಕವಾಗಿ ಪರಿಣಮಿಸಿದೆ.
96 ಟೆಸ್ಟ್ ಮತ್ತು 287 ಏಕದಿನ ಪಂದ್ಯಗಳನ್ನಾಡಿರುವ 41ರ ವರ್ಷದ ಹಿರಿಯ ಆಟಗಾರ ಪಂಜಾಬ್ ಪರ ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗಿದ್ದಾರೆ.
ತಂಡದಲ್ಲಿ ಉತ್ತಮ ಜತೆಯಾಟದ ಕೊರತೆ ಮತ್ತು ಇಕ್ಕಟ್ಟಿನ ಸಂದರ್ಭದಲ್ಲಿ ಕ್ರೀಸ್‌ಗೆ ಕಚ್ಚಿಕೊಂಡು ಎದುರಾಳಿ ಬೌಲರ್‌ಗಳನ್ನು ದಂಡಿಸಲು ಯಾವುದೇ ಬ್ಯಾಟ್ಸ್‌ಮನ್ ಮನ ಮಾಡದಿರುವುದು, ಪ್ರೀತಿ ಜಿಂಟಾ ಸಹ ಮಾಲೀಕತ್ವದ ತಂಡದ ಸೋಲಿಗೆ ಕಾರಣವಾಗಿದೆ. ಬ್ಯಾಟಿಂಗ್‌ನಲ್ಲಿ ಪಂಜಾಬ್ ತಂಡ ಗಿಲ್‌ಕ್ರಿಸ್ಟ್, ಡೇವಿಡ್ ಹಸ್ರಿ ಹಾಗೂ ಮಂದೀಪ್ ಸಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಇದುವರೆಗೂ ನಡೆದಿರುವ 5 ಐಪಿಎಲ್ ಆವೃತ್ತಿಗಳಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಮಾತ್ರ ಸೆಮಿಫೈನಲ್ ಪ್ರವೇಶಿಸಿದ್ದ ಕಿಂಗ್ಸ್ ಇಲೆವೆನ್ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹದರಾಬಾದ್ ವಿರುದ್ಧ ಸೋಲನುಭವಿಸಿತ್ತು.
ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿರುವ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಮೇಲೆ ತಂಡ ಭರವಸೆ ಇಟ್ಟುಕೊಂಡಿದೆ.
ಕಳೆದ ಆವೃತ್ತಿಯಲ್ಲಿ ಪಂಜಾಬ್ ಪರ ಅದ್ಭುತ ಪ್ರದರ್ಶನ ತೋರಿದ್ದ ಮಾರ್ಷ್, ಈಗ ಪಂದ್ಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ವಿಭಾಗಕ್ಕೆ ನೆರವಾಗಲಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಪಾಲ್ ವಾಲ್ತಾಟಿ, ಈ ಆವೃತ್ತಿಯಲ್ಲಿ ಹೈದಾರಾಬಾದ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಅಂಗಣಕ್ಕಿಳಿದಿದ್ದರು. ಆದರೆ, ವಾಲ್ತಾಟಿ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಫಾರ್ಮ್ ಕಳೆದುಕೊಂಡಿರುವುದು ಕಂಡುಬಂದಿತು. ಆರಂಭಿಕ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಜಯ ಸಾಧಿಸಿರುವ ಪಂಜಾಬ್ ಈ ಪಂದ್ಯದಲ್ಲಿ ವಿಶ್ವಾಸದಿಂದ ಅಂಗಣಕ್ಕಿಳಿಯುವ ಸಾಧ್ಯತೆಗಳಿವೆ.
ವೇಗಿ ಪ್ರವೀಣ್ ಕುಮಾರ್ ಅವರೊಂದಿಗೆ ಪಂಬಾಜ್ ಬೌಲಿಂಗ್ ವಿಭಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಆಲ್ರೌಂಡರ್ ಮನ್‌ಪ್ರೀತ್ ಗೋನಿ, ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಜರ್ ಮೆಹ್ಮೂದ್ ಹಾಗೂ ಸ್ಪಿನ್ನರ್ ಪಿಯುಶ್ ಚಾವ್ಲಾ ತಂಡದ ಬೌಲಿಂಗ್ ವಿಭಾಗಕ್ಕೆ ನೆರವಾಗುತ್ತಿದ್ದಾರೆ.
ಇನ್ನೊಂದೆಡೆ ಪುಣೆ ವಾರಿಯರ್ಸ್ ತಂಡವನ್ನೂ ಬ್ಯಾಟಿಂಗ್ ವೈಫಲ್ಯ ಕಾಡುತ್ತಿದೆ. ಪುಣೆ ಸಹ ಕಳೆದ ಪುಂದ್ಯದಲ್ಲಿ ಹೈದರಾಬಾದ್ ವಿರುದ್ಧವೇ ಸೋಲನುಭವಿಸಿದೆ. ಹೀಗಾಗಿ ಪಂಜಾಬ್ ವಿರುದ್ಧ ಪುಣೆ ತನ್ನ ಬ್ಯಾಟಿಂಗ್ ಪಡೆಯನ್ನು ಹುರಿಗೊಳಿಸಬೇಕಾದ ಅಗತ್ಯವಿದೆ.
ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ವಿರುದ್ಧ ನಡೆದ ಪಂದ್ಯಗಳಲ್ಲಿ ಜಯ ಸಾಧಿಸಿದ್ದನ್ನು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಏಂಜೆಲೋ ಮ್ಯಾಥ್ಯೂವ್ಸ್ ಪಡೆ ನೀರಸ ಪ್ರದರ್ಶನ ತೋರಿದೆ.
ಅಗ್ರ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ, ಆ್ಯರೋನ್ ಫಿಂಚ್ ಜತೆ ಸೇರಿ ಇನ್ನಷ್ಟು ಗಟ್ಟಿ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಇನ್ನು ಗಾಯದ ಹಿನ್ನೆಲೆಯಲ್ಲಿ ಯುವರಾಜ್ ಸಿಂಗ್ ಈ ಆವೃತ್ತಿಯಲ್ಲಿ ಕೆಲ ಪಂದ್ಯಗಳಿಂದ ವಂಚಿತವಾಗಿದ್ದಾರೆ. ಅಶೋಕ್ ದಿಂಡಾ ಹಾಗೂ ಭುವನೇಶ್ವರ ಕುಮಾರ್ ಅವರೊಂದಿಗೆ ಎಡಗೈ ಸ್ಪಿನ್ನರ್ ರಾಹುಲ್ ಶರ್ಮಾ ಪುಣೆ ಬೌಲಿಂಗ್ ವಿಭಾಗವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ.