ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂಡಿಯಾ ಓಪನ್: ಸೈನಾ ಪ್ರಮುಖ ಆಕರ್ಷಣೆ

Vishwanath S
Updated On : 22 Apr 2013, 8:58 am

ನವದೆಹಲಿ: ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡ ಸೈನಾ ನೆಹ್ವಾಲ್, ಮಂಗಳವಾರದಿಂದ ಆರಂಭವಾಗುವ ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ದೇಶದ ಇತರ ಬ್ಯಾಡ್ಮಿಂಟನ್ ತಾರೆಗಳಿಗೂ ಪಂದ್ಯಾವಳಿ, ಮಿಂಚಲು ಅವಕಾಶವನ್ನು ಒದಗಿಸಿಕೊಟ್ಟಿದೆ. ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಎಲ್ಲರ ಗಮನ ಸೆಳೆದರೆ, ಪುರುಷರ ವಿಭಾಗದಲ್ಲಿ ವಿಶ್ವದ ನಂ.1 ಆಟಗಾರ ಲೀ ಚಾಂಗ್ ವೀ ಪ್ರಮು ಆಕರ್ಷಣೆಯಾಗಿದ್ದಾರೆ.
2011ರ ಉದ್ಘಾಟನಾ ಇಂಡಿಯಾ ಓಪನ್ ಗೆದ್ದುಕೊಂಡಿದ್ದ, ವಿಶ್ವದ ನಂ.2 ಆಟಗಾರ್ತಿ ಸೈನಾ ಮತ್ತು ಮಲೇಷ್ಯಾದ ಸ್ಟಾರ್ ಆಟಗಾರ, ಏಪ್ರಿಲ್ 23ರಿಂದ 28ರ ವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಸೈನಾ ಕಳೆದ ತಿಂಗಳು ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್‌ಪೈನಲ್ ತಲುಪಿದ್ದರು. ಚೀನಾದ ಅಗ್ರ ಆಟಗಾರ್ತಿಯರ ಅನುಪಸ್ಥಿತಿಯಲ್ಲಿ ಸೈನಾ ಅಗ್ರ ಶ್ರೇಯಾಂಕ ಪಡೆದಿದ್ದು, ಆರಂಭಿಕ ಸುತ್ತಿನಲ್ಲಿ ಇಂಡೋನೇಷ್ಯಾದ ಬೆಲಾಟ್ರಿಕ್ಸ್ ಮಾನುಪುತಿ ಅವರನ್ನು ಎದುರಿಸಲಿದ್ದಾರೆ. ಬೆಲಾಟ್ರಿಕ್ಸ್ ಅವರನ್ನು ಸೈನಾ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸುಲಭವಾಗಿ ಮಣಿಸಿದ್ದಾರೆ.
ಕಳೆದ ವಾರ ನಡೆದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ಶಿಶಿಯಾನ ವಾಂಗ್ ಅವರನ್ನು ಸೋಲಿಸಿ ಸ್ಫೂರ್ತಿ ತುಂಬಿಕೊಂಡಿರುವ ಪಿ.ವಿ ಸಿಂಧು ಅವರು ಸೈನಾಗೆ ಕಠಿಣ ಸವಾಲು ನೀಡುವ ಸಾಧ್ಯತೆಗಳಿವೆ.
'ಒಂದು ವೇಳೆ ನಾವು ಪಂದ್ಯಾವಳಿಯಲ್ಲಿ ಪರಸ್ಪರ ಎದುರಾದರೆ, ಪಂದ್ಯಾವಳಿಗೆ ಆಕರ್ಷಣೆ ಹೆಚ್ಚಲಿದೆ. ಅಗ್ರ ಶ್ರೇಯಾಂಕ ಪಡೆದಿರುವ ನನ್ನ ಮೇಲೆ ಒತ್ತಡ ಇದ್ದೇ ಇರುತ್ತದೆ' ಎಂದು ಸೈನಾ ಹೇಳಿದ್ದಾರೆ.
ಸಿಂಧುಗಿಂತ ಮೊದಲು ಸೈನಾ, ವಿಶ್ವದ ನಂ.8 ಆಟಗಾರ್ತಿ ಥಾಯ್ಲೆಂಡ್‌ನ ರಚನೋಕ್ ಇಂತಾನಾನ್ ಅವರನ್ನು ಎದುರಿಸುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement