ಪಂಜಾಬ್ಗೆ ಡೆಲ್ಲಿ ಸೆಡ್ಡು?
ನವದೆಹಲಿ: ಸತತ ಆರು ಪಂದ್ಯಗಳಲ್ಲಿ ಸೋಲನುಭವಿಸಿ ಕಂಗೆಟ್ಟ ನಂತರ, ಮುಂಬೈ ವಿರುದ್ಧ ಅಮೋಘ ಜಯ ಸಾಧಿಸಿ ವಿಶ್ವಾಸ ವೃದ್ಧಿಸಿಕೊಂಡಿರುವ ಡೆಲ್ಲಿ ಡೇರ್ಡೆವಿಲ್ಸ್, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಭಾನುವಾರ ನಡೆದ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅಜೇಯ 95 ರನ್ ಗಳಿಸುವುದರೊಂದಿಗೆ, ಡೆಲ್ಲಿ ತಂಡ ಮುಂಬೈ ವಿರುದ್ಧ 9 ವಿಕೆಟ್ಗಳ ಅಂತರದಿಂದ ಮೇಲುಗೈ ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಜಯದ ಖಾತೆ ತೆರೆದಿತ್ತು.
ಆದರೆ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ತಂಡ ಮುಂದಿನ ಯಾವುದೇ ಪಂದ್ಯದಲ್ಲಿ ಕೈಚೆಲ್ಲುವ ಮನಸ್ಥಿತಿಯಲ್ಲಿಲ್ಲ. ಡೆಲ್ಲಿ ಈಗ ಪಂದ್ಯಾವಳಿಯಲ್ಲಿ ಪ್ಲೇ-ಆಫ್ ಹಂತ ಪ್ರವೇಶಿಸಬೇಕಾದರೆ, ಉಳಿದಿರುವ 9 ಪಂದ್ಯಗಳ ಪೈಕಿ 8ರಲ್ಲಾದರೂ ಜಯ ಸಾಧಿಸಬೇಕಾದ ಅಗತ್ಯವಿದೆ.
ಡೆಲ್ಲಿ ತಂಡಕ್ಕೆ ವೆಸ್ಟ್ ಇಂಡೀಸ್ನ ಬ್ಯಾಟಿಂಗ್ ದಂತಕತೆ ವಿವಿಯನ್ ರಿಚರ್ಡ್ಸ್ ಅವರನ್ನು ಸಲಹೆಗಾರರನ್ನಾಗಿ ಆಯ್ಕೆ ಮಾಡಿಕೊಂಡ ಕೇವಲ 1 ದಿನದ ನಂತರ ಸೆಹ್ವಾಗ್ ಬ್ಯಾಟ್ನೊಂದಿಗೆ ಸಿಡಿದೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಸೆಹ್ವಾಗ್ ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಫಾರ್ಮ್ನಲ್ಲಿ ಮುಂದುವರಿಸಲಿದ್ದಾರೆ ಎಂಬ ಭರವಸೆಯನ್ನು ತಂಡದ ಆಡಳಿತ ಮಂಡಳಿ ಹೊಂದಿದೆ.
ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ವೈಫಲ್ಯ ಕಾಣುತ್ತಿರುವುದು ಡೆಲ್ಲಿಗೆ ಆತಂಕವಾಗಿ ಪರಿಣಮಿಸಿದೆ. ಜಯವರ್ಧನೆ ಭಾನುವಾರ ಮುಂಬೈ ವಿರುದ್ಧ 59 ರನ್ ಗಳಿಸುವ ಮುನ್ನ ಒಂದು ಪಂದ್ಯದಲ್ಲಿ 66 ರನ್ ಗಳಿಸಿದ್ದರು. ಹೀಗಾಗಿ ಡೆಲ್ಲಿಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಆತಂಕವಾಗಿದೆ. ಅಗ್ರ ಕ್ರಮಾಂಕದಲ್ಲಿ ಭಾರತದ ಇನ್ನಿಬ್ಬರು ಬ್ಯಾಟ್ಸ್ಮನ್ಗಳಾದ ಮನ್ಪ್ರೀತ್ ಜುನೇಜಾ ಮತ್ತು ಕೇದಾರ ಜಾಧವ್ ತಕ್ಕಮಟ್ಟಿಗೆ ತಂಡಕ್ಕೆ ಆಶ್ರಯವಾಗುತ್ತಿದ್ದಾರೆ. ಆದರೆ, ಉನ್ಮುಕ್ತ್ ಚಾಂದ್ ಸತತ ಮೂರು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ. ಇನ್ನು ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ವೇಗಿ ಉಮೇಶ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ನಾಲ್ಕು ಪಂದ್ಯಗಳನ್ನಾಡಿರುವ ಆಶಿಶ್ ನೆಹ್ರಾ ಆರು ವಿಕೆಟ್ ಪಡೆದಿದ್ದಾರೆ. ಆದರೆ, ಆಲ್ರೌಂಡರ್ ಇರ್ಫಾನ್ ಪಠಾಣ್ ಮಾತ್ರ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ವೈಫಲ್ಯ ಕಂಡಿದ್ದಾರೆ.
ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಪುಣೆ ವಿರುದ್ಧ ಏಳು ವಿಕೆಟ್ ಅಂತರದಿಂದ ಜಯ ಸಾಧಿಸಿದ ಪಂಜಾಬ್ ಈ ಬಾರಿ ಕೊಂಚ ಸ್ಥಿರ ಪ್ರದರ್ಶನ ನೀಡತೊಡಗಿದೆ. ಪಂಜಾಬ್ ಇದುವರೆಗೂ ಆಡಿರುವ ಆರು ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿ 6 ಅಂಕಗಳನ್ನು ಗಳಿಸಿದೆ.
ಆದರೆ, ತಂಡದ ನಾಯಕ ಆ್ಯಡಂ ಗಿಲ್ಕ್ರಿಸ್ಟ್ ಫಾರ್ಮ್ ಕಳೆದುಕೊಂಡಿರುವುದು ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ. ಯುವ ಆಟಗಾರ ಮಂದೀಪ್ ಸಿಂಗ್ ಮತ್ತು ಡೇವಿಡ್ ಹಸ್ಸಿ ತಂಡದ ಪರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಇನ್ನು ಆಸ್ಟ್ರೇಲಿಯಾದ ಶಾನ್ ಮಾರ್ಷ್ ತಂಡಕ್ಕೆ ಮರಳಿದ್ದು, ಮುಂದಿನ ಪಂದ್ಯದಲ್ಲಿ ಅಂಗಣಕ್ಕಿಳಿಯುವ ಸಾಧ್ಯತೆಗಳಿವೆ.
ಪುಣೆ ವಾರಿಯರ್ಸ್ ವಿರುದ್ಧ 41 ಎಸೆತಗಳಲ್ಲಿ 80 ರನ್ ಗಳಿಸಿದ ಡೇವಿಡ್ ಮಿಲ್ಲರ್ ತಂಡಕ್ಕೆ ಭರವಸೆ ಮೂಡಿಸಿದ್ದಾರೆ.
ಇನ್ನು ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಅಜರ್ ಮೆಹ್ಮೂದ್ ಮತ್ತು ಪ್ರವೀಣ್ ಕುಮಾರ್ ಕ್ರಮವಾಗಿ 8 ಮತ್ತು 7 ವಿಕೆಟ್ ಪಡೆಯುವ ಮೂಲಕ ಇದುವರೆಗೂ ಪಂದ್ಯಾವಳಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆದರೆ, ಆರು ಪಂದ್ಯಗಳಿಂದ ಕೇವಲ 3 ವಿಕೆಟ್ ಪಡೆದಿರುವ ಸ್ಪಿನ್ನರ್ ಪಿಯುಶ್ ಚಾವ್ಲಾ ಲಯ ಕಂಡುಕೊಳ್ಳಬೇಕಾಗಿದೆ.
ಸಂಭಾವ್ಯ ಆಟಗಾರರು
ಪಂಜಾಬ್: ಆ್ಯಡಮ್ ಗಿಲ್ಕ್ರಿಸ್ಟ್, ಶಾನ್ ಮಾರ್ಷ್, ಡೇವಿಡ್ ಹಸ್ಸಿ, ಡೇವಿಡ್ ಆ್ಯಂಡ್ರೂ ಮಿಲ್ಲರ್, ರಿಯಾನ್ ಹ್ಯಾರಿಸ್, ಡಿಮಿಟ್ರಿ ಮಸ್ಕೆರೆನ್ಹ್ಯಾಸ್, ಅಜರ್ ಮೆಹಮೂದ್, ಪಿಯೂಶ್ ಚಾವ್ಲಾ, ಪ್ರವೀಣ್ ಕುಮಾರ್, ಮನದೀಪ್ ಸಿಂಗ್, ಸಿದ್ದಾರ್ಥ್ ಚಿಂಟಿಸ್, ನಿತಿನ್ ಸೈನಿ, ಸನ್ನಿ ಸಿಂಗ್, ಭಾರ್ಗವ್ ಭಟ್, ಬಿಪುಲ್ ಶರ್ಮಾ, ಪಾಲ್ ಚಂದ್ರಶೇಖರ್ ವಾಲ್ತಾಟಿ, ಲ್ಯೂಕ್ ಪ್ಯುಮರ್ಬ್ಯಾಚ್, ಮನ್ಪ್ರೀತ್ ಸಿಂಗ್ ಗೋನಿ, ಗುರ್ಕೀರತ್ ರೂಪಿಂದರ್ ಸಿಂಗ್, ಪರ್ವಿಂದರ್ ಆವಾನಾ, ರಾಜಗೋಪಾಲ್ ಸತೀಶ್.
ಡೆಲ್ಲಿ: ಮಹೇಲಾ ಜಯವರ್ಧನೆ (ನಾಯಕ), ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್, ಮನ್ಪ್ರೀತ್ ಜುನೇಜಾ, ವರುಣ್ ಆ್ಯರನ್, ಅಗರ್ಕರ್, ಗುಲಬ್ ಬೋಡಿ, ಜೊಹಾನ್ ಬೋಥಾ, ಉನ್ಮುಕ್ತ್ ಚಂದ್, ರಾಯ್ಸ್ಟನ್ ಡಯಾಸ್, ಸಿ.ಎಂ. ಗೌತಮ್, ಕೇದಾರ್ ಜಾದವ್, ಸಿದ್ದಾರ್ತ್ ಕೌರ್, ಜೀವನ್ ಮೆಂಡಿಸ್, ಮಾರ್ನೆ ಮಾರ್ಕೆಲ್, ಶಹ್ನಾಬ್ ನದೀಂ, ಯೋಗೇಶ್ ನಾಯರ್, ಸುಜಿತ್ ನಾಯಕ್, ಪವನ್ ನೇಗಿ, ನಮನ್ ಓಜಾ, ಇರ್ಫಾನ್ ಪಠಾಣ್, ಆ್ಯಂಡ್ರೂ ರಸೆಲ್, ಅರ್ಷಿತ್ ಸಿಂಗ್ವಿ, ವಾನ್ ಡರ್ ಮರ್ವೆ, ವೇಣುಗೋಪಾಲ್ ರಾವ್, ಉಮೇಶ್ ಯಾದವ್.