ಕ್ರಿಸ್ 'ಮಸ್ತ್'
ಐಪಿಎಲ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತ್ಯದ್ಭುತ ಇನಿಂಗ್ಸ್ಗೆ ಚಿನ್ನಸ್ವಾಮಿ ಕ್ರೀಡಾಂಗಣ ಮಂಗಳವಾರ ಸಾಕ್ಷಿಯಾಯಿತು.
ಬೆಂಗಳೂರು: ಐಪಿಎಲ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತ್ಯದ್ಭುತ ಇನಿಂಗ್ಸ್ಗೆ ಚಿನ್ನಸ್ವಾಮಿ ಕ್ರೀಡಾಂಗಣ ಮಂಗಳವಾರ ಸಾಕ್ಷಿಯಾಯಿತು. ರಾಯಲ್ ಚಾಲೆಂಜರ್ಸ್ ಹಾಗೂ ಪುಣೆ ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ದೈತ್ಯ ಪ್ರತಿಭೆ ಕ್ರಿಸ್ಗೇಯ್ಲ್ ಬ್ಯಾಟ್ನಿಂದ ಹರಿದ ರನ್ ಹೊಳೆ ಹಲವು ದಾಖಲೆಗಳನ್ನು ಮಾಡಿತು.
ದಾಖಲೆ 1: 30 ಎಸೆತಗಳಲ್ಲಿ ಶತಕ ಪೂರೈಸಿದ ಕ್ರಿಸ್ ಗೇಯ್ಲ್ ಐಪಿಎಲ್ನಲ್ಲಿ ವೇಗದ ಶತಕ ಪೂರೈಸಿದ ಹಿರಿಮೆ ಹೊಂದಿದ್ದ ಈ ಹಿಂದೆ ಯೂಸುಫ್ ಪಠಾಣ್ ಅವರ ಹೆಸರಿನಲ್ಲಿದ್ದ ದಾಖಲೆ ಅಳಿಸಿದರು.
ದಾಖಲೆ 2: 58 ಎಸೆತಗಳಲ್ಲಿ 160 ರನ್ ಗಳಿಸುವ ಮೂಲಕ ಬ್ರೆಂಡಾನ್ ಮೆಕಲಂ 2008ರ ಐಪಿಎಲ್ ಪಂದ್ಯದಲ್ಲಿ ಮಾಡಿದ್ದ ದಾಖಲೆ (73 ಎಸೆತಗಳಲ್ಲಿ 158) ಮುರಿದರು.
ದಾಖಲೆ 3: ಒಟ್ಟಾರೆಯಾಗಿ 66 ಎಸೆತಗಳಲ್ಲಿ 175 ರನ್ ಬಾರಿಸುವ ಮೂಲಕ ಟಿ20 ಇನಿಂಗ್ಸ್ ಒಂದರಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೂ ಕ್ರಿಸ್ ಗೇಯ್ಲ್ ಪಾತ್ರರಾದರು.
ದಾಖಲೆ 4: ಒಟ್ಟಾರೆ 17 ಸಿಕ್ಸರ್ ಬಾರಿಸುವ ಮೂಲಕ, ಐಪಿಎಲ್ನ ಇನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಕೀರ್ತಿಗೂ ಅವರು ಪಾತ್ರರಾದರು.
ದಾಖಲೆ 5: 66 ಎಸೆತಗಳಲ್ಲಿ 175 ರನ್ ಗಳಿಸಿದ ಗೇಯ್ಲ್, ಐಪಿಎಲ್ನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೂ ಪಾತ್ರರಾದರು.
ಅಲ್ಲದೇ, 17 ಎಸೆತಗಳಲ್ಲಿ ವೈಯಕ್ತಿಕವಾಗಿ 50 ರನ್ ಪೂರೈಸಿ, ಐಪಿಎಲ್ನಲ್ಲಿ ವೇಗದ ಶತಕಾರ್ಧ ಗಳಿಸಿದ್ದ ಆಡಮ್ ಗಿಲ್ಕ್ರಿಸ್ಟ್ ಅವರ ದಾಖಲೆಯನ್ನು (2009ರಲ್ಲಿ) ಸರಿಗಟ್ಟಿದರು.
ಗೇಯ್ಲ್ ಅವರ ಈ ಜಬರ್ದಸ್ತ್ ಬ್ಯಾಟಿಂಗ್ನಿಂದಾಗಿ, ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 262 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಇದಕ್ಕೆ ಉತ್ತರವಾಗಿ ಪುಣೆ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ, 130 ರನ್ಗಳ ಸೋಲು ಕಂಡಿತು.
ಆರ್ಸಿಬಿ ಇನಿಂಗ್ಸ್ ಆರಂಭಿಸಿದ ಗೇಯ್ಲ್ ಹಾಗೂ ದಿಲ್ಶಾನ್, ಮೊದಲ ವಿಕೆಟ್ಗೆ 167 ರನ್ಗಳ ಜೊತೆಯಾಟವಾಡಿದರು. ದಿಲ್ಶಾನ್ ವಿಕೆಟ್ ಉರುಳಿದ ನಂತರ, ಬಂದ ಕೊಹ್ಲಿ ಹೆಚ್ಚೇನೂ ಆಡಲಿಲ್ಲ. ಆದರೆ, ಕೊಹ್ಲಿ ಔಟಾದ ಮೇಲೆ ಬಂದ ಡಿವಿಲಿಯರ್ಸ್, 3ನೇ ವಿಕೆಟ್ಗೆ 44 ರನ್ಗಳ ಜೊತೆಯಾಟವಾಡಿದರು.
ಕೇವಲ 8 ಎಸೆತಗಳಲ್ಲಿ ವೈಯಕ್ತಿಕವಾಗಿ 31 ರನ್ ಗಳಿಸಿದ ಡಿವಿಲಿಯರ್ಸ್, ಔಟಾದ ಮೇಲೆ, ಬಂದ ತಿವಾರಿ ಕೂಡಾ ಬೇಗನೇ ವಿಕೆಟ್ ಒಪ್ಪಿಸಿದರು. ಇನ್ನು, ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಬಂದ ರವಿ ರಾಮ್ಪಾಲ್ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ, ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತು.
ಪುಣೆ ಕುಸಿತ: ಆರ್ಸಿಬಿ ನೀಡಿದ್ದ ಮೊತ್ತವನ್ನು ಬೆನ್ನಟ್ಟಿದ್ದ ಪುಣೆ ವಾರಿಯರ್ಸ್ ತಂಡ ಶೂನ್ಯ ಮೊತ್ತಕ್ಕೇ ಆರಂಭಿಕ ರಾಬಿನ್ ಉತ್ತಪ್ಪ ಅವರನ್ನು ಕಳೆದುಕೊಂಡಿತು. ಮುರಳಿ ಕಾರ್ತಿಕ್ ಇವರ ವಿಕೆಟ್ ಪಡೆದರು. ನಂತರ, ಪುಣೆ ಇನಿಂಗ್ಸ್ ನಿಭಾಯಿಸಲು ಬಂದ ಯುವರಾಜ್ ಸಿಂಗ್, ಮತ್ತೊಬ್ಬ ಆರಂಭಿಕ ಹಾಗೂ ನಾಯಕ ಫಿಂಚ್ ಜೊತೆಗೂಡಿ ಎರಡನೇ ವಿಕೆಟ್ಗೆ 28 ರನ್ ಸೇರಿಸಿದರು.
5ನೇ ಓವರ್ನಲ್ಲಿ ಫಿಂಚ್ ಅವರು ವಿಕೆಟ್ ಒಪ್ಪಿಸುವುದರೊಂದಿಗೆ ಇವರಿಬ್ಬರ ಜೊತೆಯಾಟ ಕೊನೆಗೊಂಡಿತು. ಆನಂತರ, ನಿಗದಿತ ಅಂತರದಲ್ಲಿ ರೈಟ್, ಯುವರಾಜ್ ಸಿಂಗ್ ಅವರನ್ನು ಕಳೆದುಕೊಂಡ ಪುಣೆಗೆ ಆಸರೆಯಾಗಿ ನಿಂತಿದ್ದು ಸ್ಮಿತ್ ಹಾಗೂ ಮಧ್ಯಮ ಕ್ರಮಾಂಕದ ಮಾರ್ಷ್. ಈ ಜೋಡಿ, 5ನೇ ವಿಕೆಟ್ಗೆ 58 ರನ್ ಪೇರಿಸಿತು. ಆದರೆ, 15ನೇ ಓವರ್ನಲ್ಲಿ ಸ್ಮಿತ್ ಔಟಾಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಅವರ ಹಿಂದೆಯೇ ಮಾರ್ಷ್ ಸಹ ಹೊರನಡೆದರು. ಇನಿಂಗ್ಸ್ನ ಅಂತಿಮ ಹಂತದಲ್ಲಿ 9 ಎಸೆತಗಳಲ್ಲಿ ಪುಣೆ, 137 ರನ್ ರೀಸುವ ಒತ್ತಡಕ್ಕೆ ಸಿಲುಕಿತ್ತು. ಅಸಾಧ್ಯವಾದ ಈ ಗುರಿಯನ್ನು ಮುಟ್ಟಲು ಸಾಧ್ಯವಾಗದ ಪುಣೆ, ಅಂತಿಮವಾಗಿ, 133 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್ ಎಸೆದ ಗೇಯ್ಲ್ ಅಲ್ಲೂ ತಮ್ಮ ಝಲಕ್ ಮೂಡಿಸಿದರು. ಒಂದೇ ಓವರ್ ಮಾಡಿದ ಅವರು 5 ರನ್ ನೀಡಿ ಎರಡು ವಿಕೆಟ್ ಪಡೆದರು. ಪ್ರತಿಬಾರಿ ವಿಕೆಟ್ ಪಡೆದಾಗಲೂ ಅವರು ಗಂಗ್ನಂ ಶೈಲಿಯಲ್ಲಿ ಕುಣಿದಿದ್ದು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಮೆಚ್ಚುಗೆಯ ಅಲೆ ಹರಿಸಿತು. ಆರ್ಸಿಬಿ 130 ರನ್ ಗಳ ಭರ್ಜರಿ ಗೆಲವು ದಾಖಲಿಸಿತು.
ಸ್ಕೋರ್ ಬೋರ್ಡ್
ಆರ್ಸಿಬಿ 263/5 (20 ಓವರ್)
ಗೇಯ್ಲ್ ಅಜೇಯ 175(66), ದಿಲ್ಶಾನ್ ಸಿ ಮುರ್ಟಜಾ ಬಿ ರೈಟ್ 33(36), ಕೊಹ್ಲಿ ರನೌಟ್ (ದಿಂಡಾ) 11(9), ಡಿವಿಲಿಯರ್ಸ್ ಸಿ ಮನಾಸ್ ಬಿ ಮಾರ್ಷ್ 31(8), ತಿವಾರಿ ಸಿ ಮಾರ್ಷ್ ಬಿ ದಿಂಡಾ 2(2), ರಾಮ್ಪಾಲ್ ಸಿ ಮಾರ್ಷ್ ಬಿ ದಿಂಡಾ 0(1), ಇತರೆ 11.
ವಿಕೆಟ್ ಪತನ: 1-167, 2-207, 3-251, 4-262, 5-263
ಬೌಲಿಂಗ್: ಭುವನೇಶ್ವರ್ 4-0-23-0, ಪಾಂಡೆ 2-0-33-0, ದಿಂಡಾ 4-0-48-2, ಮಾರ್ಷ್ 3-0-56-1, ಮುರ್ಟಜಾ 2-0-45-0, ಫಿಂಚ್ 1-0-29-0, ರೈಟ್ 4-0-26-1
ಪುಣೆ ವಾರಿಯರ್ಸ್ 133/9 (20 ಓವರ್)
ಉತ್ತಪ್ಪ ಸಿ ಸಿಂಗ್ ಬಿ ಕಾರ್ತಿಕ್ 0(2), ಫಿಂಚ್ ಸಿ ಕಾರ್ತಿಕ್ ಬಿ ರಾಮ್ಪಾಲ್ 18(15), ಯುವರಾಜ್ ಸಿ ಕೊಹ್ಲಿ ಬಿ ಉನಾದ್ಕತ್ 16(14), ರೈಟ್ ಸಿ ಡಿವಿಲಿಯರ್ಸ್ ಬಿ ಉನಾದ್ಕತ್ 7(3), ಸ್ಮಿತ್ ಸಿ ದಿಲ್ಶಾನ್ ಬಿ ರಾಮ್ಪಾಲ್ 41(31), ಮಾರ್ಷ್ ಬಿ ವಿನಯ್ 25(23), ಮನಾಸ್ ಅಜೇಯ 11(13), ಭುವನೇಶ್ವರ್ ಸಿ ಅರುಣ್ ಬಿ ಸಿಂಗ್ 6(12), ಮುರ್ಟಜಾ ಸ್ಟಂಪ್ ಅರುಣ್ ಬಿ ಗೇಯ್ಲ್ 5(4), ಪಾಂಡೆ ಬಿ ಗೇಯ್ಲ್ 0(2), ದಿಂಡಾ ಅಜೇಯ 1(1), ಇತರೆ 3.
ವಿಕೆಟ್ ಪತನ: 1-0, 2-28, 3-38, 4-42, 5-100, 6-119, 7-127, 8-132, 9-132
ಬೌಲಿಂಗ್: ಕಾರ್ತಿಕ್ 3-0-25-1, ಸಿಂಗ್ 4-0-20-1, ರಾಮ್ಪಾಲ್ 4-0-21-2, ಉನಾದ್ಕತ್ 4-0-38-2, ವಿನಯ್ 4-0-24-1, ಗೇಯ್ಲ್ 1-0-5-2
-ಚೇತನ್ ಓ.ಆರ್.