ಬಂದೂಕು ಸ್ಟಿಕ್
ಒಂದು ಊರು- ಎರಡು ಮೈದಾನ.225 ತಂಡಗಳು.ಅದೂ ಒಂದೇ ಜನಾಂಗದ್ದು!
ಕೊಡವರ ಕೌಟುಂಬಿಕ ಹಾಕಿ ಪಂದ್ಯಾಟ ನೋಡಬೇಕೆಂದಿದ್ದರೆ ಮೇ 12ರ ಭಾನುವಾರ ನಡೆಯುವ ಈ ವರ್ಷದ ಕೊಡವ ಹಾಕಿ ಚಾಂಪಿಯನ್ ಕುಟುಂಬ ತಂಡವನ್ನು ನಿರ್ಧರಿಸಲಿರುವ ಫೈನಲ್ ವೀಕ್ಷಿಸಲು ವಿರಾಜಪೇಟೆಯಿಂದ 6 ಕಿ.ಮೀ. ದೂರದ ಬಾಳುಗೋಡಿಗೆ ಬನ್ನಿ. ಹಾಕಿ ನಾಡಿನ ಹೆಮ್ಮೆಯ ಕೊಡವರು ನಿಮ್ಮ ಸ್ವಾಗತಕ್ಕೆ ಸಿದ್ಧರಿರುತ್ತಾರೆ.
ಒಂದು ಊರು- ಎರಡು ಮೈದಾನ.225 ತಂಡಗಳು.ಅದೂ ಒಂದೇ ಜನಾಂಗದ್ದು!
ಬರೋಬ್ಬರಿ 26 ದಿನಗಳ ಪಂದ್ಯಾಟ!
ಮೂರೂವರೆ ಸಾವಿರ ಕ್ರೀಡಾಪಟುಗಳು ಭಾಗಿ!
ಇಂಥ ಒಂದು ದಾಖಲೆ ಸಾಧ್ಯವಾಗಿರುವುದು ಕೊಡವರ ಹಾಕಿ ಪಂದ್ಯಾಟದಲ್ಲಿ. ಭಾರತದ ಬೇರೆಲ್ಲೂ ಇಲ್ಲದ ದಾಖಲೆ ಕೊಡಗಿನಲ್ಲಿ ಸಾಧ್ಯವಾಗಿದೆ. ಕೊಡವ ಕುಟುಂಬಗಳ ಹಾಕಿ ತಂಡಗಳ ನಡುವೆ 16 ವರ್ಷಗಳಿಂದ ಇಂಥ ಕ್ರೀಡಾ ವಿಸ್ಮಯ ನಡೆಯುತ್ತಿದೆ. ಪ್ರತಿವರ್ಷ ಏಪ್ರಿಲ್‌ನಲ್ಲಿ ಆರಂಭವಾಗಿ ಮೇನಲ್ಲಿ ಅಂತ್ಯಗೊಳ್ಳುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಈಗ 17ನೇ ವರ್ಷ. ಕೊಡವರ ಮುಖ್ಯ ಕ್ರೀಡೆಯಾದ ಹಾಕಿಗೆ ಕಾಯಕಲ್ಪ ನೀಡಿ, ಕೊಡವ ಜನಾಂಗದ ಯುವಕರನ್ನು ಹಾಕಿಯತ್ತ ಸೆಳೆಯಲು 16 ವರ್ಷಗಳ ಹಿಂದೆ ಕೊಡವರ ಪಾಂಡಂಡ ಮನೆತನದ ಕುಟ್ಟಪ್ಪ ಎಂಬವರ ಕನಸಿನ ಯೋಜನೆಯಾಗಿ ಜಾರಿಯಾದದ್ದೇ ಈ ಕೌಟುಂಬಿಕ ಹಾಕಿ ಪಂದ್ಯಾಟ.
ಕೊಡವರಲ್ಲಿ ಸುಮಾರು 700 ಕುಟುಂಬಗಳಿವೆ. ಇಂಥ ಕುಟುಂಬಗಳ ಪೈಕಿ 300 ಕುಟುಂಬಗಳಲ್ಲಿ ಹಾಕಿ ಕ್ರೀಡಾಪಟುಗಳಿದ್ದಾರೆ. ಇಂಥ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆರಂಭವಾದ ಕೌಟುಂಬಿಕ ಹಾಕಿ ಪಂದ್ಯಾಟ ಜಗತ್ತಿನ ಬೇರೆ ಜನಾಂಗದವರಿಗೂ ಮಾದರಿ.
ಬಂದೂಕು, ಹಾಕಿ ಸ್ಟಿಕ್!
ಕೊಡವರ ಕುಟುಂಬಗಳಲ್ಲಿ ಒಬ್ಬರಾದರೂ ಸೇನೆ ಸೇರಿ ದೇಶ ಕಾಯುತ್ತಿರುತ್ತಾರೆ. ಅಂತೆಯೇ ಕೊಡವ ಕುಟುಂಬಗಳಲ್ಲಿ ಒಬ್ಬನಾದರೂ ಹಾಕಿ ಪಟುವಿರುತ್ತಾನೆ. ಹೀಗಾಗಿಯೇ ಬಂದೂಕು ಮತ್ತು ಹಾಕಿ ಸ್ಟಿಕ್ ಇಲ್ಲದ ಕೊಡವರ ಮನೆಯೇ ಇಲ್ಲ.
ಸಿಕ್ಕಾಪಟ್ಟೆ ಫೇಮಸ್ಸು
1999ರಲ್ಲಿ ಕೊಡವ ಯುವಕರಲ್ಲಿ ಹಾಕಿ ಬದಲಿಗೆ ಕ್ರಿಕೆಟ್ ಪ್ರೇಮ ಹೆಚ್ಚಾಗುತ್ತಿರುವುದು ಕಂಡುಬಂತಂತೆ. ಇದನ್ನು ಗಮನಿಸಿಯೇ ಕೊಡವರು ತಮ್ಮ ವಂಶಪಾರಂಪರ್ಯ ಕ್ರೀಡೆಯಾದ ಹಾಕಿಗೆ ಪುನಶ್ಚೇತನ ನೀಡಬೇಕೆಂದು ಕೊಡವರ ಕುಟುಂಬಗಳಲ್ಲಿಯೇ ಹಾಕಿ ಪಂದ್ಯಾಟ ಆರಂಭಿಸುವ ವಿನೂತನ ಕ್ರೀಡಾ ಯೋಜನೆಗೆ ಮುಂದಾದರು. ಪಾಂಡಂಡ ಕುಟುಂಬದ ಕುಟ್ಟಪ್ಪ ಅವರ ಕನಸಿನ ಕ್ರೀಡಾ ಯೋಜನೆಯು 1997ರಲ್ಲಿ ಕರಡ ಎಂಬ ಗ್ರಾಮದಲ್ಲಿ ಆರಂಭವಾಯಿತು. ಪ್ರಾರಂಭಿಕ ವರ್ಷ ಕುಟುಂಬಗಳ ನಡುವಿನ ಹಾಕಿ ಪಂದ್ಯಾಟದಲ್ಲಿ 60 ತಂಡಗಳು ಪಾಲ್ಗೊಂಡಿದ್ದವು. ಮರುವರ್ಷ 116, ಮೂರನೇ ವರ್ಷ 140- ಹೀಗೆ ತಂಡಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. 2003ರಲ್ಲಿ ಅತ್ಯಧಿಕ 281 ತಂಡಗಳು ನಾಪೋಕ್ಲುವಿನಲ್ಲಿ ಜರುಗಿದ ಪಂದ್ಯಾಟದಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿತು.
ಕಳೆದ ವರ್ಷ 224 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ ವಿರಾಜಪೇಟೆ ಬಳಿಯ ಬಾಳುಗೋಡು ಎಂಬ ಪುಟ್ಟ ಊರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರದಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ 225 ತಂಡಗಳ ಪಾಲ್ಗೊಳ್ಳುವಿಕೆಯೊಂದಿಗೆ ಆರಂಭವಾಗಿದೆ. ಈವರೆಗೆ ಅಮ್ಮತ್ತಿಯಲ್ಲಿ 3 ಬಾರಿ, ಪೊನ್ನಂಪೇಟೆಯಲ್ಲಿ 5 ಬಾರಿ ಸೇರಿದಂತೆ ಬೇರೆ ಬೇರೆ ಗ್ರಾಮಗಳಲ್ಲಿ ನಡೆದಿದ್ದ ಟೂರ್ನಿ ಇನ್ನು ಮುಂದೆ ಕೊಡವರ ಸಾಂಸ್ಕೃತಿಕ, ಕ್ರೀಡಾ ಕೇಂದ್ರವಾದ ಬಾಳುಗೋಡಿನಲ್ಲಿಯೇ ನಡೆಯಲಿದೆ.
ವಿವಾಹ ಬಂಧನಕ್ಕೂ ಸಾಕ್ಷಿ
ಹಲವು ವಿವಾಹ ಸಂಬಂಧಗಳ ಬೆಸೆಯುವಿಕೆಗೂ ಹಾಕಿ ಪಂದ್ಯಾಟ ಸಾಕ್ಷಿಯಾಗಿದೆ. ಬಂಧುಮಿತ್ರರು ವರ್ಷಕ್ಕೊಮ್ಮೆ ಭೇಟಿಯಾಗಲು ಈ ಕ್ರೀಡೋತ್ಸವ ಕಾರಣವಾಗುತ್ತಿದೆ. ಸುಮಾರು 20 ಸಾವಿರ ಪ್ರೇಕ್ಷಕರು ಕೂತು ಆಟ ನೋಡಲು ಅನುಕೂಲವಾಗಬಲ್ಲ ಸುಸಜ್ಜಿತ ಗ್ಯಾಲರಿಯೂ ಬಾಲುಗೋಡಿನಲ್ಲಿ ನಿರ್ಮಾಣವಾಗಿದೆ. ಅಂತೆಯೇ 40ಕ್ಕೂ ಅಧಿಕ ವ್ಯಾಪಾರ ಮಳಿಗೆಗಳು ಕ್ರೀಡಾಪ್ರೇಮಿಗಳನ್ನು ಸೆಳೆಯುತ್ತಿವೆ. ಪ್ರತಿವರ್ಷ ರು. 50ರಿಂದ 60 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟಕ್ಕೆ ರಾಜ್ಯ ಸರ್ಕಾರ ರು. 35 ಲಕ್ಷ ಅನುದಾನ ನೀಡುತ್ತಿದ್ದು ಉಳಿದ ಹಣವನ್ನು ಕುಟುಂಬ ವರ್ಗದವರು ದಾನಿಗಳಿಂದ, ಪ್ರಾಯೋಜಕತ್ವದಿಂದ ಭರಿಸುತ್ತಿದ್ದಾರೆ. ಪ್ರತಿ ವರ್ಷವೂ ಕೊಡವರ ಒಂದೊಂದು ಕುಟುಂಬದವರು ಹಾಕಿ ಪಂದ್ಯಾಟ ಆಯೋಜಿಸಲು ಸಿದ್ಧರಿರುತ್ತಾರೆ. ಈ ವರ್ಷ ಮಾದಂಡ ಕೊಡವ ತಂಡದವರು ಎಲ್ಲಾ ಖರ್ಚನ್ನು ಭರಿಸುತ್ತಿದ್ದಾರೆ.
ಈ ಟೂರ್ನಿಯಿಂದ ಕೊಡವರಲ್ಲಿ ಒಗ್ಗಟ್ಟು ಮೂಡುತ್ತಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಪುರುಷ, ಮಹಿಳೆಯರು, ಮಕ್ಕಳು, ವೃದ್ಧರು ಹೀಗೆ ಎಲ್ಲಾ ವಯೋವಾನದವರೂ ಸ್ಟಿಕ್ ಹಿಡಿದು ಆಡುವುದು ವಿಶೇಷ. ನಿಮಗೂ ಇಂಥ ಕೌಟುಂಬಿಕ ಹಾಕಿ ಪಂದ್ಯಾಟ ನೋಡಬೇಕೆಂದಿದ್ದರೆ ಮೇ 12ರ ಭಾನುವಾರ ನಡೆಯುವ ಈ ವರ್ಷದ ಕೊಡವ ಹಾಕಿ ಚಾಂಪಿಯನ್ ಕುಟುಂಬ ತಂಡವನ್ನು ನಿರ್ಧರಿಸಲಿರುವ ಫೈನಲ್ ವೀಕ್ಷಿಸಲು ವಿರಾಜಪೇಟೆಯಿಂದ 6 ಕಿ.ಮೀ. ದೂರದ ಬಾಳುಗೋಡಿಗೆ ಬನ್ನಿ. ಹಾಕಿ ನಾಡಿನ ಹೆಮ್ಮೆಯ ಕೊಡವರು ನಿಮ್ಮ ಸ್ವಾಗತಕ್ಕೆ ಸಿದ್ಧರಿರುತ್ತಾರೆ.
3,500 ಆಟಗಾರರು!
ಕೊಡವರ ಕುಟುಂಬಗಳಲ್ಲಿನ ಹಾಕಿಪಟುಗಳು ವರ್ಷದಲ್ಲಿ ಒಮ್ಮೆ ನಡೆಯುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಪಾಲ್ಗೊಳ್ಳುತ್ತಾರೆ. ಊರಿನ ಎರಡು ಮೈದಾನಗಳಲ್ಲಿ ನಿತ್ಯ 8 ಪಂದ್ಯಾಟಗಳು ನಡೆಯುತ್ತವೆ. ಇದು ಒಟ್ಟು 26 ದಿನಗಳ ಟೂರ್ನಿ. ಈ ಬಾರಿ 225 ತಂಡಗಳ 3,500 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಕೊಡವರಂಥ ಒಂದೇ ಜನಾಂಗದಲ್ಲಿ ಇಷ್ಟೊಂದು ಹಾಕಿ ಪಟುಗಳಿರುವುದು ದಕ್ಷಿಣ ಭಾರತದ ಮಟ್ಟಿಗೆ ದಾಖಲೆಯೇ ಸರಿ. ಭಾರತದಲ್ಲಿ ಪಂಜಾಬಿಗಳನ್ನು ಬಿಟ್ಟರೆ ಕೊಡವ ಜನಾಂಗದಲ್ಲಿಯೇ ಅತ್ಯಧಿಕ ಹಾಕಿ ಆಟಗಾರರಿದ್ದಾರೆ.
- ಅನಿಲ್ ಎಚ್.ಟಿ.
anilmadikeri@gmail.com