ಸಚಿನ್ ತೆಂಡೂಲ್ಕರ್ಹುಟ್ಟುಹಬ್ಬಕ್ಕೆ ಸಿದ್ಧತೆ
ಕೋಲ್ಕತಾ: ಭಾರತ ಕ್ರಿಕೆಟ್ನ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಬುಧವಾರ ತಮ್ಮ 40ನೇ ವಸಂತಕ್ಕೆ ಕಾಲಿಡುತ್ತಿದ್ದು, ಕೋಲ್ಕತಾ ನೈಟ್ರೈಡರ್ಸ್ ವಿರುದ್ಧದ ಪಂದ್ಯಕ್ಕಾಗಿ ಇಲ್ಲಿಗೆ ಆಗಮಿಸಿರುವ ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ಸಚಿನ್ ಬೆಳಗ್ಗೆ ತಂಡಗಳಿರುವ ಹೋಟೆಲ್ನಲ್ಲಿ ಮಾಧ್ಯಮಗಳ ಮುಂದೆ ಕೇಕ್ ಕತ್ತರಿಸುವ ಮೂಲಕ ತಮ್ಮ ದಿನವನ್ನು ಆರಂಭಿಸಲಿದ್ದು, ನಂತರ ಮಾಧ್ಯಮದವರ ಜತೆ ಮಾತನಾಡಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ವ್ಯವಸ್ಥಾಪಕ ತಿಳಿಸಿದ್ದಾರೆ. ಹುಟ್ಟುಹಬ್ಬದ ವೇಳೆ ನೀತಾ ಅಂಬಾನಿ ಜತೆಗೆ ಸಚಿನ್ ಪತ್ನಿ ಅಂಜಲಿ ಸೇರಿಕೊಳ್ಳುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪ್ರತಿವರ್ಷ ಸಚಿನ್ ತಮ್ಮ ಹುಟ್ಟುಹಬ್ಬವನ್ನು ಗೌಪ್ಯವಾಗಿ ಆಚರಿಸಲು ಇಚ್ಛಿಸುತ್ತಾರೆ ಅಲ್ಲದೇ ಅವರು ಪಾರ್ಟಿ ಹಾಗೂ ಹೆಚ್ಚು ಮೋಜನ್ನು ಇಚ್ಛಿಸುವುದಿಲ್ಲ ಎಂದು ಸಚಿನ್ ಆಪ್ತರೊಬ್ಬರು ತಿಳಿಸಿದ್ದಾರೆ. ನಂತರ ರಾತ್ರಿ 8ಕ್ಕೆ ಆರಂಭವಾಗಲಿರುವ ಪಂದ್ಯಕ್ಕೂ ಮುನ್ನ, ಬಂಗಾಳ ಕ್ರಿಕೆಟ್ ಅಸೋಸಿಯೇಶನ್ (ಸಿಎಬಿ) ಅವರು ಆಯೋಜನೆಯಂತೆ ಸಚಿನ್ 40 ಪೌಂಡ್ ತೂಕದ ಕೇಕ್ ಕತ್ತರಿಸಲಿದ್ದಾರೆ.