ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂಡಿಯಾ ಓಪನ್: ದ್ವಿತೀಯ ಸುತ್ತಿಗೆ ಸೈನಾ

Vishwanath S
Updated On : 25 Apr 2013, 12:09 pm

ನವದೆಹಲಿ: ಭಾರತದ ಅಗ್ರ ಶ್ರೇಯಾಂಕದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಇಂಡಿಯಾ ಓಪನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ಇಂಡೋನೇಷ್ಯಾದ ಬೆಲೆಟ್ರಿಕ್ಸ್ ಮನುಪುಟಿ ಅವರನ್ನು 21-12, 21-15 ಅಂತರದಲ್ಲಿ ಸೋಲಿಸಿದರು.
ಆಕರ್ಷಕ ಸ್ಮ್ಯಾಷ್‌ಗಳಿಂದ ಪಂದ್ಯದ ಮೊದಲ ಸೆಟ್‌ನಲ್ಲಿ ಎದುರಾಳಿ ಮೇಲೆ ಹಿಡಿತ ಸಾಧಿಸಿದ ಸೈನಾ ನೆಹ್ವಾಲ್, ಆ ಸೆಟ್‌ನಲ್ಲಿ ಅನಾಯಾಸ ಜಯ ಗಳಿಸಿದರು. ಆದರೆ, ದ್ವಿತೀಯ ಸೆಟ್‌ನಲ್ಲಿ ಸೈನಾಗೆ ಬೆಲೆಟ್ರಿಕ್ಸ್ ಸೆಡ್ಡು ಹೊಡೆದರು. ದ್ವಿತೀಯ ಸೆಟ್‌ನ ಆರಂಭದಲ್ಲಿ ಮುಂದಿದ್ದ ಸೈನಾ ಅವರನ್ನು ಏಳು ನೇರ ಅಂಕಗಳ ಮೂಲಕ ಹಿಂದಿಕ್ಕಿದ ಬೆಲೆಟ್ರಿಕ್ಸ್, 8-6ರ ಅಂತರದ ಮುನ್ನಡೆ ಕಂಡುಕೊಂಡರು. ಆದರೆ, ಸೈನಾ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಅವರೂ ಬೆಲೆಟ್ರಿಕ್ಸ್‌ಗೆ ಎದುರೇಟು ನೀಡಲು ಆರಂಭಿಸಿದರು. ಒಂದು ಹಂತದಲ್ಲಿ ಬೆಲೆಟ್ರಿಕ್ಸ್ ಹಾಗೂ ತಮ್ಮ ನಡುವಿನ ಅಂಕಗಳ ಅಂತರವನ್ನು 10-10ಕ್ಕೆ ತಂದು ನಿಲ್ಲಿಸಿ ಸಮಬಲ ಸಾಧಿಸಿದರು.
ಇಲ್ಲಿಂದ ಮುಂದಕ್ಕೆ, ಸೈನಾ ಅವರ ಆಟ ಜೋರಾಯಿತು. ಬಿರುಸಿನ ಪ್ರದರ್ಶನ ನೀಡಿದ ಅವರು, ಈ ಸೆಟ್‌ನಲ್ಲಿ ಎದುರಾಳಿ ವಿರುದ್ಧ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಅತ್ತ, ಬೆಲೆಟ್ರಿಕ್ಸ್ ಅವರೂ ಜಯಕ್ಕಾಗಿ ಪ್ರಯತ್ನಿಸಿದರಾದರೂ, ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ. ಅಂತಿಮವಾಗಿ, ಸೈನಾ ದ್ವಿತೀಯ ಸೆಟ್‌ನಲ್ಲಿ 21-15 ಅಂತರದಲ್ಲಿ ಜಯ ಸಾಧಿಸಿ, ಪಂದ್ಯದಲ್ಲೂ ಗೆಲವು ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement