ಜನ್ಮದಿನ ಸಂಭ್ರಮದಲ್ಲಿ ಮಿಂದ ಸಚಿನ್
ಕೋಲ್ಕತಾ: ಸಚಿನ್ ಭಾವುಕರಾಗಿದ್ದರು... ಅವರ ಮೊಗದಲ್ಲಿ ಆಂದ್ರತೆ, ಧನ್ಯತಾಭಾವ ಎದ್ದು ಕಾಣುತ್ತಿತ್ತು... ಬುಧವಾರ ನಡೆದ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಜನರ ಅಭಿಮಾನವನ್ನು ಮನಸಾರೆ ನೆನೆದ ಅವರು, ಕೋಟ್ಯಾಂತರ ಅಭಿಮಾನಿಗಳು ಅವರ ಮೇಲಿಟ್ಟಿರುವ ನಿಸ್ವಾರ್ಥ ಪ್ರೀತಿಗೆ ಧನ್ಯವಾದ ಅರ್ಪಿಸಿದರು.
ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ಕಳೆದ 20 ವರ್ಷಗಳಿಂದಲೂ ನನ್ನ ಮೇಲೆ ಅಭಿಮಾನದ ಮಳೆ ಸುರಿಸುತ್ತಿರುವ ಭಾರತದಲ್ಲಿನ ನನ್ನ ಅಭಿಮಾನಿಗಳು ಹಾಗೂ ವಿಶ್ವದಾದ್ಯಂತ ಇರುವ ನನ್ನ ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳನ್ನು ಈ ಸಂದರ್ಭದಲ್ಲಿ ಸಲ್ಲಿಸಲು ಇಚ್ಛಿಸುತ್ತೇನೆ. ಅಭಿಮಾನಿಗಳ ಶುಭ ಹಾರೈಕೆಯಿಂದ ಮಾತ್ರವೇ ನಾನು ಈ ಮಟ್ಟಕ್ಕೆ ಬಂದಿದ್ದೇನೆ' ಎಂದರು. ಮಾತಾಡುತ್ತಾ ಭಾವುಕರಾದ ಸಚಿನ್, ಪ್ರತಿಯೊಬ್ಬ ಅಭಿಮಾನಿಯನ್ನೂ ಮಾತನಾಡಿಸಿ ಧನ್ಯವಾದ ಹೇಳಬೇಕೆಂದೆನಿಸುತ್ತದೆ. ಆದರೆ, ಅದು ಹೇಳಿದಷ್ಟು ಸುಲಭವಲ್ಲ. ಹಾಗಾಗಿ, ಒಟ್ಟಾರೆಯಾಗಿ ಎಲ್ಲರಿಗೂ ಧನ್ಯವಾದ ಹೇಳಲಿಚ್ಚಿಸುತ್ತೇನೆ ಎಂದರು.
ಇದಕ್ಕೂ ಮುನ್ನ, ಭಾರತೀಯ ಕ್ರಿಕೆಟ್‌ನ ದಂತಕಥೆಯಾದ ಲಿಟಲ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಸಚಿನ್ ಧರಿಸಿದ್ದ ಕಡುಕಪ್ಪು ಬಣ್ಣದ ಶರ್ಟ್ ಎಲ್ಲರ ಗಮನ ಸೆಳೆಯುತ್ತಿತ್ತು.
ಎಲ್ಲರ ಶುಭಹಾರೈಕೆಗಳೊಂದಿಗೆ ಕೇಕ್ ಕತ್ತರಿಸಿದ ತೆಂಡೂಲ್ಕರ್, ಮೊದಲೆರಡು ತುಣುಕುಗಳನ್ನು ಅವರ ಪತ್ನಿ ಅಂಜಲಿ ಬಾಯಿಗಿಟ್ಟರು. ಆನಂತರ, ಅಂಜಲಿ ಅವರೂ ಒಂದು ತುಣುಕನ್ನು ತೆಂಡೂಲ್ಕರ್ ಅವರಿಗೆ ತಿನ್ನಿಸಿದರು. ಈ ಚಿತ್ರಗಳನ್ನು ತೆಗೆಯಲು ಮುಗಿಬೀಳುತ್ತಿದ್ದ ಮಾಧ್ಯಮಗಳತ್ತ ತಿರುಗಿ ನೋಡಿದ ಸಚಿನ್, 'ನನ್ನ ಮುಖಕ್ಕೆ ಕೇಕ್ ಬಳಿಯಲು ದಯವಿಟ್ಟು ಅಂಜಲಿಗೆ ಹೇಳಬೇಡಿ' ಎಂದು ಚಟಾಕಿ ಹಾರಿಸಿದರು.
ಅಂಧರ ಜೊತೆ ಹುಟ್ಟುಹಬ್ಬ: ಬಂಗಾಳ ಕ್ರಿಕೆಟ್ ಸಂಸ್ಥೆ ವತಿಯಿಂದ ಸಚಿನ್ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸಚಿನ್‌ಗಾಗಿಯೇ ವಿಶೇಷವಾಗಿ ತಯಾರಿಸಲಾಗಿದ್ದ 10 ಪೌಂಡ್ ಕೇಕ್ ಅನ್ನು ಸಚಿನ್ ಕಟ್ ಮಾಡಿದರು. ಈ ಸಮಾರಂಭದಲ್ಲಿ ನರೇಂದ್ರಪುರದ ರಾಮಕೃಷ್ಣ ಮಿಷನ್ ಅಂಧ ಶಾಲೆಯ 100 ಅಂಧ ಮಕ್ಕಳನ್ನು ವಿಶೇಷವಾಗಿಆಹ್ವಾನಿಸಲಾಗಿತ್ತು.