ತೌಫೀಕ್ ಹಿದಾಯತ್‌ಗೆ ಪ್ರಣಯ್ ಶಾಕ್
ಇಂಡಿಯಾ ಓಪನ್ ಸೂಪರ್ ಸೀರಿಸ್: ಭಾರತೀಯನಿಗೆ ಮಣಿದ ಮಾಜಿ ಚಾಂಪಿಯನ್
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಎಚ್.ಎಸ್. ಪ್ರಣಯ್, ಗುರುವಾರ ನಡೆದ ಇಂಡಿಯಾ ಓಪನ್ ಸೂಪರ್ ಸೀರಿಸ್ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್‌ಒನ್ ಆಟಗಾರ ತೌಫೀಕ್ ಹಿದಾಯತ್ ಅವರನ್ನು ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದರು.
ತೀವ್ರ ಕುತೂಹಲಕರವಾಗಿದ್ದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಪ್ರಣಯ್, ಹಿದಾಯತ್ (ಇಂಡೋನೇಷ್ಯಾ) ಅವರನ್ನು 26-24, 21-9ರ ನೇರ ಸೆಟ್‌ಗಳಿಂದ ಗೆಲವು ಸಾಧಿಸಿದರು.
ಮೊದಲ ಸೆಟ್‌ನ ಆರಂಭದಲ್ಲಿ ಹಿದಾಯತ್ ಅವರದ್ದೇ ಮೈಲುಗೈ ಆಗಿತ್ತು. ಆದರೆ, ಕೆಲ ನಿಮಿಷಗಳ ನಂತರ, ಪ್ರಣಯ್ ನಿಧಾನವಾಗಿ ಇಂಡೋನೇಷ್ಯಾ ಆಟಗಾರನಿಗೆ ಸವಾಲಾಗಿ ಪರಿಣಮಿಸಿದರು. ತ್ವರಿತಗತಿಯಲ್ಲಿ ಅಂಕಗಳನ್ನು ಗಳಿಸುತ್ತಾ ಸಾಗಿದ ಅವರು ಸೆಟ್‌ನ ಒಂದು ಹಂತದಲ್ಲಿ ಹಿದಾಯತ್ ವಿರುದ್ಧ 16-16ರ ಸಮಬಲ ಸಾಧಿಸಿದರು.
ಸಮಬಲ ಸಾಧಿಸಿದ ನಂತರ, ಪ್ರಣಯ್ ಅವರ ಆಟ ಜೋರಾಯಿತು. ಎದುರಾಳಿ ಒಡ್ಡಿದ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದರು.
ಅತ್ತ, ಹಿದಾಯತ್ ಕೂಡ ಅಷ್ಟು ಸುಲಭವಾಗಿ ಮಣಿಯುವ ಹಾಗಿರಲಿಲ್ಲ. ಪ್ರಣಯ್ ವಿರುದ್ಧ ಅಕ್ಷರಶಃ ಯುದ್ಧಕ್ಕಿಳಿದ ಅವರೂ ಅಂಕಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲ ಸೆಟ್‌ನ ಇನ್ನೊಂದು ಹಂತದಲ್ಲಿ ಈ ಇಬ್ಬರೂ 23-23ರ ಸಮಬಲ ಸಾಧಿಸಿದ್ದರು.
ಆದರೆ, ಪ್ರಣಯ್ ಅವರು ಬೇಗನೇ ಎರಡು ಅಂಕಗಳನ್ನು ದಕ್ಕಿಸಿಕೊಂಡರು. ಹಾಗಾಗಿ, ಮೊದಲ ಸೆಟ್‌ನಲ್ಲಿ ಅವರು 26-24 ಅಂತರದ ಜಯ ಕಂಡರು.
ಮೊದಲ ಸೆಟ್‌ನಲ್ಲಿ ಹಿದಾಯತ್ ಆಟ ನೋಡಿದ್ದ ಪ್ರಣಯ್, ಎರಡನೇ ಸೆಟ್‌ನಲ್ಲಿ ಯಾವುದೇ ರೀತಿಯಲ್ಲೂ ಹಿದಾಯತ್ ಅವರಿಗೆ ತಮ್ಮ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡಲಿಲ್ಲ. ಪ್ರಣಯ್ ಅವರ ತೀವ್ರ ತೆರನಾದ ಹೋರಾಟದ ಮುಂದೆ, ಹಿದಾಯತ್ ಕೊಂಚ ಮಂಕಾದಂತೆ ಭಾಸವಾದರು. ಇದರ ಪರಿಣಾಮ ಅವರ ಆಟದಲ್ಲೂ ಕಾಣಿಸಿ, ಎದುರಾಳಿಗೆ ತಿರುಗೇಟು ನೀಡುವ ತೀಕ್ಷ್ಣತೆ ಕಡಿಮೆಯಾಯಿತು.
ಅವರ ಮಂದಗತಿಯ ಆಟದ ಲಾಭ ಪಡೆದ ಪ್ರಣಯ್, ಎರಡನೇ ಸೆಟ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ 10-3 ಅಂತರದಲ್ಲಿ ಮುನ್ನಡೆ ಕಂಡುಕೊಂಡರು. ಅತ್ತ, ಹಿದಾಯತ್ ಕೂಡಾ ಪ್ರಣಯ್ ಆಟಕ್ಕೆ ಸೂಕ್ತ ಉತ್ತರ ನೀಡುತ್ತಿದ್ದರೂ, ದಿಟ್ಟತನದ ಹೋರಾಟ ನೀಡುವಲ್ಲಿ ವಿಫಲರಾದರು. ತಮ್ಮ ಆಕ್ರಮಣಕಾರಿ ಆಟವನ್ನು ಕೊನೆಯವರೆಗೂ ಮುಂದುವರಿಸಿದ ಪ್ರಣಯ್, ಸುಲಭದಲ್ಲೇ ಈ ಸೆಟ್‌ನಲ್ಲಿ 21-19ರ ಜಯ ಸಾಧಿಸಿದರು.