ಸಿಂಧು ಸೆಮಿಫೈನಲ್ಗೆ
ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್...
ನವದೆಹಲಿ: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 17 ವರ್ಷದ ಆಟಗಾರ್ತಿ ಸಿಂಧು, ಜಪಾನ್ನ ಎದುರಾಳಿ ಯೂ ಹಷಿಮೋತೊ ಅವರನ್ನು 21-16, 21-16 ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು. ಇದಕ್ಕೂ ಮುನ್ನ ಕಳೆದ ವಾರ ನಡೆದ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಚೀನಾದ ಶಿಶಿಯಾನ್ ವಾಂಗ್ ಸೋಲಿಸಿದ್ದ ಸಿಂಧು, ಇಂಡಿಯಾ ಓಪನ್ನಲ್ಲೂ ತಮ್ಮ ಸಮರ್ಥ ಹೋರಾಟವನ್ನು ಮುಂದುವರಿಸಿದ್ದಾರೆ.
ಗುರುವಾರ ಸೈನಾ ನೆಹ್ವಾಲ್ ಅವರನ್ನು ಸೋಲಿಸಿದ್ದ ಹಷಿಮೋತೊ ಆಟ, ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಿಂಧು ವಿರುದ್ಧ ನಡೆಯಲಿಲ್ಲ. ಆರಂಭಿಕ ಸೆಟ್ನಲ್ಲೇ ಬಿರುಸಿನ ಹೋರಾಟಕ್ಕೆ ಮುಂದಾದ ಸಿಂಧು 11-4ರಿಂದ ಮುನ್ನಡೆ ಪಡೆದುಕೊಂಡಿದ್ದರು. ನಂತರ 19-9 ಅಂತರದಿಂದ ಎದುರಾಳಿಗೆ ದಂಗುಬಡಿಸಿದರು. ಆದರೆ, ಇನ್ನೇನು ಸಿಂಧು ಗೆದ್ದಳು ಎನ್ನುವಾಗ ಹಷಿಮೋತೊ ಸತತ ಏಳು ಅಂಕ ಗಳಿಸುವ ಮೂಲಕ ಮೇಲುಗೈ ಪಡೆಯಲು ಯತ್ನಿಸಿದರು. ಈ ಸಮಯದಲ್ಲಿ ಸಿಂಧು ಮಾಡಿದ ತಪ್ಪುಗಳು ಎದುರಾಳಿಗೆ ಅನುಕೂಲವಾಗಿ ಪರಿಣಮಿಸಿದವು. ಹೀಗಾಗಿ ಹಷಿಮೋತೊ 16-19 ಅಂತರ ಸಮೀಪಿಸಿದಂತೆ, ತಪ್ಪನ್ನು ತಿದ್ದಿಕೊಂಡ ಸಿಂಧು 21-16 ಅಂತರದಿಂದ ಜಯ ಕಂಡುಕೊಂಡರು.
ಇನ್ನು ದ್ವಿತೀಯ ಸೆಟ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಇಬ್ಬರೂ ಗೆಲ್ಲುವ ಹಂಬದಿಂದ ತೀವ್ರ ಹೋರಾಟ ನೀಡುವ ಮೂಲಕ 14-14 ಅಂತರದಿಂದ ಸಮಬಲಗೊಳ್ಳುವರೆಗೂ ಪಂದ್ಯದಲ್ಲಿ 3 ಅಂಕಗಳಿಗಿಂತ ಹೆಚ್ಚು ವ್ಯತ್ಯಾಸ ಕಂಡುಬರಲಿಲ್ಲ. ಆಗ ಸತತ ಮೂರು ಅಂಕಗಳನ್ನು ಪಡೆದ ಸಿಂಧು 17-14 ಅಂತರದಿಂದ ಮುನ್ನಡೆ ಕಂಡುಕೊಂಡರು.
ಈ ಸಮಯದಲ್ಲಿ ಇಬ್ಬರೂ ಆಟಗಾರ್ತಿಯರು ಬಿರುಸಿನ ಹೋರಾಟಕ್ಕೆ ಮುಂದಾಗುವ ಮೂಲಕ ಅಂಕ ಗಳಿಸಲು ಪ್ರಯತ್ನಿಸಿದರು. ಆದರೆ, ಸಿಂಧು ಮೇಲುಗೈ ಸಾಧಿಸಿದರು.
ಹಷಿಮೋತೊ ಈ ಹಂತದಲ್ಲಿ ಮತ್ತೆರಡು ಅಂಕ ಗಳಿಸಿದರಾದರೂ, ಎದುರಾಳಿಯನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ ಸಿಂಧು ಯಶಸ್ವಿಯಾದರು.
'ಪಂದ್ಯದಲ್ಲಿ ಎದುರಾಳಿ ತಪ್ಪು ಎಸಗಿದ್ದು ನನಗೆ ಅನುಕೂಲವಾಯಿತು' ಎಂದು ಪಂದ್ಯದ ನಂತರ ಮಾತನಾಡಿದ ಸಿಂಧು ಹೇಳಿದರು.
ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 6ನೇ ಆಟಗಾರ್ತಿ ಥಾಯ್ಲೆಂಡ್ನ ರತಚಾನೋಕ್ ಇಂತನಾನ್ ಅವರನ್ನು ಎದುರಿಸಲಿದ್ದಾರೆ. ಇಂತಾನಾನ್ ಪಂದ್ಯಾವಳಿಯಲ್ಲಿ ಈ ಮೊದಲು ನಡೆದ ಪಂದ್ಯದಲ್ಲಿ ಭಾರತದ ಅರುಂಧತಿ ಪಂತ್ವಾನೆ ಅವರನ್ನು 14-21, 21-7, 21-16 ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ.
ಪ್ರಣಯ್ಗೆ ಸೋಲು
ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದ ಎಚ್.ಎಸ್ ಪ್ರಣಯ್, ಬಿ ಸಾಯಿ ಪ್ರಣೀತ್ ಹಾಗೂ ಆರ್ಎಂವಿ ಗುರುಸಾಯಿದತ್ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು.
ಗುರುವಾರದ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ತೌಫಿಕ್ ಹಿದಾಯತ್ ಅವರನ್ನು ಸೋಲಿಸಿ ಭರವಸೆ ಮೂಡಿಸಿದ್ದ ಪ್ರಣಯ್, ಕ್ವಾರ್ಟರ್ಫೈನಲ್ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಚೀನಾದ ಚಾಂಗ್ ವೀ ವಿರುದ್ಧ 21-14, 21-19 ಸೆಟ್ಗಳಿಂದ ಸೋಲನುಭವಿಸಿದರು.
ಇನ್ನೊಂದು ಪಂದ್ಯದಲ್ಲಿ ಪ್ರಣೀತ್ ಜಪಾನ್ನ ಕೆನಿಚಿ ವಿರುದ್ಧ 21-17, 19-21, 21-11 ಸೆಟ್ಗಳ ಅಂತರದಿಂದ ಸೋಲುವ ಮುನ್ನ ಬಲಿಷ್ಠ ಹೋರಾಟ ನಡೆಸಿದರು.
ಮತ್ತೊಂದು ಪಂದ್ಯದಲ್ಲಿ ಗುರುಸಾಯಿದತ್, 7ನೇ ಶ್ರೇಯಾಂಕ ಪಡೆದಿದ್ದ ಬೂನ್ಸೇಕ್ ಪೊನ್ಸನಾ ವಿರುದ್ಧ 21-12, 11-21, 21-12 ಕೈಚೆಲ್ಲಿದರು.