ಗೆಲವಿನ ತವಕದಲ್ಲಿ ಆರ್ಸಿಬಿ
ಜೈಪುರ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗಳಿಸಿರುವ ಅಮೋಘ ಜಯದಿಂದ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋತು ಘಾಸಿಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಆರ್ಸಿಬಿ ಬೇಗುದಿ: ತನ್ನ ತವರಿನ ಪಿಚ್ಗಳಲ್ಲಿ ಆಡಿದ ಎಲ್ಲಾ ಆರೂ ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ, ಹೊರಗಿನ ಪಿಚ್ಗಳಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೂ, ಸತತವಾಗಿ ಸೋತರೆ, ಮುಂದಿನ ಹಂತಕ್ಕೆ ಹೋಗುವುದು ಆರ್ಸಿಬಿಗೆ ಕಷ್ಟವಾಗಬಹುದು.
ಅದರಲ್ಲೂ, ಶನಿವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ 58 ರನ್ಗಳ ದೊಡ್ಡ ಸೋಲು ಕಂಡಿರುವ ಆರ್ಸಿಬಿಗೆ ಹೊರಗಿನ ಪಿಚ್ಗಳಲ್ಲಿ ಗೆಲ್ಲುವ ಆತ್ಮವಿಶ್ವಾಸ ಮೂಡಬೇಕೆಂದರೆ, ಈ ಪಂದ್ಯದಲ್ಲಿ ಅದು ಜಯಗಳಿಸಲೇ ಬೇಕು. ಇಂಥಾ ಒಂದೇ ಒಂದು ಜಯ ಟಾನಿಕ್ ರೀತಿ ಕೆಲಸ ಮಾಡಬಹುದು.
ಆರ್ಸಿಬಿ ತಂಡದ ಬ್ಯಾಟಿಂಗ್ನಲ್ಲಿನ ಅಗ್ರ ನಾಲ್ವರು ಬ್ಯಾಟ್ಸ್ಮನ್ಗಳೇ ತಂಡದ ಪ್ರಮುಖ ಆಧಾರ ಸ್ತಂಭಗಳು. ಅದರಲ್ಲಿ ಕ್ರಿಸ್ ಗೇಯ್ಲ್ ಅವರು ಪ್ರಮುಖ. ಪುಣೆ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ದಾಖಲೆಯ ಅಜೇಯ 175 ರನ್ ಗಳಿಸಿದ್ದ ಅವರು ಶನಿವಾರ ನಡೆದಿದ್ದ ಮುಂಬೈ ವಿರುದ್ಧದ ಪಂದ್ಯದಲ್ಲಿ ಕ್ಲಿಕ್ ಆಗಿರಲಿಲ್ಲ. ಆದರೂ, ಪುನಃ ಅವರು ಸಿಡಿದೆದ್ದರೆ ಎದುರಾಳಿ ಬೌಲಿಂಗ್ ಅನ್ನು ಧೂಳೀಪಟ ಮಾಡಬಲ್ಲರು. ಅವರ ಜೊತೆಯಲ್ಲೇ, ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ತಕ್ಕಮಟ್ಟಿಗೆ ಆಡುವ ದಿಲ್ಷಾನ್ ಕೂಡಾ ಸಿಡಿದೆದ್ದರೆ, ತಂಡದ ಗೆಲವು ಬಹುತೇಕ ನಿಶ್ಚಿತ.
ತಂಡದ ದೊಡ್ಡ ಸಮಸ್ಯೆಯೆಂದರೆ, ಅದು ಬೌಲಿಂಗ್ ವಿಭಾಗದ್ದು. ರವಿ ರಾಮ್ಪಾಲ್, ಆರ್.ಪಿ. ಸಿಂಗ್, ಆರ್. ವಿನಯ್ ಕುಮಾರ್ ಹಾಗೂ ಜಯದೇವ್ ಉನಾದ್ಕತ್, ಮುಂಬೈ ತಂಡದ ವಿರುದ್ಧದ ಪಂದ್ಯದಲ್ಲಿ ಹೆಚ್ಚು ರನ್ ನೀಡಿದ್ದು ತಂಡದ ಸೋಲಿಗೆ ಮತ್ತೊಂದು ಪ್ರಮುಖ ಕಾರಣ. ಹಾಗಾಗಿ, ಸುಧಾರಣೆಯಾಗಬೇಕೆಂದರೆ, ಅದು ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲೇ ಆಗಬೇಕು.
ಪ್ರತೀಕಾರಕ್ಕೆ ಸಜ್ಜು?: ಏ. 20ರಂದು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿ ತಂಡ, ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತ್ತು. ಆದರೆ, ಅಲ್ಲಿಂದ ಇಲ್ಲಿಯವರೆಗೆ ರಾಜಸ್ಥಾನ ರಾಯಲ್ಸ್ನಲ್ಲಿ ಹಲವಾರು ಮಾರ್ಪಾಟುಗಳಾಗಿವೆ. ಈ ಬಾರಿ ಆರ್ಸಿಬಿಗೆ ಸೆಡ್ಡು ಹೊಡೆಯುವ ಎಲ್ಲಾ ತಾಕತ್ತು ರಾಜಸ್ಥಾನಕ್ಕಿದೆ.
ವ್ಯಾಟ್ಸನ್ ಅದ್ಭುತವಾಗಿ ಆಡುತ್ತಿದ್ದಾರೆ. ನಾಯಕ ರಾಹುಲ್ ದ್ರಾವಿಡ್ ಹಾಗೂ ಅಜಿಂಕ್ಯ ರಹಾನೆ ತಂಡದ ಅಗ್ರ ಕ್ರಮಾಂಕದಲ್ಲಿ ಉತ್ತಮ ಕಾಣಿಕೆಯನ್ನೇ ನೀಡುತ್ತಿದ್ದಾರೆ. ಈ ಮೂವರನ್ನು ಬಿಟ್ಟರೆ, ಬ್ರಾಡ್ ಹಾಡ್ಜ್, ದಿಶಾಂತ್ ಯಗ್ನಿಕ್ ಹಾಗೂ ಸ್ಟುವರ್ಟ್ ಬಿನ್ನಿ ಉತ್ತಮ ಫಾರ್ಮ್ನಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ, ವೇಗಿ ಜೇಮ್ಸ್ ಫಾಕ್ನರ್ ಅವರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಆಫ್ ಸ್ಪಿನ್ನರ್ ಅಜಿತ್ ಚಾಂಡಿಲಾ ಉತ್ತಮವಾಗಿ ಆಡುತ್ತಿದ್ದಾರೆ. ತಂಡದ ಏಕೈಕ ಸಮಸ್ಯೆಯೆಂದರೆ, ಇನಿಂಗ್ಸ್ನ ಆರಂಭದಲ್ಲಿ ಮೂಡಿಬರುವ ಆಕ್ರಮಣಕಾರಿ ಬೌಲಿಂಗ್, ತದನಂತರ ಮೊನಚು ಕಳೆದುಕೊಳ್ಳುವುದು. ಶನಿವಾರ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲೂ ಆಗಿದ್ದು ಅದೇ.
ಶುಕ್ರವಾರ ನಡೆದಿದ್ದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 8 ವಿಕೆಟ್ಗಳ ಜಯ ಸಂಪಾದಿಸಿತ್ತು. ಉತ್ತಮ ಪ್ರದರ್ಶನ ನೀಡಿದ್ದ ಬೌಲರ್ ಫಾಕ್ನರ್ 5 ವಿಕೆಟ್ ಕಬಳಿಸಿ, ಸನ್ರೈಸರ್ಸ್ಗೆ ಹೊಡೆತ ನೀಡಿದರೆ, 53 ಎಸೆತಗಳಲ್ಲಿ ಅಜೇಯ 98 ರನ್ ಗಳಿಸಿ ಶೇನ್ ವ್ಯಾಟ್ಸನ್ ರಾಜಸ್ಥಾನ ಗೆಲವನ್ನು ಸುಲಭವಾಗಿಸಿದ್ದರು. ಸನ್ರೈಸರ್ಸ್ ವಿರುದ್ಧ ಪ್ರಚಂಡ ಜಯ ಪಡೆದ ಹುಮ್ಮಸ್ಸಿನಲ್ಲಿರುವ ರಾಜಸ್ಥಾನ ರಾಯಲ್ಸ್ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಅದೇ ರೀತಿಯ ಉತ್ಸಾಹದಲ್ಲೇ ಕಣಕ್ಕಿಳಿಯಲಿದೆ. ಅದೂ ಅಲ್ಲದೇ, ತವರಿನಲ್ಲೇ ಅದು ಆರ್ಸಿಬಿಯನ್ನು ಎದುರಿಸುತ್ತಿರುವುದು ಅದಕ್ಕೆ ಮತ್ತಷ್ಟು ಆತ್ಮಸ್ಥೈರ್ಯವನ್ನು ತುಂಬಿದೆ.