ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

2ನೇ ಸುತ್ತಿಗೆ ಸಾಯಿ, ಶ್ರೀಕಾಂತ್

ಮಲೇಷ್ಯಾ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ದಿನ ಭಾರತಕ್ಕೆ ಮಿಶ್ರಫಲ ಸಿಕ್ಕಿದೆ.

Mainashree
Updated On : 1 May 2013, 11:46 am

ನವದೆಹಲಿ: ಮಲೇಷ್ಯಾ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ದಿನ ಭಾರತಕ್ಕೆ ಮಿಶ್ರಫಲ ಸಿಕ್ಕಿದೆ.
ಮಲೇಷ್ಯಾದ ಕೌಲಾಲಂಪುರ್ದಲ್ಲಿ ಆರಂಭವಾದ ಪಂದ್ಯಾವಳಿಯ ಮೊದಲ ದಿನ ಮಂಗಳವಾರ ನಡೆದ ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಭಾಗವಹಿಸಿದ್ದ ಭಾರತೀಯ ಆಟಗಾರರಲ್ಲಿ ಆರ್.ಎಂ.ವಿ. ಗುರುಸಾಯಿದತ್ ಹಾಗೂ ಕೆ. ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ತಮ್ಮ ಪಂದ್ಯಗಳಲ್ಲಿ ಜಯ ಸಾಧಿಸಿದರು.
ಆದರೆ, ಭಾರತದ ಮತ್ತಿತರ ಬ್ಯಾಡ್ಮಿಂಟನ್ ತಾರೆಗಳಾದ ಆಸ್ಕರ್ ಬನ್ಸಾಲ್ ಹಾಗೂ ಅಭಿಮನ್ಯು ಸಿಂಗ್ ದ್ವಿತೀಯ ಸುತ್ತಿಗೆ ಕಾಲಿಡುವಲ್ಲಿ ವಿಫಲರಾಗಿ, ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿದರು.
ಗುರು ಗೆಲವು: ಪಂದ್ಯಾವಳಿಯಲ್ಲಿ 11ನೇ ಶ್ರೇಯಾಂಕ ಪಡೆದಿರುವ ಗುರುಸಾಯಿದತ್ ಅವರು ಸಿಂಗಪೂರ್ನ ಚಾವೊ ಹೌಂಗ್ ಅವರ ವಿರುದ್ಧ ಜಯ ಗಳಿಸಿದರು. ಸುಮಾರು 47 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗುರುಸಾಯಿದತ್ ಅವರಿಗೆ 21-19, 14-21, 21-17ರ ಅಂತರದಲ್ಲಿ ಜಯ ಲಭಿಸಿತು.
ಶ್ರೀಕಾಂತ್, ಸಮೀರ್ಗೆ ಜಯ: ದಕ್ಷಿಣ ಕೊರಿಯಾದ ಸಂಗ್ ಮಿನ್ ಪಾರ್ಕ್ ಅವರನ್ನು ಎದುರಿಸಿದ ಶ್ರೀಕಾಂತ್, 21-13, 21-11 ಅಂತರದಲ್ಲಿ ಜಯ ಸಾಧಿಸಿದರೆ, ಅತ್ತ, ಸಮೀರ್ ಅವರು, ಮಲೇಷ್ಯಾದ ವೈ ಜಿಯಾನ್ ಐ ಅವರನ್ನು 21-10, 21-9 ಅಂತರದಲ್ಲಿ ಸೋಲಿಸಿ, ದ್ವಿತೀಯ ಸುತ್ತಿಗೆ ಕಾಲಿಟ್ಟರು.
ಶರಣಾದ ಬನ್ಸಾಲ್, ಅಭಿಮನ್ಯು: ಆಸ್ಕರ್ ಬನ್ಸಾಲ್ ಹಾಗೂ ಮಲೇಷ್ಯಾದ ಬೆರಿನೊ ಜಿಯಾನ್ನ್ ತ್ಝೆ ವೊಂಗ್ ನಡುವಿನ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿತ್ತು. 36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬನ್ಸಾಲ್ ಅವರು ವೊಂಗ್ ಅವರಿಗೆ ತೀವ್ರವಾಗಿ ಪೈಪೋಟಿ ನೀಡಿದರಾದರೂ, 21-7, 16-21, 15-21 ಅಂತರದಲ್ಲಿ ಶರಣಾಗಬೇಕಾಯ್ತು.
ಅಭಿಮನ್ಯು ಹಾಗೂ ಹಾಂಕಾಂಗ್ನ ಯಾನ್ ಕಿಟ್ ಚಾನ್ ನಡುವೆ ನಡೆದ ಮತ್ತೊಂದು ಪಂದ್ಯದಲ್ಲಿ ಅಭಿಮನ್ಯು ಅವರು ಪಂದ್ಯದಿಂದ ಹಿಂದೆ ಸರಿದರು. ಈ ಕಾರಣದಿಂದ, ಯಾನ್ ಅವರಿಗೆ ದ್ವಿತೀಯ ಸುತ್ತಿಗೆ ವಾಕ್-ಓವರ್ ಸಿಕ್ಕಿತು.
ಪ್ರಣಯ್ ದ್ವಿತೀಯ ಸುತ್ತಿಗೆ: ಈ ಎಲ್ಲಾ ಪಂದ್ಯಗಳಿಗೂ ಮುನ್ನ ಭಾರತದ ಮತ್ತೊಬ್ಬ ಆಟಗಾರ ಪ್ರಣವ್ ಹಾಗೂ ಟಾಮಿ ಸಗಿಯಾರ್ತೊ ಅವರ ನಡುವೆ ನಡೆದ ಪಂದ್ಯದ ವೇಳೆ ಟಾಮಿ ಅವರು ಪಂದ್ಯದಿಂದ ಹಿಂದೆ ಸರಿದರು.
ಇದರಿಂದ, ಪ್ರಣಯ್ ಅವರಿಗೆ ದ್ವಿತೀಯ ಸುತ್ತಿಗೆ ವಾಕ್-ಓವರ್ ಲಭಿಸಿತು. ಬುಧವಾರ ನಡೆಯಲಿರುವ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು, ಸ್ಥಳೀಯ ಪ್ರತಿಭೆ ಇಸ್ಕಾಂದರ್ ಜುಲ್ಕಾರ್ನೈನ್ ಝೈನುದ್ದೀನ್ ಅವರನ್ನು ಎದುರಿಸಲಿದ್ದಾರೆ.
ಸಿಂಧು ಅಭಿಯಾನ: ಪಂದ್ಯಾವಳಿಯ ಅಗ್ರ ಶ್ರೇಯಾಂಕಿತೆ ಪಿ.ವಿ. ಸಿಂಧು, ಬುಧವಾರ ಮಹಿಳೆಯರ ವಿಭಾಗದ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ. ಸಿಂಗಪೂರ್ನ ಜಿಯಾವುನ್ ಚೆನ್, ಸಿಂಧು ಅವರಿಗೆ ಮುಖಾಮುಖಿಯಾಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement