ಚೆಸ್: ಜಂಟಿ 3ನೇ ಸ್ಥಾನದಲ್ಲಿ ಆನಂದ್
ಸೇಂಟ್ ಪೀಟರ್ಸ್ಬರ್ಗ್ (ರಷ್ಯಾ): ಉತ್ತಮ ಪ್ರದರ್ಶನದ ಮೂಲಕ ಸರಿಯಾದ ಸಮಯದಲ್ಲಿ ಗೆಲುವಿನ ಲಯ ಕಾಣುತ್ತಿರುವ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ ಅಲಿಖೆನ್ ಸ್ಮಾರಕ ಚೆಸ್ ಪಂದ್ಯಾವಳಿಯ 7ನೇ ಸುತ್ತಿನಲ್ಲಿ ಲಾರೆಂಟ್ ಫ್ರೆಸಿನೆಟ್ ವಿರುದ್ಧ ಜಯ ಸಾಧಿಸಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆನಂದ್ ಜಯ ಸಾಧಿಸುವುದರೊಂದಿಗೆ ಪಂದ್ಯಾವಳಿಯಲ್ಲಿ 4 ಅಂಕಗಳನ್ನು ಪಡೆಯುವ ಮೂಲಕ ಜಂಟಿ 3ನೇ ಸ್ಥಾನದಲ್ಲಿದ್ದಾರೆ.
10 ಆಟಗಾರರ ಈ ಪಂದ್ಯಾವಳಿಯಲ್ಲಿ ಇನ್ನು ಎರಡು ಸುತ್ತುಗಳು ಬಾಕಿ ಇದ್ದು, ಅದರಲ್ಲಿ ಒಂದು ಬಿಳಿಕಾಯಿ ಪಂದ್ಯವನ್ನು ಹೊಂದ್ದಿದ್ದಾರೆ. ಹಾಗಾಗಿ ಆನಂದ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಇನ್ನು ಉಳಿದ ಪಂದ್ಯದಲ್ಲಿ ಮೈಕಲ್ ಆ್ಯಡಮ್ಸ್ ತಮ್ಮ ಎದುರಾಳಿ ಮ್ಯಾಕ್ಸಿಮ್ ಲಾಗ್ರೆವ್ ವಿರುದ್ಧ ಡ್ರಾ ಸಾಧಿಸಿದ್ದಾರೆ. ಬೊರಿಸ್ ಜೆಲ್ಫೆಡ್ ತಮ್ಮ ಪ್ರತಿಸ್ಫರ್ಧಿ ಡಿಂಗ್ ಲಿರೆನ್ ವಿರುದ್ಧ ಜಯ ಸಾಧಿಸಿದ್ದಾರೆ. ಪೀಟರ್ ಸ್ವಿಡ್ಲರ್ ತಮ್ಮ ಎದುರಾಳಿ ವ್ಲಾಡ್ಮಿರ್ ಕ್ರಾಮ್ನಿಕ್ ವಿರುದ್ಧ ಡ್ರಾ ಸಾಧಿಸಿದ್ದಾರೆ. ನಿಕಿತ ವಿಟುಗೊವ್ ತಮ್ಮ ಎದುರಾಳಿ ಲೆವೊನ್ ಆರೋನಿಯನ್ ವಿರುದ್ಧ ಡ್ರಾ ಸಾಧಿಸಿದ್ದಾರೆ.