ಸಿಹಿ ಕಳೆದುಕೊಂಡ ಸಕ್ಕರೆ!
ಯಾರೇನೇ ಹೇಳಿದರೂ ಯುಎಸ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ನನ್ನ ಹೆಸರು ಬದಲಾಯಿಸಲ್ಲ ಎಂದು ಮಾರಿಯ ಶರಪೋವಾ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಆಕೆ ಯುಎಸ್ ಓಪನ್‌ನಿಂದಲೇ ಹೊರನಡೆಯಬೇಕಾಗಿದ್ದು ವಿಪರ್ಯಾಸ. ಅಂದಹಾಗೆ, ಇದು ಯಾರ ಕೈವಾಡವೂ ಅಲ್ಲ. ಇತ್ತೀಚೆಗಷ್ಟೇ, ಮಾರಿಯಾ ಶರಪೋವಾ ಅವರು ತಮ್ಮ ಸಿಹಿ ತಿನಿಸು ತಯಾರಿಕಾ ಕಂಪನಿಯ ಹೆಸರಾದ ಶುಗರ್‌ಪೋವಾ ಹೆಸರಿನಲ್ಲೇ ಯುಎಸ್ ಓಪನ್ ಆಡುತ್ತಾರೆ. ಆ ಮೂಲಕ, ತಮ್ಮ ಬ್ರ್ಯಾಂಡ್ ಅನ್ನು ಜಗಜ್ಜಾಹೀರು ಮಾಡುತ್ತಾರೆ ಎಂಬ ವರದಿಗಳು ಬಂದಿದ್ದವು. ಆದರೆ, ಮಾರಿಯಾ ಇದನ್ನು ಒಪ್ಪಿರಲಿಲ್ಲ. ಅಯ್ಯೋ ಇದೆಲ್ಲಾ ಗಾಳಿಸುದ್ದಿ. ಶರಪೋವಾ ನಮ್ಮ ಮನೆತನದ ಹೆಸರು. ಅದನ್ನು ಟೂರ್ನಿಗಳಲ್ಲಿ ಬದಲಾಯಿಸಲಾರೆ ಎಂದು ಸ್ಪಷ್ಟನೆ ಕೊಟ್ಟ ಮರುದಿನವೇ ಆಕೆ ಭುಜದ ಗಾಯಕ್ಕೊಳಗಾಗಿ ಯುಎಸ್ ಓಪನ್‌ನಿಂದ ಆಚೆ ನಡೆಯಬೇಕಾಯಿತು. ಅವರ ಸ್ಪಷ್ಟನೆಗೂ, ಪಂದ್ಯಾವಳಿಯಿಂದ ಅವರ ನಿರ್ಗಮನಕ್ಕೂ ಯಾವುದೇ ನಂಟಿಲ್ಲ. ಆದರೆ, ಅಮೆರಿಕದಲ್ಲಿರುವ ಆಕೆಯ ಸೌಂದರ್ಯಾರಾಧಕರಿಗೆ ಆಕೆಯ ಅಂದದ ಆಟ ನೋಡಲು ಅವಕಾಶ ಸಿಗಲಿಲ್ಲವಷ್ಟೇ.