ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹರಾಜೂ ರೋಚಕ!

Mainashree
Updated On : 21 Dec 2013, 11:45 am

ಐಪಿಎಲ್- ರೋಚಕ ಪಂದ್ಯಗಳ ಗೊಂಚಲು. ಮುಂದಿನ ಐಪಿಎಲ್ ಆವೃತ್ತಿಗೆ ಇನ್ನು ನಾಲ್ಕೇ ತಿಂಗಳು ಬಾಕಿ. ಈಗಲೇ ಕಾವು ಆರಂಭಗೊಂಡಿದೆ. ಅದೂ ಆಟಗಾರರ ಹರಾಜು ಪ್ರಕ್ರಿಯೆ ಮೂಲಕ...
ವಿಶ್ವದ ಶ್ರೇಷ್ಠ ಟಿ20 ಕ್ರಿಕೆಟಿಗರನ್ನು ಒಟ್ಟಿಗೆ ಸೇರಿಸಿ 2 ತಿಂಗಳು ಅಭಿಮಾನಿಗಳಿಗೆ ಮನರಂಜನೆ ನೀಡುವ ಪಂದ್ಯಾವಳಿ ಐಪಿಎಲ್. ಇದರ ಹರಾಜು ಕೂಡ ಪಂದ್ಯಗಳಷ್ಟೇ ಕುತೂಹಲ ಅರಳಿಸುವಂಥದ್ದು. 3 ವರ್ಷಗಳಿಗೊಮ್ಮೆ ಎಲ್ಲ ತಂಡಗಳ ಆಟಗಾರರಿಗೆ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ, ಐಪಿಎಲ್ ಆಡಳಿತ ಮಂಡಳಿ ಕೆಲವು ಬದಲಾವಣೆ ತಂದಿದೆ. ಇಷ್ಟು ದಿನ ಅಮೆರಿಕನ್ ಡಾಲರ್‌ನಲ್ಲಿ ನಡೆಯುತ್ತಿದ್ದ ಆಟಗಾರರ ಬಿಡ್ಡಿಂಗ್, ಇನ್ನು ಮುಂದೆ ಭಾರತೀಯ ರುಪಾಯಿ ಲೆಕ್ಕದಲ್ಲಿ ನಡೆಯಲಿದೆ.

ರಿಟೇನ್ ಪ್ರಕ್ರಿಯೆ
2011ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ತಂಡಗಳ ಪ್ರಮುಖ ಆಟಗಾರರು ಬಿಡ್ಡಿಂಗ್‌ಗೆ ಕಳುಹಿಸಲಾಗಿದ್ದು, ಕೆಲವು ಆಟಗಾರರನ್ನು ರಿಟೇನ್ ಮಾಡಿಕೊಳ್ಳಲಾಗಿತ್ತು. ಈ ರಿಟೇನ್ ಪದ್ಧತಿಯಲ್ಲಿ ಪ್ರತಿ ತಂಡ ನಾಲ್ವರು ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಬಹುದಿತ್ತು. ಅದರಲ್ಲಿ ಒಬ್ಬ ವಿದೇಶಿ ಹಾಗೂ ಮೂವರು ಭಾರತೀಯ ಆಟಗಾರರಾಗಿರಬೇಕಿತ್ತು.

5 ಆಟಗಾರರ ರಿಟೇನ್
ಮುಂದಿನ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪ್ರತಿ ಫ್ರಾಂಚೈಸಿ ತನ್ನ ತಂಡದಲ್ಲಿ ಐವರು ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಆದರೆ ಈ ಐವರಲ್ಲಿ ಎಷ್ಟು ಮಂದಿ ವಿದೇಶಿ ಹಾಗೂ ಎಷ್ಟು ದೇಶಿ ಆಟಗಾರರನ್ನು ಉಳಿಸಿಕೊಳ್ಳಬೇಕೆಂಬ ಬಗ್ಗೆ ನಿರ್ಧಾರ ಆಗಿಲ್ಲ. ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಐವರೂ ವಿದೇಶಿ ಆಟಗಾರರು, ಐವರು ಭಾರತೀಯ ಅಥವಾ ಮಿಶ್ರವಾಗಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು.

ವೇತನ ಮೊತ್ತ ಏರಿಕೆ
ಈ ಬಾರಿಯ ಬಿಡ್ಡಿಂಗ್‌ನಲ್ಲಿ ಫ್ರಾಂಚೈಸಿಗಳಿಗೆ ಆಟಗಾರರ ವೇತನ ಮೊತ್ತದಲ್ಲಿ ಏರಿಕೆ ಮಾಡಿದ್ದು, ರು. 60 ಕೋಟಿಗೆ (10 ಮಿಲಿಯನ್ ಡಾಲರ್) ಹೆಚ್ಚಿಸಿದೆ. ಅಲ್ಲದೆ ಮುಂದಿನ 3 ವರ್ಷಗಳ ಕಾಲ ಪ್ರತಿ ಫ್ರಾಂಚೈಸಿಗಳ ವೇತನ ಮೊತ್ತದಲ್ಲಿ ಶೇ.10ರಷ್ಟು ಮೊತ್ತ ಏರಿಕೆ ಮಾಡಲು ನಿರ್ಧರಿಸಿದೆ. ಮೊದಲ ಆಟಗಾರನಿಗೆ ರು. 12.5 ಕೋಟಿ, 2ನೇ ಆಟಗಾರನಿಗೆ ರು. 9.5 ಕೋಟಿ, 3ನೇ ಆಟಗಾರನಿಗೆ ರು. 7.5 ಕೋಟಿ, 4ನೇ ಆಟಗಾರನಿಗೆ ರು. 5.5 ಕೋಟಿ ಹಾಗೂ 5ನೇ ಆಟಗಾರನಿಗೆ ರು. 4 ಕೋಟಿಯಷ್ಟು ಹಣವನ್ನು ಆಟಗಾರರ ವೇತನ ಮೊತ್ತದಲ್ಲಿ ಕಡಿತಗೊಳಿಸಲಾಗುವುದು.
ಒಂದು ತಂಡ ಐವರು ಆಟಗಾರರನ್ನು ಉಳಿಸಿಕೊಂಡರೆ, ತಮ್ಮ ವೇತನ ಮೊತ್ತದಲ್ಲಿ ರು. 39 ಕೋಟಿ ಹಣ ಕಡಿತಗೊಳ್ಳಲಿದ್ದು, ತಂಡದ ಉಳಿದ ಆಟಗಾರರನ್ನು ಉಳಿದ ರು. 21 ಕೋಟಿಯಲ್ಲಿ ಖರೀದಿಸಬೇಕಾಗುತ್ತದೆ.

ಹರಾಜಿನಲ್ಲಿ ರಣಜಿ ಆಟಗಾರರು
ದೇಶಿ ಆಟಗಾರರಿಗೆ ಹರಾಜಿನಲ್ಲಿ ಅವಕಾಶ ನೀಡಿರುವುದೂ ಈ ಬಾರಿಯ ವಿಶೇಷ. ರಣಜಿ ಸೇರಿದಂತೆ ಭಾರತದ ಪ್ರಥಮ ದರ್ಜೆ ಕ್ರಿಕೆಟರ್‌ಗಳಿಗೂ ಬಿಡ್ಡಿಂಗ್‌ನಲ್ಲಿ ಅವಕಾಶ ನೀಡಲಾಗಿದ್ದು, ಈ ಆಟಗಾರರನ್ನು ಬಿಡ್ಡಿಂಗ್‌ನಲ್ಲಿ ಖರೀದಿಸಬೇಕಿದೆ.
ಗಮನ ಸೆಳೆದ ಜೋಕರ್ ಕಾರ್ಡ್
ಇದೇ ಮೊದಲ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಜೋಕರ್ ಕಾರ್ಡ್ ಎಂಬ ಅನುಕೂಲವನ್ನು ತಂಡದ ಫ್ರಾಂಚೈಸಿಗಳಿಗೆ ನೀಡಲಾಗಿದೆ. ಪ್ರತಿ ತಂಡವು ಬಿಡ್ಡಿಂಗ್‌ನಲ್ಲಿ 3 ಜೋಕರ್ ಕಾರ್ಡ್‌ಗಳನ್ನು ಬಳಸಿಕೊಳ್ಳಬಹುದು. ಜೋಕರ್ ಕಾರ್ಡ್ ಎಂದರೆ, ಪ್ರತಿ ಫ್ರಾಂಚೈಸಿ ತಮ್ಮ ತಂಡದ ಆಟಗಾರನೊಬ್ಬನನ್ನು  ಬಿಡ್ಡಿಂಗ್‌ಗೆ ಕಳುಹಿಸಿದ ನಂತರ ಅವನನ್ನು ಮತ್ತೆ ತಂಡಕ್ಕೆ ಕರೆದುಕೊಳ್ಳಲು ನೀಡಿರುವ ಅವಕಾಶ. ತನ್ನ ತಂಡದ ಆಟಗಾರನೊಬ್ಬ ಹರಾಜಿನಲ್ಲಿ ಅನ್ಯ ತಂಡದ ಪಾಲಾದರೆ, ಜೋಕರ್ ಕಾರ್ಡ್ ಬಳಸಿಕೊಂಡು, ಆ ಫ್ರಾಂಚೈಸಿ ಬಿಡ್ ಮಾಡಿದ ಮೊತ್ತವನ್ನು ನೀಡಿ ಅದೇ ಆಟಗಾರನನ್ನು ಮರು ಸೇರ್ಪಡೆ ಮಾಡಿಕೊಳ್ಳುವುದು. ಈ ಜೋಕರ್ ಕಾರ್ಡ್‌ನಿಂದ ಒಂದು ತಂಡ 8 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು. ಒಂದು ವೇಳೆ ಫ್ರಾಂಚೈಸಿ ತಂಡದಲ್ಲಿ ಯಾವುದೇ ಆಟಗಾರನನ್ನು ರಿಟೇನ್ ಮಾಡಿಕೊಳ್ಳದಿದ್ದರೆ, ಆ ತಂಡ 5 ಜೋಕರ್ ಕಾರ್ಡ್ ಬಳಸುವ ಅವಕಾಶ ನೀಡಲಾಗುವುದು.

ತಂಡದ ಆಟಗಾರರಲ್ಲಿ ಇಳಿಕೆ
ಐಪಿಎಲ್‌ನ 6ನೇ ಆವೃತ್ತಿವರೆಗೂ ಪ್ರತಿ ಫ್ರಾಂಚೈಸಿಗಳು ತಂಡದಲ್ಲಿ ಗರಿಷ್ಠ 33 ಆಟಗಾರರನ್ನು ಹೊಂದಿರಬೇಕಿತ್ತು. ಆದರೆ, ಇನ್ನು ಮುಂದೆ ಗರಿಷ್ಠ 27 ಆಟಗಾರರನ್ನು ಹೊಂದಿರಬೇಕು. ಇನ್ನು ಪ್ರತಿ ತಂಡ 11 ವಿದೇಶಿ ಆಟಗಾರರ ಬದಲು 9 ಆಟಗಾರರನ್ನು ಮಾತ್ರ ಹೊಂದಿರಬೇಕು.

- ಸೋಮಶೇಖರ್ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement