ಪ್ಯಾರೀಸ್: ಕಳೆದ ಏಳು ತಿಂಗಳಿನಿಂದ ಗಾಯದ ಸಮಸ್ಯೆಯಿಂದ ಬಳಲಿದ್ದ ರಫೆಲ್ ನಡಾಲ್, ಇದೀಗ ಸಂಪೂರ್ಣವಾಗಿ ಗುಣಮುಖರಾಗಿ ಈ ವಾರ ಮತ್ತೆ ಕಣಕ್ಕಿಳಿಯಲಿದ್ದಾರೆ. 11 ಬಾರಿ ಗ್ರಾನ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ನಡಾಲ್ ಕಳೆದ ವರ್ಷ ಜೂನ್‌ನಲ್ಲಿ ತಮ್ಮ ಕಡೆಯ ಪಂದ್ಯವನ್ನಾಡಿದ್ದರು. ಏಳು ತಿಂಗಳುಗಳ ಕಾಲ ಗಾಯದ ಸಮಸ್ಯೆಯಿಂದ ಬಳಲಿದ್ದ ನಡಾಲ್ ಅನೇಕ ಪ್ರಮುಖ ಟೆನಿಸ್ ಚಾಂಪಿಯನ್‌ಷಿಪ್‌ನಿಂದ ಹೊರಗುಳಿದಿದ್ದರು. ಈಗ ನಡಾಲ್ ಮತ್ತೇ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದು, ಇದೇ ವಾರ ಚಿಲೆಯಲ್ಲಿ ಆರಂಭವಾಗಲಿರುವ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಮೂಲಕ ನಡಾಲ್ ಮತ್ತೇ ತಮ್ಮ ಗೆಲುವಿನ ಲಯಕ್ಕೆ ಮರಳುವರೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ನನಗೆ ಇನ್ನೂ ಸ್ವಲ್ಪ ನೋವು ಕಾಡುತ್ತಿದ್ದು, ಆಗಾಗ ವಿಶ್ರಾಂತಿ ಪಡೆದು ಅಭ್ಯಾಸ ನಡೆಸುತ್ತಿದ್ದೇನೆ. ಹೀಗಾಗಿ ನಾನು ಆದಷ್ಟು ಬೇಗ ಕಣಕ್ಕಿಳಿದು ನನ್ನ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಈ ಚಾಂಪಿಯನ್‌ಷಿಪ್‌ನಲ್ಲಿ ನನ್ನ ಪ್ರಯತ್ನವನ್ನೇಲ್ಲ ಹಾಕಿ ಆಡುತ್ತೇನೆ. ಈ ವೇಳೆ ಮೊಣಕಾಲು ನನಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ನಡಾಲ್ ಅಭಿಪ್ರಾಯಪಟ್ಟರು.
ಈ ಪಂದ್ಯಾವಳಿ ಜೇಡಿಮಣ್ಣಿನ ಅಂಗಣದಲ್ಲಿ ನಡೆಯುತ್ತಿದ್ದು, ನನಗೆ ಸ್ವಲ್ಪ ಅನುಕೂಲವಾಗಲಿದೆ. ನಾನು ಈ ಪಂದ್ಯಾವಳಿಯಲ್ಲಿ ಧೈರ್ಯದಿಂದ ತನ್ನ ಆಟವಾಡಲು ನಾನು ಚಿಂತಿಸುತ್ತಿದ್ದು, ಬಹಳ ದಿನದಿಂದ ಹೊರಗುಳಿದಿದ್ದ ಕಾರಣ ಮತ್ತೇ ಆಟದ ಮೇಲೆ ಹಿಡಿತ ಸಾಧಿಸಲು ಈ ಪಂದ್ಯಾವಳಿ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.