ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಸೋಲಿಗೆ ಬೌಲರ್‌ಗಳ ವೈಫಲ್ಯವೇ ಕಾರಣ'

Mainashree
Updated On : 6 Feb 2013, 9:29 am

ಮುಂಬೈ: ಈ ಬಾರಿಯ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಮೊದಲ ಸುತ್ತಿನಿಂದಲೇ ಭಾರತ ನಿರ್ಗಮಿಸಿದ್ದು ತಮಗೆ ಶಾಕ್ ನೀಡಿದೆ ಎಂದು ಭಾರತ ವನಿತೆಯರ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ತಿಳಿಸಿದ್ದಾರೆ. ಮಂಗಳವಾರ ನಡೆದಿದ್ದ ಲೀಗ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಭಾರತ, ಶ್ರೀಲಂಕಾದೆದುರು 138 ರನ್‌ಗಳ ಹೀನಾಯ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ತಂಡ, ನಿಗದಿತ 50 ಓವರ್‌ಗಳಲ್ಲಿ 282 ರನ್‌ಗಳ ಭಾರೀ ಮೊತ್ತವನ್ನು ಕಲೆ ಹಾಕಿತ್ತು. ಹಾಗೆ, ಲಂಕನ್ನರನ್ನು ದೊಡ್ಡ ಮೊತ್ತ ಕಟ್ಟಲು ಬಿಟ್ಟಿದ್ದೇ ಭಾರತದ ಸೋಲಿಗೆ ಪ್ರಮುಖ ಕಾರಣ ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.
'ನಮ್ಮಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಆದರೆ, ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಉತ್ತಮವಾಗಿ ಬೌಲ್ ಮಾಡಲಿಲ್ಲ. ಅವರ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಬಾರದಿದ್ದುದು ನನಗೆ ಆಶ್ಚರ್ಯ ತಂದಿದೆ. ದುರ್ಬಲ ಪ್ರದರ್ಶನದ ಲಾಭ ಪಡೆದುಕೊಂಡ ಶ್ರೀಲಂಕಾದ ಬ್ಯಾಟರ್‌ಗಳು ನಮ್ಮ ನಿರೀಕ್ಷೆಗೂ ಮೀರಿ ದೊಡ್ಡ ಮೊತ್ತ ಪೇರಿಸಿದರು. ಲಂಕಾದ ಮೊತ್ತ 280ರವರೆಗೂ ಬಂದು ನಿಲ್ಲುತ್ತದೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ' ಎಂದು ಮಿಥಾಲಿ ತಿಳಿಸಿದರು.
'ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಹೀಗೇ ಆಗಿತ್ತು. ಆ ಪಂದ್ಯದ ಕೊನೆಯ ಓವರ್‌ಗಳಲ್ಲಿ ನಾವು ಹೆಚ್ಚಿನ ರನ್ ನೀಡಿದ್ದೆವು. ಲಂಕಾ ವಿರುದ್ಧದ ಪಂದ್ಯದಲ್ಲಿ ಅದು ಪುನರಾವರ್ತನೆಯಾಯಿತು. ಪವರ್ ಪ್ಲೇ ಇದ್ದ ಲಂಕಾದ ಇನಿಂಗ್ಸ್‌ನ ಕೊನೆಯ ಹತ್ತು ಓವರ್‌ಗಳಲ್ಲಿ ನಾವು ಯದ್ವಾತದ್ವಾ ರನ್ ನೀಡಿದ್ದು ನಮಗೆ ಹೊರೆಯಾಗಿ ಪರಿಣಮಿಸಿತು' ಎಂದು ಮಿಥಾಲಿ ತಿಳಿಸಿದರು. ಲಂಕಾ ಇನಿಂಗ್ಸ್‌ನ ಕೊನೆಯ 10 ಓವರ್‌ಗಳಲ್ಲಿ, ಲಂಕಾ ಬ್ಯಾಟರ್‌ಗಳು 94 ರನ್ ಬಾರಿಸಿದ್ದರು.
ಕ್ರೀಸ್‌ನ ಎರಡೂ ಬದಿಗಳಲ್ಲೂ ಲಂಕಾದ ಬ್ಯಾಟರ್‌ಗಳು ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದುದು, ನಮ್ಮ ಬೌಲರ್‌ಗಳ ವೈಫಲ್ಯವನ್ನು ಎತ್ತಿ ತೋರಿಸುತ್ತಿತ್ತು ಎಂದ ಮಿಥಾಲಿ, ತಂಡದ ಬೌಲಿಂಗ್ ವೈಫಲ್ಯತೆಯೇ ನಮ್ಮ ಸೋಲಿಗೆ ಕಾರಣ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement