ಬಡೆನ್ ಬಡೆನ್: ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತಮ್ಮ ಡ್ರಾ ಸರಣಿಯನ್ನು ಮುಂದುವರೆಸಿದ್ದಾರೆ. ಇಲ್ಲಿ ನಡೆಯುತ್ತಿರುವ ಗ್ರೆಂಕ್ ಕ್ಲಾಸಿಕ್ ಚೆಸ್ ಪಂದ್ಯಾವಳಿಯ ಮೂರನೇ ಸುತ್ತಿನಲ್ಲಿ ಜರ್ಮನಿಯ ಜಾರ್ಜ್ ಮೈರ್ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ. ಈ ಮೂಲಕ ಆನಂದ್ ಅವರು ಈ ಪಂದ್ಯಾವಳಿಯ ಮೂರೂ ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. ಕಪ್ಪು ಕಾಯಿಗಳನ್ನು ನಡೆಸಿದ ಆನಂದ್ ಎದುರಾಳಿ ಮೈರ್ ಅವರಿಂದ ಉತ್ತಮ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡರು. ಇನ್ನು ಇಟಲಿಯ ಫ್ಯಾಬಿಯಾನೊ ಕರ್ವಾನ ಜರ್ಮನಿಯ ಅರ್ಕಡಿಜ್ ನಾಡಿಸ್ಕ್ ವಿರುದ್ಧ ಗೆಲುವು ಸಾಧಿಸುವ ಮೂಲಕ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಈ ಮೂಲಕ ತಮ್ಮ ಅಂಕವನ್ನು 2.5ಕ್ಕೆ ಏರಿಕೆ ಮಾಡಿಕೊಂಡಿರುವ ಕರ್ವಾನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನು ಭಾರತದ ವಿಶ್ವನಾಥನ್ ಆನಂದ್ ಮೂರೂ ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು, 1.5 ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ ಆನಂದ್ ಜರ್ಮನಿಯ ಆಟಗಾರರಾದ ಅರ್ಕಡಿಜ್ ನಾಡಿಸ್ಕ್ ಹಾಗೂ ಡೇನಿಯಲ್ ಫ್ರಿಡ್ಮ್ಯಾನ್ ಅವರೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.