ಕ್ರೀಡೆ

ಫೈನಲ್ ತಲುಪಿದ ಕಾಂಗರೂ ಪಡೆ

ಮುಂಬೈ: ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಮಹಿಳಾ ತಂಡ, ಈ ಬಾರಿಯ ಮಹಿಳಾ ವಿಶ್ವಕಪ್‌ನ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 9 ವಿಕೆಟ್‌ಗಳ ಭಾರೀ ಅಂತರದಲ್ಲಿ ಸೋಲಿಸಿದ ಕಾಂಗರೂ ಪಡೆ, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ, 45.2 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ, 22.2 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ, ಜಯದ ನಗೆ ಬೀರಿತು.
ಲಂಕಾ ಅಲ್ಪ ಮೊತ್ತ: ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ, ಮೊದಲು ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಲಂಕಾ ಮಾತ್ರ ಉತ್ತಮವಾಗಿ ಇನಿಂಗ್ಸ್ ಆರಂಭಿಸಲೇ ಇಲ್ಲ. ಕೇವಲ 7 ರನ್ ಮೊತ್ತಕ್ಕೆ ಆರಂಭಿಕ ಆಟಗಾರ್ತಿಯಾದ ಯಶೋದಾ ಮೆಂಡಿಸ್ ಅವರನ್ನು ಕಳೆದುಕೊಂಡ ಲಂಕಾ, ತಂಡದ ಮೊತ್ತ 16 ರನ್ ಆಗಿದ್ದಾಗ ಚಮಾರಿ ಜಯಂಗಾನಿ, 28 ರನ್ ಮೊತ್ತವಾಗಿದ್ದಾಗ ಶಶಿಕಲಾ ಸಿರಿವರ್ಧನೆ, 41 ರನ್ ಮೊತ್ತಕ್ಕೆ ಸಂದಮಾಲಿ ಡೋಲಾವಟೆ ಅವರನ್ನು ಕಳೆದುಕೊಂಡಿತು. ಹೀಗೆ, ಐವತ್ತರ ಗಡಿ ದಾಟುವಷ್ಟರಲ್ಲಿ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಲಂಕಾ ಪರವಾಗಿ ದೀಪಿಕಾ ರಾಸಂಗಿಕಾ ದಿಟ್ಟತನದ ಹೋರಾಟ ನಡೆಸಿದರು. ಮೂರನೇ ಕ್ರಮಾಂಕದ ಅವರು, ಕ್ರೀಸ್‌ನಲ್ಲಿರುವವರೆಗೂ ಆಸೀಸ್ ಬೌಲರ್‌ಗಳಿಗೆ ಸವಾಲಾಗಿದ್ದರು. ಆದರೆ, 31ನೇ ಓವರ್‌ನಲ್ಲಿ ಅವರ ವಿಕೆಟ್ ಪತನಗೊಳ್ಳುವುದರೊಂದಿಗೆ, ಅವರ ಅವರ ಸವಾಲು ಅಂತ್ಯಗೊಂಡಿತು. ಅಂತಿಮವಾಗಿ, ಲಂಕಾ 131 ರನ್‌ಗಳಿಗೆ ಆಲೌಟ್ ಆಯಿತು.
ಆಸ್ಬೋರ್ನ್ ಉತ್ತಮ ಪ್ರದರ್ಶನ: ತಾವು ಮಾಡಿದ 10 ಓವರ್‌ಗಳಲ್ಲಿ 6 ಮೇಡನ್ ಓವರ್ ಮಾಡಿ, ಕೇವಲ 9 ರನ್ ನೀಡಿದ್ದ ಆಸೀಸ್ ತಂಡದ ಎರಿನ್ ಆಸ್ಬೋರ್ನ್ 3 ವಿಕೆಟ್ ಕಬಳಿಸಿ, ಲಂಕಾದ ಕುಸಿತಕ್ಕೆ ಪ್ರಮುಖ ಕಾರಣರಾದರು.
ಮಿಂಚಿದ ಹೇನ್ಸ್: ಲಂಕಾ ನೀಡಿದ್ದ ಸುಲಭ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ಲ್ಯಾನಿಂಗ್ ಹಾಗೂ ಹೇನ್ಸ್ ಉತ್ತಮ ಜೊತೆಯಾಟವಾಡಿ 9.4 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 55 ರನ್ ಪೇರಿಸಿದರು. ಈ ಮೊತ್ತಕ್ಕೆ ಲ್ಯಾನಿಂಗ್ ನಿರ್ಗಮಿಸಿದ ನಂತರ, ಕ್ರೀಸ್‌ಗೆ ಬಂದ ಕ್ಯಾಮೆರೂನ್, ಹೇನ್ಸ್ ಜೊತೆ ಸೇರಿ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ದರು. ಇವರಿಬ್ಬರ ಮುರಿಯದ 77 ರನ್ ಜೊತೆಯಾಟದಿಂದಾಗಿ ಆಸ್ಟ್ರೇಲಿಯಾ, 22.2 ಓವರ್‌ಗಳಲ್ಲೇ ಪಂದ್ಯದಲ್ಲಿ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 131/10 (45.2 ಓ.)
ರಾಸಂಗಿಕಾ 43 (77), ಸುರಂಗಿಕಾ 21 (46)
ಬೌಲಿಂಗ್: ಆಸ್ಬೋರ್ನ್ 9/3, ಶುಟ್ 34/2
ಆಸ್ಟ್ರೇಲಿಯಾ: 132/1 (22.2 ಓ.)ಹೇನ್ಸ್ ಅಜೇಯ 71 (61), ಲ್ಯಾನಿಂಗ್ 37 (36)
ಬೌಲಿಂಗ್: ವೀರಕ್ಕೋಡಿ 21/1
ಪಂದ್ಯಶ್ರೇಷ್ಠ: ಆಸ್ಬೋರ್ನ್ (ಆಸ್ಟ್ರೇಲಿಯಾ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!