ಫೈನಲ್‌ನಲ್ಲಿ ಮುಗ್ಗರಿಸಿದ ಅಂಕಿತ
ಇಂಧೋರ್: 74ನೇ ಕಿರಿಯರ ಮತ್ತು ಯುವ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್ ಫೈನಲ್ಸ್‌ನಲ್ಲಿ ಸೋಲು ಅನುಭವಿಸುವ ಮೂಲಕ ಅಂಕಿತಾ ದಾಸ್ ನಿರಾಸೆ ಅನುಭವಿಸಿದ್ದಾರೆ.
ಕಳೆದ ವರ್ಷ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಂಕಿತ, ತಮ್ಮ ಎದುರಾಳಿ ಅಗ್ರ ಶ್ರೇಯಾಂಕಿತೆ ಕ್ರಿಟ್ಟಿವಿಕ್ಕಾ ಸಿನ್ಹಾ ರಾಯ್ ವಿರುದ್ಧ ಸೋಲನುಭವಿಸಿದ್ದಾರೆ. ಒಂದು ಹಂತದಲ್ಲಿ 2-1ರ ಮುನ್ನಡೆಯಲ್ಲಿದ್ದ ಅಂಕಿತಾ ನಾಲ್ಕನೇ ಸುತ್ತಿನಲ್ಲಿ ಹಿನ್ನಡೆ ಅನುಭಸಿಸಿದರು. ನಂತರ ಉತ್ತಮ ಪ್ರದರ್ಶನ ನೀಡಿದ ಕ್ರಿಟ್ಟಿವಿಕ್ಕಾ ಪಂದ್ಯದಲ್ಲಿ 4-2 ಮುನ್ನಡೆ ಸಾಧಿಸಿ ಜಯಗಳಿಸಿದರು.
ಇನ್ನು ಪುರುಷರ ವಿಭಾಗದಲ್ಲಿ ಘನಸೇಖರನ್ ಸತಿಯಾನ್ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ವರ್ಷದ ಚಾಂಪಿಯನ್ ಆಗಿರುವ ಸತಿಯಾನ್ ಸಿಂಗಲ್ಸ್ ವಿಭಾಗದಲ್ಲಿ ತನ್ನ ಪ್ರತಿಸ್ಫರ್ಧಿ ತಮಿಳುನಾಡಿನ ನಿತಿನ್ ತಿರುವೆಂಗಡಮ್ ಅವರನ್ನು 4-1 ಅಂತರದಲ್ಲಿ ಮಣಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.
ಇನ್ನು ಡಬಲ್ಸ್ ವಿಭಾಗದಲ್ಲಿ ಸತಿಯಾನ್ ತನ್ನ ಜತೆಗಾರ ಸೌರವ್ ಸಾಹಾ ಅವರೊಂದಿಗೆ ತಮಿಳು ನಾಡಿನ ನಿತಿನ್ ತಿರುವೆಂಗಡಮ್ ಮತ್ತು ಸುಶ್ಮಿತ್ ಶ್ರೀರಾಮ್ ಅವರನ್ನು 4-1 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಆಂಧ್ರ ಪ್ರದೇಶದ ನಿಖತ್ ಬಾನು ಹಾಗೂ ಕರ್ಣಂ ಸ್ಫೂರ್ತಿ ಜೋಡಿಯು ತಮ್ಮ ಎದುರಾಳಿ ಜೋಡಿ ಪಿಎಸ್‌ಪಿಬಿಯ ರೀತಿ ರಿಶ್ಯಾ ಹಾಗೂ ಸುತೀರ್ಥ ಮುಖರ್ಜಿ ಅವರನ್ನು 3-2 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.